Bengaluru: ಬೇರೊಬ್ಬನ ಜೊತೆ ನಿಶ್ಚಿತಾರ್ಥ ಫಿಕ್ಸ್ ಆಗಿದ್ದಕ್ಕೆ ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಂದ ವಿವಾಹಿತ ಕಾಮುಕ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 22 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತಳನ್ನು ಭವಾನಿ ಎಂದು ಗುರುತಿಸಲಾಗಿದ್ದು, ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಯುವತಿಯನ್ನು ಕೊಂದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಚಂದ್ರಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ತಿಗಳರಪಾಳ್ಯದ ತುಳಸಿನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಭವಾನಿ ಶವವಾಗಿ ಪತ್ತೆಯಾಗಿದ್ದಾಳೆ. ಭವಾನಿ ಮೊಬೈಲ್ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆಕೆಗೆ ಚಂದ್ರಶೇಖರ್ ಅಲಿಯಾಸ್ ಚಂದನ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಕಾಲಕ್ರಮೇಣ ಪ್ರೇಮಕ್ಕೆ ತಿರುಗಿ, ಕಳೆದ ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಆರೋಪಿ ಚಂದ್ರಶೇಖರ್‌ಗೆ ಆಗಲೇ ಮದುವೆಯಾಗಿದ್ದು, ಆರು ವರ್ಷದ ಮಗುವೂ ಇರುವುದು ತನಿಖೆ ವೇಳೆ ಬಹಿರಂಗವಾಗಿದೆ. ಹೀಗಿದ್ದರೂ, ಸುಮಾರು ಒಂದು ವರ್ಷದ ಹಿಂದೆ ಇವರಿಬ್ಬರು ತಮ್ಮ ಕುಟುಂಬದವರಿಗೆ ಯಾವುದೇ ಸುಳಿವು ನೀಡದೆ ರಹಸ್ಯವಾಗಿ ವಿವಾಹವಾಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಭವಾನಿಯ ಕುಟುಂಬಸ್ಥರು ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಮುಂದಿನ ವಾರ ಆಕೆಯ ನಿಶ್ಚಿತಾರ್ಥಕ್ಕೂ ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಈ ವಿಚಾರವನ್ನು ಭವಾನಿ ಭಾನುವಾರ ಬೆಳಿಗ್ಗೆ ಚಂದ್ರಶೇಖರ್‌ಗೆ ತಿಳಿಸಿದ್ದಾಳೆ. ತನ್ನ ಮನೆಯವರು ನಮ್ಮ ಪ್ರೇಮ ವಿವಾಹವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಆಕೆ ಹೇಳಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಒಟ್ಟಿಗೆ ಸಾಯಲು ಇಬ್ಬರೂ ನಿರ್ಧರಿಸಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ. ಈ ಒಪ್ಪಂದದಂತೆ ಇಬ್ಬರೂ ವಿಷ ಸೇವಿಸಿದ್ದಾರೆ. ಆದರೆ, ವಿಷ ಸೇವಿಸಿದ ಬಳಿಕ ಭವಾನಿ ವಾಂತಿ ಮಾಡಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವೇಳೆ, ಕೋಪಗೊಂಡ ಚಂದ್ರಶೇಖರ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆಯನ್ನು ಕೊಂದ ಬಳಿಕ, ತಾನು ವಿಷ ಸೇವಿಸುವ ಮುನ್ನ, ತಮ್ಮಿಬ್ಬರ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಅದಕ್ಕೆ 'ನಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವ' ಎಂದು ಶೀರ್ಷಿಕೆ ಕೂಡ ನೀಡಿದ್ದ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ನೋಡಿದ ಭವಾನಿಯ ಸಂಬಂಧಿಕರು ತಕ್ಷಣವೇ ಸ್ಕ್ರೀನ್‌ಶಾಟ್ ತೆಗೆದು ಆಕೆಯ ಪೋಷಕರಿಗೆ ಕಳುಹಿಸಿದ್ದಾರೆ. ಗಾಬರಿಗೊಂಡ ಕುಟುಂಬಸ್ಥರು ಭವಾನಿಗೆ ಸತತವಾಗಿ ಕರೆ ಮಾಡಿದ್ದಾರೆ. ಆದರೆ ಆಕೆ ಕರೆ ಸ್ವೀಕರಿಸಿಲ್ಲ. ಕೊನೆಗೆ ಆಕೆಯ ತಂದೆ ಶ್ರೀನಿವಾಸ್ ಅವರು ಮನೆ ಮಾಲೀಕರಿಗೆ ಕರೆ ಮಾಡಿ, ಮಗಳ ಕೋಣೆಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಮನೆ ಮಾಲೀಕರು ಕೋಣೆಯ ಬಳಿ ಹೋಗಿ ನೋಡಿದಾಗ, ಭವಾನಿ ನಿರ್ಜೀವವಾಗಿ ಬಿದ್ದಿರುವುದು ಹಾಗೂ ಚಂದ್ರಶೇಖರ್ ವಿಷ ಸೇವಿಸಿ ನರಳಾಡುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಮನೆ ಮಾಲೀಕರು ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಭವಾನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥನಾಗಿದ್ದ ಚಂದ್ರಶೇಖರ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಚೇತರಿಸಿಕೊಂಡಿರುವ ಆರೋಪಿಯನ್ನು ವಶಕ್ಕೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಮೊಬೈಲ್ ಕರೆಗಳ ವಿವರ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬರಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications