ಅಡುಗೆ ಮಾಡಿದ ಆಹಾರವನ್ನು ಎಷ್ಟು ಹೊತ್ತಿನ ಬಳಿಕ ಫ್ರಿಜ್ನಲ್ಲಿ ಇಡಬೇಕು? ಇಲ್ಲಿವೆ ಪ್ರಮುಖ ಸಲಹೆಗಳು
ಜನರು ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಮೊದಲು ಗಂಟೆಗಟ್ಟಲೆ ಹೊರಗೆ ಇಡುತ್ತಾರೆ. ಈ ಅಭ್ಯಾಸವು ಆಹಾರದ ಗುಣಮಟ್ಟವನ್ನು ಹಾಳು ಮಾಡುವುದಲ್ಲದೆ, ಫುಡ್ ಪಾಯಿಸನಿಂಗ್ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರ ಮತ್ತು ರೆಫ್ರಿಜರೇಟರ್ (ಫ್ರೀಡ್ಜ್) ಎರಡೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರಿಯಾದ ಸಮಯದಲ್ಲಿ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡುವುದು ಮುಖ್ಯ.
ಎರಡು ಗಂಟೆಗಳಲ್ಲಿ ರೆಫ್ರಿಜರೇಟರ್‌ನಲ್ಲಿಡಿ
ತಜ್ಞರ ಪ್ರಕಾರ, ಬೇಯಿಸಿದ ಆಹಾರವನ್ನು ರೂಂ ಟೆಂಪರೇಚರ್‌ನಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಹೊರಗಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ, ಆಹಾರವನ್ನು ಬೇಯಿಸಿದ ಒಂದು ಗಂಟೆಯೊಳಗೆ ರೆಫ್ರಿಜರೇಟರ್‌ನಲ್ಲಿ ಇಡಬೇಕು. ಆಹಾರವನ್ನು ಹೆಚ್ಚು ಹೊತ್ತು ಹೊರಗೆ ಇಡುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ.

ರೆಫ್ರಿಜರೇಟರ್‌ನಲ್ಲಿ ಬಿಸಿ ಆಹಾರವನ್ನು ಇಡಬಾರದು
ಆದರೆ, ಆಹಾರ ಬೇಯಿಸಿದ ಕೂಡಲೇ ಅಂದರೆ ಕುದಿಯುತ್ತಿರುವಾಗಲೇ ಪಾತ್ರೆಯನ್ನು ಸ್ಟೌವ್‌ನಿಂದ ಇಳಿಸಿ ನೇರವಾಗಿ ರೆಫ್ರಿಜರೇಟರ್‌ನಲ್ಲಿ ಇಡುವುದು ಎಂದರ್ಥವಲ್ಲ. ತುಂಬಾ ಬಿಸಿಯಾದ ಆಹಾರವು ರೆಫ್ರಿಜರೇಟರ್‌ನೊಳಗಿನ ತಾಪಮಾನ ಹೆಚ್ಚಿಸಬಹುದು. ಇದು ಫ್ರಿಜ್‌ನಲ್ಲಿರುವ ಇತರ ಆಹಾರ ಪದಾರ್ಥಗಳ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಇದು ರೆಫ್ರಿಜರೇಟರ್‌ನ ಕಂಪ್ರೆಸರ್ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ, ಅದರ ದಕ್ಷತೆಯನ್ನು ಕಡಿಮೆ ಮಾಡುತ್ತದೆ.
ರೆಫ್ರಿಜರೇಟರ್‌ನಲ್ಲಿ ತಣ್ಣನೆಯ ಆಹಾರ ಮಾತ್ರ ಇಡಿ
ಬಿಸಿ ಆಹಾರವನ್ನು ರೂಮ್ ಟೆಂಪರೇಚರ್‌ನಲ್ಲಿ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡುವುದು ಸರಿಯಾದ ಟೆಕ್ನಿಕ್. ಸಾಮಾನ್ಯವಾಗಿ, 20 ರಿಂದ 30 ನಿಮಿಷಗಳು ಸಾಕು. ಆಹಾರವು ಹೆಚ್ಚಾಗಿದ್ದರೆ ಅದನ್ನು ಸಣ್ಣ ಪಾತ್ರೆಗಳಲ್ಲಿ ವಿಂಗಡಿಸಿ ಇಡಿ. ಇದು ಆಹಾರವನ್ನು ವೇಗವಾಗಿ ತಣ್ಣಗಾಗಿಸಲು ಸಹಾಯ ಮಾಡುತ್ತದೆ ಮತ್ತು ರೆಫ್ರಿಜರೇಟರ್‌ನಲ್ಲಿಟ್ಟ ನಂತರ ಸಮವಾಗಿ ತಣ್ಣಗಾಗುತ್ತದೆ.
ಆಹಾರವನ್ನು ಯಾವಾಗಲೂ ರೆಫ್ರಿಜರೇಟರ್‌ನಲ್ಲಿ ಮುಚ್ಚಿಡಿ
ಆಹಾರವನ್ನು ಯಾವಾಗಲೂ ಸ್ವಚ್ಛವಾದ, ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿ. ತೆರೆದ ಪಾತ್ರೆಗಳಲ್ಲಿ ಇರಿಸಿದ ಆಹಾರವು ತೇವಾಂಶ ಮತ್ತು ವಾಸನೆಯನ್ನು ಬಿಡುಗಡೆ ಮಾಡಬಹುದು. ಇದು ರೆಫ್ರಿಜರೇಟರ್ ಒಳಗೆ ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಹೀಗಾದಾಗ ಫ್ರಿಜ್‌ನಲ್ಲಿರುವ ಇತರ ಆಹಾರ ಪದಾರ್ಥಗಳ ಮೇಲೆಯೂ ಪರಿಣಾಮ ಬೀರುತ್ತದೆ. ಗಾಜು ಅಥವಾ ಉತ್ತಮ ಗುಣ ಮಟ್ಟದ ಪ್ಲಾಸ್ಟಿಕ್‌ನಿಂದ ಮಾಡಿದ ಏರ್ ಟೈಟ್ ಡಬ್ಬಗಳಲ್ಲಿ ಹಾಕಿಡುವುದು ಒಳ್ಳೆಯದು.
ರೆಫ್ರಿಜರೇಟರ್‌ನಲ್ಲಿ ಅತಿಯಾಗಿ ತುಂಬಿಸಿಡುವುದು ಒಳ್ಳೆಯದಲ್ಲ: ರೆಫ್ರಿಜರೇಟರ್‌ನಲ್ಲಿಇದ್ದ ಬದ್ದ ಎಲ್ಲಾ ಪದಾರ್ಥಗಳನ್ನು ತುಂಬಿಸಿಡುವುದು ಸರಿಯಲ್ಲ. ತಂಪಾದ ಗಾಳಿಯ ಸರಿಯಾದ ಪ್ರಸರಣಕ್ಕಾಗಿ ಒಳಗೆ ಸ್ವಲ್ಪ ಸ್ಥಳವಿರಬೇಕು. ರೆಫ್ರಿಜರೇಟರ್ ಸಂಪೂರ್ಣವಾಗಿ ತುಂಬಿದ್ದರೆ, ಎಲ್ಲಾ ಆಹಾರ ಪದಾರ್ಥಗಳು ಸಮವಾಗಿ ತಣ್ಣಗಾಗುವುದಿಲ್ಲ, ಇದು ಆಹಾರ ಹಾಳಾಗುವ ಅಪಾಯವನ್ನು ಹೆಚ್ಚಿಸುತ್ತದೆ.
ಉಳಿದ ಆಹಾರ ಸಾಮಾನ್ಯವಾಗಿ 3 ರಿಂದ 4 ದಿನಗಳಲ್ಲಿ ಬಳಸಬೇಕು: ಹೆಚ್ಚು ಸಮಯ ಸಂಗ್ರಹಿಸಬೇಕಾದರೆ, ಅದನ್ನು ಫ್ರೀಜರ್‌ನಲ್ಲಿ ಸಂಗ್ರಹಿಸುವುದು ಉತ್ತಮ. ಬೇಯಿಸಿದ ಆಹಾರವನ್ನು ಸ್ವಲ್ಪ ತಣ್ಣಗಾಗಿಸಿ ಎರಡು ಗಂಟೆಗಳ ಒಳಗೆ ಫ್ರಿಜ್‌ನಲ್ಲಿ ಇಡುವುದು ಸುರಕ್ಷಿತ ವಿಧಾನವಾಗಿದೆ. ಇದು ಆಹಾರದ ತಾಜಾತನವನ್ನು ಕಾಪಾಡುತ್ತದೆ. ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರೆಫ್ರಿಜರೇಟರ್ ಕಾರ್ಯಕ್ಷಮತೆಯನ್ನು ಹೆಚ್ಚು ಕಾಲ ಸುಧಾರಿಸುತ್ತದೆ.
ಇದೇ ರೀತಿ ಫ್ರಿಜ್ ಹೆಚ್ಚು ಕಾಲದವರೆಗೆ ಬಾಳಿಕೆ ಬರಬೇಕಾದರೆ ಗೋಡೆಯಿಂದ ಎಷ್ಟು ದೂರದಲ್ಲಿ ಇಡಬೇಕು ಫ್ರಿಜ್ ಇಡಬೇಕು ಎನ್ನುವ ವಿಚಾರ ಕೂಡಾ ತಿಳಿದಿರಬೇಕು. ರೆಫ್ರಿಜರೇಟರ್ ಮತ್ತು ಗೋಡೆಯ ಹಿಂಭಾಗ ಮತ್ತು ಬದಿಗಳ ನಡುವೆ ಕನಿಷ್ಠ 10 ಸೆಂಟಿಮೀಟರ್ ಜಾಗ ಇರಬೇಕು ಎನ್ನಲಾಗುತ್ತದೆ. ಈ ವಿಚಾರದಲ್ಲಿ ಬೇರೆಬೇರೆ ಕಂಪನಿಗಳು ವಿಭಿನ್ನ ಶಿಫಾರಸುಗಳನ್ನು ನೀಡುತ್ತದೆಯಾದರೂ ರೆಫ್ರಿಜರೇಟರ್ ಸುತ್ತಲೂ ಸ್ವಲ್ಪ ಜಾಗವಿರಬೇಕು ಎನ್ನುವುದು ಮಾತ್ರ ಸ್ಪಷ್ಟ.


Click it and Unblock the Notifications
