ಬಿಜೆಪಿ ಮೇಲೆ ಬಿಎಸ್‌ವೈ ಎಸೆದ ಟೈಂ ಬಾಂಬ್!

ಕೆಲ ದಿನಗಳ ಹಿಂದೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ತಮ್ಮ ಬದ್ಧ ವೈರಿ ಅನಂತ್ ಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಹರಿಹಾಯ್ದಿದ್ದ ಯಡಿಯೂರಪ್ಪ, ಈಶ್ವರಪ್ಪ ಅವರ ಮೇಲಿನ ತಮ್ಮ ಸಿಟ್ಟನ್ನು ರಿನ್ಯೂ ಮಾಡಿಕೊಂಡಿರುವ ಸಂದರ್ಭದಲ್ಲಿ ಡಿಸೆಂಬರ್ 25ರಂದು ತಮ್ಮ ಮತ್ತು ಬಿಜೆಪಿ ರಾಜಕೀಯ ನೆಂಟಸ್ತನದ ಬಗ್ಗೆ ಅಂತಿಮ ನಿರ್ಣಯ ಹೇಳುವುದಾಗಿ ಹೇಳಿದ್ದಾರೆ.
ಪ್ರವಾದಿಗಳ ಹೇಳಿದಂತೆ ಡಿಸೆಂಬರ್ 21, 2012ರಂದು ಪ್ರಳಯ ಸಂಭವಿಸುತ್ತದೋ ಬಿಡುತ್ತದೋ, ಜಗತ್ತು ಸರ್ವನಾಶ ಆಗುತ್ತದೋ ಬಿಡುತ್ತದೋ, ಒಂದು ವೇಳೆ ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬದಂದು ಯಡಿಯೂರಪ್ಪ ಅವರು ಎಸೆದಿರುವ ಬಾಂಬ್ ಸಿಡಿದದ್ದೇ ಆದಲ್ಲಿ, ಕರ್ನಾಟಕ ಬಿಜೆಪಿಯಲ್ಲಂತೂ ಪ್ರಳಯ ಆಗುವುದು ನಿಶ್ಚಿತ. ಆದರೆ, ಯಡಿಯೂರಪ್ಪನವರು ಡಿ.25ಕ್ಕೇ ಯಾಕೆ ಡೆಡ್ ಲೈನ್ ಇಟ್ಟುಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ.
ಕೈಲಾಸ ಪರ್ವತವೇರಿದ ಜಗಳ : ತಳಮಟ್ಟದಲ್ಲೇ ಇರುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಹಾಲಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರ ನಡುವಿನ ರಾಜಕೀಯ ವೈಷಮ್ಯ ಕೈಲಾಸ ಪರ್ವತವನ್ನೇರಿದೆ. ಬಿಜೆಪಿ ಬಿಕ್ಕಟ್ಟನ್ನು ಶಮನಗೊಳಿಸುವ ಉದ್ದೇಶದಿಂದ ಹಿರಿಯ ನಾಯಕರು ಬೆಂಗಳೂರಿಗೆ ಬಂದಿರುವ ಸಂದರ್ಭದಲ್ಲಿಯೇ ಇಬ್ಬರು ಮುಜುಗರವಾಗುವಂತೆ ಕಿತ್ತಾಡುತ್ತಿದ್ದಾರೆ.
ಬಂಡಾಯದ ಬಾವುಟವನ್ನು ಹಾರಿಸಿರುವ, ಬ್ಲಾಕ್ ಮೇಲ್ ತಂತ್ರಗಳ ಮೂಲಕ ಹೈಕಮಾಂಡ್ ಕೈಗಳನ್ನು ಕಟ್ಟಿಹಾಕಿರುವ ಯಡಿಯೂರಪ್ಪನವರು, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿಯವರನ್ನು ಭೇಟಿಯಾಗಬಾರದು ಎಂಬ ಉದ್ದೇಶದಿಂದ, ಯಾವ ಕಾರ್ಯಕ್ರಮದ ನೆಪವಿಟ್ಟುಕೊಂಡು ಶಿವಮೊಗ್ಗಕ್ಕೆ ದೌಡಾಯಿಸಿದ್ದರೋ ಆ ಕಾರ್ಯಕ್ರಮವೇ ರದ್ದಾಗಿದೆ.
ಶಿವಮೊಗ್ಗದಲ್ಲಿ ಮಹಾತ್ಮ ಗಾಂಧಿ ಜಯಂತಿಯಂದು ಮಂಗಳವಾರ ಗಾಂಧಿ ಪಾರ್ಕ್ ಉದ್ಘಾಟನೆಯನ್ನು ಯಡಿಯೂರಪ್ಪ ಮಾಡಬೇಕಿತ್ತು. ಆ ಕಾರ್ಯಕ್ರಮವೇ ಈಗ ರದ್ದಾಗಿದೆ. ಈ ಕಾರ್ಯಕ್ರಮ ರದ್ದಾಗಲು ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ಯಡಿಯೂರಪ್ಪನವರು ದೂರ್ವಾಸಮುನಿಯ ಅವತಾರ ತಾಳಿದ್ದಾರೆ.
ಸಿಕ್ಕಾಪಟ್ಟೆ ಕೆಂಡಾಮಂಡಲವಾಗಿರುವ ಯಡಿಯೂರಪ್ಪನವರು, ಇನ್ನು ಮುಂದೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈಶ್ವರಪ್ಪನವರ ಜೊತೆ ಭಾಗವಹಿಸುವುದಿಲ್ಲ ಎಂದು ಭೀಷಣ ಪ್ರತಿಜ್ಞೆ ಮಾಡಿದ್ದಾರೆ. ನನ್ನ ಜೊತೆ ಸಭೆಗಳಲ್ಲಿ ಕಾಣಿಸಿಕೊಳ್ಳುವುದು ಈಶ್ವರಪ್ಪನವರಿಗೆ ಅವಮಾನ ಎಂದು ಯಡಿಯೂರಪ್ಪನವರು ವ್ಯಂಗ್ಯವಾಡಿದ್ದಾರೆ.
ಈಶ್ವರಪ್ಪ ತಿರುಗೇಟು : ಗಾಂಧಿ ಪಾರ್ಕ್ ಉದ್ಘಾಟನೆ ಕಾರ್ಯಕ್ರಮ ರದ್ದಿನ ಹಿಂದೆ ನನ್ನ ಕೈವಾಡವಿಲ್ಲ. ಬೇರೆ ಕಾರಣದಿಂದ ಈ ಕಾರ್ಯಕ್ರಮ ರದ್ದಾಯಿತು. ನನ್ನ ಜೊತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ನನ್ನ ಜೊತೆ ಭಾಗವಹಿಸುವುದಿಲ್ಲ ಎಂದು ಯಡಿಯೂರಪ್ಪನವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸದ್ಯಕ್ಕೆ ಅರುಣ್ ಜೇಟ್ಲಿಯವರು ಕರ್ನಾಟಕದ ಉಸ್ತುವಾರಿವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದು, ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಉಳಿದ ನಾಯಕರೊಂದಿಗೆ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ. ಈ ಚರ್ಚೆಯಲ್ಲಿ ಯಡಿಯೂರಪ್ಪ ಅವರ ಅಳಿವಿನ ಮತ್ತು ಉಳಿವಿನ ಪ್ರಶ್ನೆ ಚರ್ಚೆಯಾಗಲಿದೆ. ಅಂದ ಹಾಗೆ, ಕಳೆದ ವರ್ಷ ಇದೇ ಅಕ್ಟೋಬರ್ 15ರಂದು, ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಯಡಿಯೂರಪ್ಪನವರು ಪರಪ್ಪನ ಅಗ್ರಹಾರ ಜೈಲನ್ನು ಸೇರಿದ್ದರು.












Click it and Unblock the Notifications