ಬಿಎಸ್ ಯಡಿಯೂರಪ್ಪ ಬಗ್ಗೆ ಲೇಟೆಸ್ಟ್ ಗಾಳಿ ಸುದ್ದಿ
ಬೆಂಗಳೂರು, ಅ.3: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಾತಿನ ಮರ್ಮ, ಮುಂದಿನ ರಾಜಕೀಯ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಅನೇಕಾನೇಕ ಪುಕಾರುಗಳು ಎದ್ದಿದೆ. ಅವುಗಳಲ್ಲಿ ಬುಧವಾರ (ಅ.3) ಸಂಜೆ ವೇಳೆಗೆ ಹರಿದಾಡುತ್ತಿರುವ ಗಾಳಿ ಸುದ್ದಿಗಳನ್ನು ಅಕ್ಷರ ಜಾಡಿಯಲ್ಲಿ ತುಂಬಿಸಿ ಕೊಡುತ್ತಿದ್ದೇವೆ.
ಯಡಿಯೂರಪ್ಪ ಅವರು ಶಿಕಾರಿಪುರ ಹಾಗೂ ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಜೊತೆ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವ ಪಕ್ಷ ಸೇರಬೇಕು. ಹೊಸ ಪಕ್ಷ ರಚನೆ, ಮುಂದಿನ ಚುನಾವಣೆ ತಂತ್ರದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರ ಆಪ್ತ ರೇಣುಕಾಚಾರ್ಯ ಅವರು ಮಾತ್ರ ಹಳೆ ರಾಗವನ್ನು ಬುಧವಾರ ಮತ್ತೊಮ್ಮೆ ಹಾಡಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಿಬೆಳೆಸಿದ್ದಾರೆ, ಹಾಗಾಗಿ ಅವರು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಯಾದಗಿರಿಯಲ್ಲಿ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಬಗ್ಗೆ ಲೇಟೆಸ್ಟ್ ಗಾಳಿ ಸುದ್ದಿಗಳತ್ತ ಕಣ್ಣೋಟ:
ಲಾಸ್ಟ್ ಚಾನ್ಸ್ : ಬಿಎಸ್ ಯಡಿಯೂರಪ್ಪ ಅವರು ಕೊನೆ ಪ್ರಯತ್ನವಾಗಿ ಬಿಜೆಪಿ ಹೈಕಮಾಂಡ್ ಜೊತೆ ಡೀಲ್ ಮಾಡಲು ಯತ್ನಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪದವಿ ಕೊಟ್ಟರೆ ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಶೋಭಾ ಕರಂದ್ಲಾಜೆ ಮತ್ತು ಲೆಹರ್ ಸಿಂಗ್ ಈ ವಿಷ್ಯವನ್ನು ಹೈಕಮಾಂಡ್ ಜೊತೆ ಡೀಲ್ ಮಾಡುತ್ತಿದ್ದಾರೆ.
ಚುನಾವಣೆ ಅಸ್ತ್ರ: ಯಡಿಯೂರಪ್ಪ ಬಣದ ಶಾಸಕರಿಗೆ 40 ಸ್ಥಾನಗಳಿಗೆ ಟಿಕೆಟ್ ನೀಡಬೇಕು. ಬಿಎಸ್ ವೈ ಕೈ ಬಿಟ್ಟರೆ ಕನಿಷ್ಠ 60 ಕ್ಷೇತ್ರಗಳಲ್ಲಿ ಪಕ್ಷ ಸೋಲನುಭವಿಸುತ್ತದೆ ಮತ್ತು 25 ಕ್ಷೇತ್ರದಲ್ಲಿ ತನ್ನ ಬೆಂಬಲ ಕಳೆದುಕೊಳ್ಳುತ್ತದೆ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಹೊಸ ಪಕ್ಷ ರಚನೆ: ಸುಮಾರು 40 ವರ್ಷದ ಬಿಜೆಪಿ ಸಖ್ಯವನ್ನು ಕಳೆದುಕೊಳ್ಳಲು ನವೆಂಬರ್ 19 ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಹೊಸ ಪಕ್ಷದ ಘೋಷಣೆ ಮಾಡಲಾಗುವುದು.
ಹೊಸ ಪಕ್ಷದ ಚಿನ್ಹೆ ಸೈಕಲ್ ಆಗಲಿದೆ. ಕಲ್ಪವೃಕ್ಷ ಚಿನ್ಹೆ ಪಡೆಯಲು ಬಿಎಸ್ ಯಡಿಯೂರಪ್ಪ ಬಯಸಿದ್ದರು ಆದರೆ, ಬೇರೆ ಪಕ್ಷಕ್ಕೆ ಈ ಚಿನ್ಹೆ ಸಿಕ್ಕಿದೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಸೈಕಲ್ ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದ್ದ ಯಡಿಯೂರಪ್ಪ ಅವರಿಗೆ ಸೈಕಲ್ ಸೂಕ್ತ ಎಂದು ಆಪ್ತರು ಹೇಳಿದ್ದಾರೆ.
ಬೇರೆ ಪಕ್ಷದ ಜೊತೆ ಮೈತ್ರಿ: ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರ ಜೊತೆ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಲು ಒಲವು ತೋರಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ 2 ಜೊತೆ ಎಸ್ ಪಿ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ ಯಡಿಯೂರಪ್ಪ ಅವರ ಬೆನ್ನ ಹಿಂದೆ ಕಾಂಗ್ರೆಸ್ ನಿಲ್ಲಲಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ವೀರಶೈವ ಸಮಾಜದ ಮುಖಂಡ ಎನಿಸಿರುವ ಯಡಿಯೂರಪ್ಪ ಸಮಾಜವಾದಿ ಪಕ್ಷ ಸೇರುವ ಮೂಲಕ ಅಲ್ಪಸಂಖ್ಯಾತರು, ದಲಿತರು, ಯಾದವರ ಮತಗಳನ್ನು ಭದ್ರಪಡಿಸಿಕೊಳ್ಳಲು ಯೋಚಿಸಿದ್ದಾರೆ.
ಮುಹೂರ್ತ ಎಂದು? : ಹೊಸ ಪಕ್ಷ ರಚನೆ ಅಥವಾ ಕಾಂಗ್ರೆಸ್ ಬೆಂಬಲಿತ ಪಕ್ಷ ಸೇರ್ಪಡೆ ಬಗ್ಗೆ ವಿಜಯ ದಶಮಿಗೂ ಮೂರು ದಿನ ಮುನ್ನ ಸ್ಪಷ್ಟ ಚಿತ್ರಣ ಸಿಗಲಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಬಿಜೆಪಿಯಿಂದ ಅಧಿಕೃತವಾಗಿ ಯಡಿಯೂರಪ್ಪ ಹೊರಬೀಳಲಿದ್ದಾರೆ.












Click it and Unblock the Notifications