'ದಂಡುಪಾಳ್ಯ ಅಧಿಪತಿ' ಕು.ಸ್ವಾಮಿ ಕಿಂಗ್‌ಮೇಕರ್ ಅಂತೆ

ಇಂತಿಪ್ಪ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಭರದ ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ಮಧ್ಯೆ, ಎಲ್ಲ 224 ಕ್ಷೇತ್ರಗಳಲ್ಲೂ ಏಕಾಂಗಿ ಹೋರಾಟ ನಡೆಸುತ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ನ ಮತ್ತೊಬ್ಬ ದಂಡನಾಯಕ ದೇವೇಗೌಡರು ಇತ್ತೀಚೆಗೆ ಹೇಳಿದ್ದು ನೆನಪು. ಅಂದರೆ ಮುಂದಿನ ವಿಧಾನ ಸಭೆ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಏಕಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.
ಕುಮಾರಸಂಭವವೂ ಅದೇ ಅಂಕಿ-ಸಂಖ್ಯೆಗಳನ್ನು ಹೇಳುತ್ತಿತ್ತು. ನೋಡ್ತಿರಿ ಬಹುಮತ ನಮ್ಮದೇ ಎಂದು ಕುಮಾರಸ್ವಾಮಿ ತೊಡೆತಟ್ಟುತ್ತಿದ್ದರು. ಆದರೆ ಯಾಕೋ ಕುಮಾರಸ್ವಾಮಿಯವರು ಇತ್ತೀಚೆಗೆ ತಾವು ಹೇಳಿದ್ದ ಮಾತುಗಳನ್ನು ತಾವೇ ನುಂಗುತ್ತಿದ್ದಾರೆ.
ಜೆಡಿಎಸ್ ಶತಕದ ಗಡಿ ದಾಟುವುದಿಲ್ಲ: 'ರಾಜ್ಯದಲ್ಲಿ ಅತಿ ಶೀಘ್ರ ವಿಧಾನಸಭೆಗೆ ಚುನಾಚಣೆ ನಡೆಯಲಿದ್ದು, ಜೆಡಿಎಸ್ 60-75 ಸ್ಥಾನಗಳನ್ನು ಗೆಲ್ಲಲಿದೆ. ಆಡಳಿತದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ' ಎಂದು ಮೊನ್ನೆ ಗಂಗಾವತಿಯಲ್ಲಿ ಬೆಚ್ಚಿಬಿದ್ದವರಂತೆ ಹೇಳಿದ್ದಾರೆ. ಆದರೆ ಬಹುಮತದ ಮಾತನ್ನಾಡುತ್ತಿದ್ದ ಕುಮಾರಸ್ವಾಮಿಯವರು ದಿಢೀರನೆ ಕಿಂಗ್ ಮೇಕರ್ ಆಗಿ ಪರಿವರ್ತನೆಗೊಳ್ಳಲು ಕಾರಣವಾಗಿದ್ದಾರೂ ಏನು? ಎಂದು ಸ್ವತಃ ಪಕ್ಷದ ಕಾರ್ಯಕರ್ತರೇ ಬೆಚ್ಚಿಬಿದ್ದಿದ್ದಾರೆ. ಹಾಗಾದರೆ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ನೂರರ ಗಡಿ ದಾಟಲ್ಲವೋ? ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
'ಪಕ್ಷದ ಭವಿಷ್ಯ ಇಷ್ಟೇ ಕಣ್ಣಣ್ಣೋ': ಅದೂ ಪಕ್ಷದ ಹಕ್ಕ-ಬುಕ್ಕ ಎನಿಸಿಕೊಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಶಾಸಕರಾದ ಜಮೀರ್ ಅಹಮದ್ ಖಾನ್ ಅವರೆದುರೇ 'ಪಕ್ಷದ ಭವಿಷ್ಯ ಇಷ್ಟೇ ಕಣ್ಣಣ್ಣೋ' ಎಂದು ಕುಮಾರಸ್ವಾಮಿ ಸಾರಿ ಹೇಳಿದ್ದು ರಾಜಕೀಯ ಪಂಡಿತರನ್ನು ಆಶ್ಚರ್ಯದ ಮಡುವಿಗೆ ತಳ್ಳಿದೆ.
'ಅಯ್ಯನೋರು' ಹೇಳಿದಂತೆ 'ದಂಡುಪಾಳ್ಯ ಸೇನಾಧಿಪತಿ' ಆಗಿಯೋ ಅಥವಾ 'ದಂಡುಪಾಳ್ಯದ ಕ್ವೀನ್'ಅನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿಯೋ ಅಂತೂ ಚುನಾವಣೆಯಲ್ಲಿ ನೂರರ ಗಡಿ ದಾಟುವ ಮಾತನ್ನಾಡದ ಕುಮಾರಸ್ವಾಮಿ, ಕಾರ್ಯಕರ್ತರನ್ನು ಹೀಗೇಕೆ ನಿರಾಶೆಯ ಮಡುವಿಗೆ ತಳ್ಳಿದರು? ಎಂಬುದು ಅರ್ಥವಾಗುತ್ತಿಲ್ಲ.












Click it and Unblock the Notifications