ವಿಜಯನಗರ ಶಿಕ್ಷಕಿ ಆತ್ಮಹತ್ಯೆ ಸುತ್ತ ಅನುಮಾನದ ಗೂಡು

ಮೃತ ಶಿಕ್ಷಕಿಯ ಹೆಸರು ಸವಿತಾ (30). ಈಕೆಯ ಸೋದರಿ ಹೇಳುವಂತೆ 'ಹೆಚ್ಚು ಸಂಬಳ-ಗಿಂಬಳ ತರುವಂತಹ ಐಎಎಸ್ಸೋ/ಐಪಿಎಸ್ಸೋ ಓದು ಅಂತ ಅಕ್ಕನಿಗೆ ಭಾವ ಪೀಡಿಸುತ್ತಿದ್ದನಂತೆ. ಭಾವನ ಈ ರೋಗ ವಿಪರೀತಕ್ಕೆ ತಿರುಗಿ ಅಕ್ಕ ಸವಿತಾ ಸಾವನ್ನಪ್ಪಿದ್ದಾಳೆ' ಎಂದು ತಿಳಿದುಬಂದಿದೆ.
ಸವಿತಾ ಕೆ ಆರ್ ಮಾರುಕಟ್ಟೆ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಈ ಪ್ರಕರಣದಲ್ಲಿ ಸವಿತಾ ಅವರ ಪತಿ ವಾಣಿಜ್ಯ ತೆರಿಗೆ ಇಲಾಖೆಯ ನೌಕರ ಪ್ರಶಾಂತ ಕುಮಾರನನ್ನು ವಿಜಯನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಸಿದ್ರಾಮಪ್ಪ ಅವರು ಹೇಳಿದ್ದಾರೆ. ಇವರಿಬ್ಬರಿಗೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ.
ಸವಿತಾ ತಂದೆ ಸಿದ್ದಪ್ಪ ಅವರು ಹೇಳುವಂತೆ:
ಕೌಟುಂಬಿಕ ಕಲಹದಿಂದ ಬೇಸತ್ತು ಸವಿತಾ ಶನಿವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಆಸ್ಪತ್ರೆಯಲ್ಲಿ ಸಾವಿಗೀಡಾದರು.
ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಪ್ರಶಾಂತ್ ಹಾಗೂ ಅರಸೀಕೆರೆ ಮೂಲದ ಸವಿತಾ ವಿವಾಹವಾಗಿದ್ದರು. ಮದುವೆಯ ಬಳಿಕ ವರದಕ್ಷಿಣೆಗಾಗಿ ಪತ್ನಿಗೆ ಪ್ರಶಾಂತ್ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಮದುವೆ ಸಂದರ್ಭದಲ್ಲೇ ಸವಿತಾ ಪೋಷಕರು ಅಳಿಯ ಪ್ರಶಾಂತನಿಗೆ ಭಾರಿ ವರದಕ್ಷಿಣೆಯನ್ನು ನೀಡಿದ್ದರು.
ಹೀಗಿದ್ದರೂ ಆತನ ಧನ ದಾಹ ಮುಗಿಯಲಿಲ್ಲ. ಹೆಚ್ಚು ಸಂಬಳ-ಗಿಂಬಳ ತರುವಂತಹ ಉದ್ಯೋಗಕ್ಕೆ ಸೇರಿಕೊ ಎಂದು ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಶನಿವಾರ ರಾತ್ರಿ ದಂಪತಿ ಮಧ್ಯೆ ಜಗಳ ನಡೆದಿದೆ. ಕೋಪಗೊಂಡ ಪ್ರಶಾಂತ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಲು ಯತ್ನಿಸಿದ್ದಾನೆ. ಆಗ ಅರೆಪ್ರಜ್ಞಾವಸ್ಥೆಗೆ ಜಾರಿದ ಪತ್ನಿ ಸವಿತಾರನ್ನು ಆತನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಹಾಗಾಗಿ, ತಮ್ಮ ಪುತ್ರಿ ಸವಿತಾಳ ಸಾವಿಗೆ ಅಳಿಯ ಪ್ರಶಾಂತನೇ ಕಾರಣ.












Click it and Unblock the Notifications