ನೀರು ನಿಂತರೂ ಬೆಂಗಳೂರಿಗರು ನಿದ್ದೆಯಿಂದ ಎದ್ದಿಲ್ಲ
ಬೆಂಗಳೂರು, ಅ.3: ಎರಡು ದಿನಕ್ಕೊಂದು ಸಾರಿ ಬೆಂಗಳೂರಿನ ನಲ್ಲಿಯಲ್ಲಿ ಸುರಿಯುತ್ತಿದ್ದ ಕಾವೇರಿ 'ವಾಟರ್' ಮಂಗಳವಾರ/ಬುಧವಾರ ತೊಟ್ಟಿಕ್ಕಲಿಲ್ಲ.
ಬೆಂಗಳೂರಿಗರನ್ನು ಎಚ್ಚರಿಸಲು ಕಾವೇರಿ ರೈತ ಹಿತರಕ್ಷಣಾ ಸಮಿತಿ ಅವರು ತಿಪ್ಪಗೊಂಡನ ಹಳ್ಳಿ ಜಲಾಶಯದ ವಾಲ್ವ್ ಗಳನ್ನು ಬಂದ್ ಮಾಡಿದ್ದರು. ಆದರೆ, ಇನ್ನೂ ನಿದ್ದೆಯಿಂದ ಎಚ್ಚೆತ್ತುಕೊಳ್ಳದ ನಗರವಾಸಿಗಳು ಕಾವೇರಿ ವಿವಾದದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಪ್ರತಿ ಬಾರಿ ಕಾವೇರಿ, ಕನ್ನಡ ಪರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದ ಬೆಂಗಳೂರಿಗರು ಈ ಬಾರಿ ಸಪ್ಪೆಯಾಗಿರುವುದಕ್ಕೂ ಕಾರಣವಿದೆ. ಬೆಂಗಳೂರಿಗೆ ವಿವಿಧ ಹಂತಗಳಲ್ಲಿ ಅರ್ಕಾವತಿ, ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ ಮೂಲಕ ಕಾವೇರಿ ತಲುಪುತ್ತಾಳೆ. ಅದರೆ, ಎಷ್ಟೋ ಕಡೆ ನಲ್ಲಿ ತಿರುಗಿಸಿದರೆ ನೀರು ಮಾತ್ರ ಬರುವುದೇ ಇಲ್ಲ.
ಉದಾ: ಜಪಾನ್ ದೇಶದ ನೆರವಿನ ಸುಮಾರು 3383.70 ಕೋಟಿ ವೆಚ್ಚದ 4ನೇ ಹಂತ ಎರಡನೇ ಘಟ್ಟ ಕಾಮಗಾರಿ ಯೋಜನೆಗೆ ಸುಮಾರು 172 ಕಿ.ಮೀ ಪೈಪ್ ಲೇನ್ ಹಾಕಲಾಗಿದೆ. ಸದಾ ದುರಸ್ಥಿಯಲ್ಲೇ ಇರುವ ಈ ಕಾಮಗಾರಿ 2005ರಲ್ಲಿ ಆರಂಭವಾಗಿದ್ದು ಇನ್ನೂ ಹನಿ ನೀರು ಒದಗಿಸಿಲ್ಲ ಎಂಬುದು ನೆನಪಿರಲಿ.
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಬೆಂಗಳೂರಿಗರ ನೀರಿನ ಬವಣೆ ನೀಗಿಸಲು 100 ಕೋಟಿ ರು ಘೋಷಿಸಿದ್ದರು. ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂದು ಹೇಳಿ ಶಪಥ ಮಾಡಿದ್ದರು. ರಾಜಕಾರಣಿಗಳ ಆಟದ ನಡುವೆ ಜನತೆ ನೀರಿಲ್ಲದೆ, ಸ್ವಾಭಿಮಾನವಿಲ್ಲದೆ ಬದುಕಲು ಕಲಿತಿದ್ದಾರೆ.
ಕಾವೇರಿ ವಿವಾದದ ಬಗ್ಗೆ ಬೆಂಗಳೂರು ಜನತೆಯಲ್ಲಿ ನಿರ್ಲಕ್ಷ್ಯ, ಪರ್ಯಾಯ ನೀರು ಬಳಕೆ, ಹೋರಾಟದ ಅಗತ್ಯತೆ ಬಗ್ಗೆ ಸ್ಥೂಲ ಚಿತ್ರಣ ಇಲ್ಲಿದೆ:

ಜನತೆಯಲ್ಲಿ ನಿರ್ಲಕ್ಷ್ಯ ಏಕೆ?
ಅಷ್ಟಾಗಿ ಮನೆ ಮನೆ ನಲ್ಲಿಗಳಲ್ಲಿ ಬೆಂಗಳೂರಿನ ಗಲ್ಲಿಗಲ್ಲಲ್ಲಿ ಜನತೆ ಜೀವನದಿ ಕಾವೇರಿ ಸಿಗುತ್ತಿದ್ದರೂ, ನಗರದ ತುಂಬಾ ವಲಸೆ ಜನರು ಹಾಗೂ ಅನ್ಯಾಭಾಷಿಗರೇ ತುಂಬಿರುವುದರಿಂದ ಕಾವೇರಿ ನದಿ ಬಗ್ಗೆಯಾಗಲಿ, ನಮ್ಮ ಜೀವಜಲ ಎಲ್ಲಿಂದ ಬರುತ್ತಿದೆ. ಏಕೆ ಮುಖ್ಯ ಎಂಬುದಾಗಲಿ ತಿಳಿದುಕೊಳ್ಳುವ ವ್ಯವಧಾನ, ಅವಶ್ಯಕತೆ ಯಾರಿಗೂ ಇಲ್ಲ.
ದುಡ್ಡು ಕೊಟ್ಟರೆ ಬಿಸ್ಲೇರಿ, ಫುಡ್ ಮಾಲ್ ಗಳಲ್ಲಿ ಅಕ್ಕಿ, ಗೋಧಿ, ಸಕ್ಕರೆ ಸಿಗುವಾಗ ರೈತರು ಅವರ ಸಂಕಷ್ಟದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ಮನೋಭಾವ ಬಹುತೇಕ ನಗರವಾಸಿಗಳಲ್ಲಿ ಇದೆ. ಅದರಲ್ಲೂ ಕೆಲವರು ನೀರು ಬಿಟ್ಟಾಯಿತಲ್ಲ ಇನ್ನೂ ಹೋರಾಟ ಮಾಡಿದರೆ ಏನು ಫಲ ಎಂದು ಪ್ರಶ್ನಿಸುತ್ತಿದ್ದಾರೆ.

ಪರದಾಟ ಪ್ರತಿಕಾರವಾಗಿದೆಯೇ?
ರಾಜಾಜಿನಗರ ಸೇರಿದಂತೆ ಸುಮಾರು 26 ಲಕ್ಷ ಬೆಂಗಳೂರಿಗರು ಕುಡಿಯುವ ನೀರಿಲ್ಲದೆ ಮಾರ್ಚ್ ತಿಂಗಳಿನಿಂದ ಪರದಾಡಿದ್ದಾರೆ. ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಕಾಮಗಾರಿ ಕುಂಟುತ್ತಾ ಸಾಗಿದೆ. ಹಾರೋಹಳ್ಳಿ, ತಾತಗುಣಿ ಹಾಗೂ ತಿಪ್ಪಗೊಂಡನಹಳ್ಳಿ ಪಂಪ್ ಸ್ಟೇಷನ್ ಆಗಾಗ ಕೆಟ್ಟು ಹೋಗುತ್ತದೆ.
ಜಲಮಂಡಳಿ ಭರವಸೆಯಿಂದ ಜನರು ರೋಸಿ ಹೋಗಿದ್ದಾರೆ. ಇದು ಎಲ್ಲಡೆ ವ್ಯಾಪ್ತಿಸಿದ್ದು, ಜನರ ಪರದಾಟ ಈಗ ಪ್ರತಿಕಾರ ರೂಪ ತಾಳಿರಬಹುದು.

ಪರ್ಯಾಯ ಮಾರ್ಗ ಇಲ್ಲವೇ?
ಹೊಸ ಬಡಾವಣೆಗಳಲ್ಲಿ ಬೋರ್ ವೆಲ್ ಕೊರೆಯುವುದು, ಹಳೆ ಬೋರ್ ವೆಲ್ ದುರಸ್ತಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಪರ್ಯಾಯ ಮಾರ್ಗ ಕಂಡು ಕೊಳ್ಳಲಾಗಿದೆ. ಕಾವೇರಿ ನೀರನ್ನು ನಂಬಿಕೊಂಡರೆ ಆಗುವುದಿಲ್ಲ ಎಂಬುದು ಜನತೆಗೆ ಮನದಟ್ಟಾಗಿದೆ. ಆದರೆ, ಟ್ಯಾಂಕರಿನ ಬೆಲೆ 300 ರು. ನಿಂದ 600 ರು. 1,000 ರು ಗೂ ಏರಿಕೆಯಾದ ಉದಾಹರಣೆಗಳಿದೆ.
ಇದಲ್ಲದೆ, ಅಂತರ್ಜಲ ಕಾಯುವಿಕೆ, ಮಳೆಕೊಯ್ಲು ಮುಂತಾದ ನೀರು ಪುನರ್ ಬಳಕೆ ಮಾಡುವ ವಿಧಾನಗಳನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನೀರು ಮಾತ್ರ ಪೋಲಾಗುವುದು ತಪ್ಪುತ್ತಿಲ್ಲ.

ನೀರು ಎಲ್ಲಿಂದ ಬರುತ್ತಿದೆ? ನೀರು ಸಾಕಾಗುತ್ತಾ?
ಬೆಂಗಳೂರು ಜಲ ಮಂಡಳಿ(BWSSB) ಪ್ರತಿನಿತ್ಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯಿಂದ ಒಟ್ಟು ನಾಲ್ಕು ಹಂತಗಳಲ್ಲಿ ಸುಮಾರು 900 ಮಿಲಿಯನ್ ಲೀ ನೀರು ಹರಿಸಲಾಗುತ್ತಿದೆ. ಮಂಡ್ಯಕ್ಕಿಂತ ಹೆಚ್ಚು ಬೆಂಗಳೂರಿಗರೆ ಕಾವೇರಿ ನೀರು ಕುಡಿಯುತ್ತಿದ್ದಾರೆ.
ಬೆಂಗಳೂರಿನ 1 ಕೋಟಿ 90 ಲಕ್ಷ ಮಂದಿಗೆ ವರ್ಷಕ್ಕೆ 19 ಟಿಎಂಸಿ ನೀರು ಬೇಕಾಗುತ್ತದೆ. ಕೆಆರ್ ಎಸ್ ನ 26 ಟಿಎಂಸಿಯಲ್ಲಿ ಎಲ್ಲಿಗೆ ಅಂತಾ ನೀರು ಹರಿಸುವುದು? ಈಗ ಬೆಂಗಳೂರಿಗೆ ಬರುತ್ತಿರುವ ನೀರು ನಿಂತರೆ ಪರಿಸ್ಥಿತಿ ಹದಗೆಡಲಿದೆ. ಏಕೆಂದರೆ ನಗರದಲ್ಲಿ ಕೆರೆಗಳನ್ನು ನುಂಗಿ ಹಾಕಲಾಗಿದೆ.
ಟಿಜಿ ಹಳ್ಳಿ ಜಲಾಗಾರ ಚಿತ್ರ ಕೃಪೆ: http://en.wikipedia.org/wiki/User:Sanjaykattimani
ಬೆಂಗಳೂರಿಗರು ಹೋರಾಡಬೇಕು ಏಕೆ?
ಮೊದಲೇ ಹೇಳಿದಂತೆ ಕುಡಿಯುವ ನೀರಿನ ಅವಶ್ಯಕತೆ, ಪರ್ಯಾಯ ಜಲಮೂಲ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪ್ರಮುಖ ಕೆರೆಗಳು ಕಲುಷಿತಗೊಂಡಿದೆ. ಬಳಕೆ ಯೋಗ್ಯ ಎಂದರೆ ಅದು ಕಾವೇರಿ ಕೊಳ್ಳದ ನೀರು ಎಂಬ ಪರಿಸ್ಥಿತಿ ಇದೆ.
ರೈತರು ಭತ್ತ, ಕಬ್ಬು ಹೇಗೆ ಬೆಳೆಯುತ್ತಾರೆ ಎಂಬ ಅರಿವು ಇಲ್ಲದಿದ್ದರೂ, ಅವರಿಲ್ಲದಿದ್ದರೆ ನಾಳೆ ನಗರವಾಸಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ ಎಂಬ ಅಂಶ ಎಲ್ಲರಿಗೂ ಮನದಟ್ಟಾಗಬೇಕು. ಹೋರಾಟ ಕನ್ನಡಿಗರ, ಕಾವೇರಿ ನೀರು ಕುಡಿಯುವವರ ಸಂಘಟಿತ ಶಕ್ತಿ ಹಾಗೂ ಒಗ್ಗಟ್ಟಿನ ಪ್ರದರ್ಶನಕ್ಕಾಗಿ ನಗರವಾಸಿಗಳು ಹೋರಾಡಲೇಬೇಕು.












Click it and Unblock the Notifications