ಅನಂತ್‌ರನ್ನೇ ರಾಜ್ಯಾಧ್ಯಕ್ಷ ಮಾಡಿ, ಬಿಎಸ್‌ವೈ ವ್ಯಂಗ್ಯ

ಕರ್ನಾಟಕದಲ್ಲಿ ಬಿಜೆಪಿ ನಾಯಕರಿಂದ ಮತ್ತು ದೆಹಲಿಯಲ್ಲಿನ ಹೈಕಮಾಂಡಿನಿಂದ ತೀವ್ರ ಅವಮಾನಕ್ಕೆ, ಮುಖಭಂಗಕ್ಕೆ ಒಳಗಾಗಿರುವ ಯಡಿಯೂರಪ್ಪ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಜನಸಂಪರ್ಕ ಕಚೇರಿಯಲ್ಲಿ ಕರೆಯಲಾಗಿದ್ದ ತ್ವರಿತ ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮತ್ತು ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರನ್ನು, ವ್ಯಂಗ್ಯವಾದ ಮಾತುಗಳಿಂದ ತೀವ್ರವಾಗಿ ತಿವಿದರು.
ತಮ್ಮ ಬದ್ಧ ವೈರಿ ಎಂದೇ ತಿಳಿದಿರುವ ಅನಂತ್ ಕುಮಾರ್ ಅವರನ್ನು ಪ್ರಮುಖ ಗುರಿಯನ್ನಾಗಿಸಿಕೊಂಡ ಯಡಿಯೂರಪ್ಪ, ತಾವು ಇಂದಿರುವ ಸ್ಥಿತಿಗೆ ಅವರೇ ಕಾರಣ. ಅನಂತ್ ಅವರ ಇಲ್ಲಸಲ್ಲದ ಮಾತುಗಳನ್ನು ಕೇಳಿಕೊಂಡೇ ನಿತಿನ್ ಗಡ್ಕರಿಯವರು ತಾವು ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಾಗ ನೀಡಿದ್ದ ಎಲ್ಲ ಭರವಸೆಗಳನ್ನು ಇಲ್ಲಿಯವರೆಗೆ ಈಡೇರಿಸಿಲ್ಲ. ಅಟಲ್ ಮತ್ತು ಅಡ್ವಾಣಿಯವರು ಪಕ್ಷದ ಎರಡು ಕಣ್ಣುಗಳಿದ್ದಂತೆ. ಅಂಥವರು ಕೂಡ ನನ್ನನ್ನು ಅಪಾರ್ಥ ಮಾಡಿಕೊಳ್ಳುವಂತೆ ಅನಂತ್ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಂತ್ ಕುಮಾರ್ ಬಹಳ ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಬೇಕು, ರಾಜ್ಯಾಧ್ಯಕ್ಷನಾಗಬೇಕು ಎಂದು ಹಿಂಬಾಗಿಲಿನಿಂದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈಗ ಪ್ರಹ್ಲಾದ್ ಜೋಶಿಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಬದಲು ಅನಂತ್ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ. ಆಗ ಎಲ್ಲ ಗೊಂದಲಗಳಿಗೂ ಕೊನೆ ಹಾಡಿದಂತಾಗುತ್ತದೆ. ಇದನ್ನು ರಾಷ್ಟ್ರಾಧ್ಯಕ್ಷರಿಗೆ ನಾನೇ ಶಿಫಾರಸು ಮಾಡುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದರು.
ಅನಂತ್ ನಂತರ ತಮ್ಮ ಮಾತಿನ ಚಾಟಿಯನ್ನು ನಿತಿನ್ ಗಡ್ಕರಿಯವರತ್ತ ಬೀಸಿದ ಯಡಿಯೂರಪ್ಪನವರು, ಕಾರ್ಯಕರ್ತರು ಹುಚ್ಚುನಾಯಿಗಳಂತೆ ಕಚ್ಚಾಡಬಾರದು, ಕಷ್ಟಪಟ್ಟು ಮುಂದೆ ಬರಬೇಕು ಎಂದು ಉದಾತ್ತ ಮಾತುಗಳನ್ನು ಹೇಳುವವರು ಅವರೇ, ನಂತರ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿ, ನನ್ನ ವಿರುದ್ಧ ಗುಂಪುಗಾರಿಕೆ ಮಾಡುವಂತೆ ಚಿತಾವಣೆ ನೀಡುವವರೂ ಅವರೇ ಎಂದು ರಾಷ್ಟ್ರಾಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಂಡರು.












Click it and Unblock the Notifications