ಅತ್ಯಾಚಾರ: ವಿಕಿ'ಲೀಕ್ಸ್' ಜುಲಿಯನ್ ಅಸ್ಸಾಂಜ್ ನಿರ್ದೋಷಿ

ಜುಲಿಯನ್ ಅಸ್ಸಾಂಜ್ (41) ತನ್ನ ಮೇಲೆ ರೇಪ್ ಮಾಡಿದ್ದ ಎಂದು ಯುವತಿಯೊಬ್ಬಳು ಸಾಕ್ಷ್ಯವನ್ನಾಗಿ ನೀಡಿದ್ದ ಉಡುಪು ಮತ್ತು ತೂತುಬಿದ್ದಿದ್ದ ಕಾಂಡೋಮ್ ನಲ್ಲಿ ವಿಕಿ'ಲೀಕ್ಸ್' ಅಸ್ಸಾಂಜನ ವಂಶವಾಹಿ (ಡಿಎನ್ಎ) ಇಲ್ಲ ಎಂಬುದು ದೃಢಪಟ್ಟಿದೆ.
ವಿಕಿ'ಲೀಕ್ಸ್' ಅಸ್ಸಾಂಜನ ವಕೀಲರು ಹೇಳಿರುವಂತೆ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷ್ಯವಾದ ತೂತು ಕಾಂಡೋಮ್ ಅನ್ನು ಎರಡು ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿ ಅದರಲ್ಲಿ ಅಸ್ಸಾಂಜನ ವಂಶವಾಹಿಯ ಲವಲೇಶವೂ ಪತ್ತೆಯಾಗಿಲ್ಲ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ.
ಜುಲಿಯನ್ ಅಸ್ಸಾಂಜ್ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸಿದ್ಧಪಡಿಸಿರುವ 100 ಪುಟಗಳ ವರದಿಯನ್ನು ಆಧರಿಸಿ ಆತನ ವಕೀಲರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಎರಡನೆಯ ಬಾಧಿತೆಯೊಬ್ಬಳು ಸಲ್ಲಿಸಿರುವ ಮತ್ತೊಂದು ಕಾಂಡೋಮಿನಲ್ಲಿ ಅಸ್ಸಾಂಜನ ವಂಶವಾಹಿ ಪತ್ತೆಯಾಗಿರುವುದು ಇದೇ ಪ್ರಯೋಗಾಲಯದಲ್ಲಿ ಕಂಡುಬಂದಿದೆ.
ಸ್ಟಾಕ್ ಹೋಂನಲ್ಲಿ ತನ್ನ ಅಪಾರ್ಟ್ ಮೆಂಟ್ ನಲ್ಲಿ ಜುಲಿಯನ್ ಅಸ್ಸಾಂಜ್ ಅತ್ಯಾಚಾರ ಮಾಡಿದ್ದ ಎಂದು ಬಾಧಿತ ಯುವತಿಯರಿಬ್ಬರೂ 2 ವರ್ಷಗಳ ಹಿಂದೆ ದೂರು ಸಲ್ಲಿಸಿದ್ದರು. ಒಬ್ಬ ಯುವತಿಯಂತೂ ಅಸುರಕ್ಷಿತ ಸಂಭೋಗದಲ್ಲಿ ತೊಡಗುವಂತಾಗಲು ಅಸಾಂಜ್ ಬೇಕಾಗಿಯೇ ಕಾಂಡೋಮಿಗೆ ತೂತು ಮಾಡಿದ್ದ ಎಂದು ಅಲವತ್ತುಕೊಂಡಿದ್ದಳು.
ಮತ್ತೊಬ್ಬಳು ತಾನು ಮಲಗಿದ್ದಾಗ ಅಸಾಂಜ್ ಮೆತ್ತಗೆ ಬಂದು ಸದ್ದಿಲ್ಲದೆ ತನ್ನ ಮೇಲೆ ರೇಪ್ ಮಾಡಿ ಹೋಗಿದ್ದ ಎಂದು ಬೊಬ್ಬಿಟ್ಟಿದ್ದಳು. ಆದರೆ ಪೊಲೀಸರು ಜುಲಿಯನ್ ಅಸ್ಸಾಂಜ್ ಇನ್ನೂ ಯಾವುದೇ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿಕೊಂಡಿಲ್ಲ.












Click it and Unblock the Notifications