ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಣ್ಣಗಿದ್ದ ಸಾರಿಗೆ ನೌಕರರು ಭುಗಿಲೆದ್ದಿದ್ದು ಏಕೆ ಗೊತ್ತಾ?

By Srinath
|
Google Oneindia Kannada News

ksrtc-union-employees-strike-after-16-years-but-why
ಬೆಂಗಳೂರು, ಸೆ. 14: ಕೆಎಸ್ಸಾರ್ಟಿಸಿ ನೌಕರರು ಮುಷ್ಕರ ನಡೆಸಿ 16 ವರ್ಷಗಳೇ ಕಳೆದಿವೆ. 1996ರಲ್ಲಿ ಜನತಾದಳ ಸರಕಾರ ಅಧಿಕಾರದಲ್ಲಿದ್ದಾಗ ನಡೆದಿದ್ದ ಮುಷ್ಕರವೇ ಕೊನೆ. ಅದಾದನಂತರ ಸಾರಿಗೆ ಸಂಸ್ಥೆ ನೌಕರರು ಮುಷ್ಕರದ ಸೊಲ್ಲೆತ್ತಿಲ್ಲ.

ಆಗ ಕಾರ್ಮಿಕ ಸಂಘಟನೆಯಿಂದ ಮುಷ್ಕರಕ್ಕೆ ಕರೆ ನೀಡಿದರೆ ಸಾಕು ಇಡೀ ರಾಜ್ಯದಲ್ಲಿ ಕೆಂಪು ಬಸ್ಸುಗಳು ಎಲ್ಲೆಂದರಲ್ಲಿ ನಿಂತುಬಿಡುತ್ತಿದ್ದವು. ಅಷ್ಟರ ಮಟ್ಟಿಗೆ ಕೆಎಸ್ಸಾರ್ಟಿಸಿ ನೌಕರರ ಸಂಘಟನೆ ಬಲಾಢ್ಯವಾಗಿತ್ತು.

ಸಾರಿಗೆ ನೌಕರರ ಮುಷ್ಕರದ ಬಸ್ಸನ್ನು 16 ವರ್ಷಗಳ ಹಿಂದಕ್ಕೆ ಓಡಿಸಿದಾಗ... ಅಂದು ಸಾರಿಗೆ ಸಚಿವರಾಗಿದ್ದ ಪಿಜಿಆರ್ ಸಿಂಧ್ಯಾ ಅವರು ರಾಜ್ಯ ರಸ್ತೆ ಸಾರಿಗೆಯನ್ನು 4 ವಿಭಾಗಗಳನ್ನಾಗಿ (KSRTC, BMTC, NWRTC, NEWRTC) ವಿಭಜಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆಹಾಕಿದ್ದರು. ಅಷ್ಟೇ ಅಲ್ಲ ಅದರಿಂದ ಬಲಾಢ್ಯ ಕೆಎಸ್ಸಾರ್ಟಿಸಿ ನೌಕರರ ಸಂಘಟನೆಯ ಬೆನ್ನು ಮುರಿಯುವ ಚಾಣಾಕ್ಷತನ ತೋರಿದ್ದರು. AITUC ಆಶ್ರಯದ ಸಾರಿಗೆ ನೌಕರರ ಸಂಘಟನೆಯ ಶಕ್ತಿ ಕ್ಷೀಣವಾಗಿ ಹೋಗಿತ್ತು.

ಮುಂಚೂಣಿಯಲ್ಲಿದ್ದ ಅನೇಕರಿಗೆ ವರ್ಗಾವಣೆಯ ಶಿಕ್ಷೆ ನೀಡಲಾಗಿತ್ತು. ಅಷ್ಟೇ ಅಲ್ಲ. 250ಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿದ್ದು ಆಗ ತೀವ್ರ ಚರ್ಚೆಗೆ ಗ್ರಾಸವನ್ನೊದಗಿಸಿತ್ತು. ಸಂಘಟನೆಗಾಗಿ ದುಡಿದು ಕೆಲಸ ಕಳೆದುಕೊಂಡ ನೌಕರರ ಪರವಾಗಿ ಸತತ ಹೋರಾಟ ನಡೆಸಿದ AITUC, ಮತ್ತಿತರ ಕಾರ್ಮಿಕ ಸಂಘಟನೆಗಳು ಈ ಪ್ರಕರಣವನ್ನು ಸುಪ್ರೀಂಕೋರ್ಟಿನ ತನಕ ಎಳೆದೊಯ್ದವು. ವಜಾಗೊಂಡಿದ್ದ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸುಪ್ರೀಂ ಆದೇಶ ಮಾಡಿದ ಮೇಲಷ್ಟೇ ಕಾರ್ಮಿಕ ಮುಖಂಡರು ಮತ್ತೆ ಸಂಸ್ಥೆಯೊಳಗೆ ಕಾಲಿಟ್ಟರು.

ಆಗ ಪೆಟ್ಟು ತಿಂದಿದ್ದ ನೌಕರರು ಸಾಕಷ್ಟು ಹೈರಾಣಗೊಂಡಿದ್ದರು. ಅದಾದನಂತರ ಮುಷ್ಕರ ಸೊಲ್ಲೆತ್ತಲಿಲ್ಲ. ಅದರಿಂದ ಚಿಗುತಿಕೊಂಡಿದ್ದು ಅಧಿಕಾರಿಗಳ ದಬ್ಬಾಳಿಕೆ/ರಾಜಕೀಯ/ಭ್ರಷ್ಟಾಚಾರ. ಇದರಿಂದ ರೋಸಿಹೋದ ನೌಕರರು ನಿಧಾನವಾಗಿ ಮತ್ತೆ ಸಂಘಟಿತರಾಗತೊಡಗಿದರು. 6 ವರ್ಷಗಳ ಹಿಂದೆ ಅದಕ್ಕೆ ನೀರೆರೆದು ಪೋಷಣೆ ಮಾಡುತ್ತಾ ಬಂದ ಅದೇ ನಾಯಕರು ಈಗ ಬೀದಿಗಿಳಿದಿದ್ದಾರೆ.

ಇದಕ್ಕೆ ಸರಕಾರದ ನಿರ್ಲಕ್ಷ್ಯವೂ ಹೇತುವಾಗಿದೆ. ಸರಕಾರ ಸಕಾಲದಲ್ಲಿ ಎಚ್ಚೆತ್ತು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ, ಮುಷ್ಕರದ ಸದ್ದಡಗುತ್ತಿತ್ತು. ಇದೇ ವೇಳೆ ವಿತಂಡವಾದಕ್ಕೂ ಇಳಿದಿದೆ. ನಿಮ್ಮಲ್ಲಿ ನಾಲ್ಕಾರು ಯೂನಿಯನ್ ಗಳು ಇದಾವಾದರೂ ಅಧಿಕೃತವಾಗಿ ಅಂತ ಯಾವುದೂ ಇಲ್ಲ. ಸುಪ್ರೀಂಕೋರ್ಟ್ ಸಹ ಇದನ್ನೇ ಹೇಳಿದೆ. ಮತ್ತು ಯಾವುದಕ್ಕೂ ಇನ್ನೂ ಯಾವುದೇ ಮಾನ್ಯತೆ ನೀಡಿಲ್ಲ.

ಸದ್ಯಕ್ಕಂತೂ ಮುಷ್ಕರ ನಿಲ್ಲುವ ಲಕ್ಷಣಗಳಿಲ್ಲ: ಹೀಗಿರುವಾಗ ನಾವು ಯಾರ ಜತೆ ಮಾತುಕತೆ ನಡೆಸುವುದು ಎಂದು ಇದ್ದಬದ್ದ ಯೂನಿಯನ್ ಗಳನ್ನು ಅಧೀರರನ್ನಾಗಿಸುವ ಪ್ರಯತ್ನಗಳೂ ನಡೆದಿವೆ. ಇನ್ನು ಅಶೋಕ ಮಹಾರಾಜರಿಗೆ ಪಿಜಿಆರ್ ಸಿಂಧ್ಯಾ ಅವರಿಗಿರುವ ಮುತ್ಸದ್ದಿತನ, ದೂರದೃಷ್ಟಿತ್ವ ಇಲ್ಲವಾಗಿದೆ. ಪರಿಸ್ಥಿತಿ ಹೀಗಿರುವಾಗ ಅಪ್ಪ-ಅಮ್ಮನ ಜಗಳದಲ್ಲಿ ಕೂಸುಬಡವಾಯ್ತು ಎನ್ನುವಂತೆ ಪ್ರಯಾಣಿಕರರು ಬೀದಿಪಾಲಾಗಿದ್ದಾರೆ.

English summary
KSRTC workers union strike enters 2nd day today (Sept 14) as talks between striking KSRTC workers union and govt failed. KSRTC union employees strike after 16 years but why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X