ಪೆಟ್ರೋಲ್ ಬೆಲೆ ಏರಿಕೆ ತಳ್ಳಿದ ಜೈಪಾಲ್ ರೆಡ್ಡಿ

ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಪೆಟ್ರೋಲ್ ಬೆಲೆ ಏರಿಕೆ ಕೇವಲ ಊಹಾಪೋಹ. ಪೆಟ್ರೋಲ್ ಬೆಲೆಯನ್ನು ಸದ್ಯದಲ್ಲಿ ಖಂಡಿತ ಏರಿಸಲಾಗುವುದಿಲ್ಲ ಎಂದು ಹೇಳಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಏರುಪೇರಾಗುತ್ತಿದ್ದು, ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಪರೋಕ್ಷವಾಗಿ ಬೆಲೆ ಏರಿಕೆಯ ಸೂಚನೆ ನೀಡಿದ್ದಾರೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ದಿನಂಪ್ರತಿ 550 ಕೋಟಿ ರು. ನಷ್ಟ ಮಾಡಿಕೊಳ್ಳುತ್ತಿವೆ ಎಂಬ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ಕನಿಷ್ಠ 5 ರು. ಏರಿಸಲು ಕೇಂದ್ರ ಸರಕಾರ ತನ್ನ ಅನುಮತಿಯ ಮುದ್ರೆ ಒತ್ತಿತ್ತು. ಆದರೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಮೆರಿಕದ ಪ್ರವಾಸದಲ್ಲಿರುವುದರಿಂದ, ಅವರು ಹಿಂತಿರುಗಿ ಬಂದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಯುಪಿಎ ಸರಕಾರ ನಿರ್ಧರಿಸಿದೆ.
ಶನಿವಾರದಿಂದ ಪೆಟ್ರೋಲ್ ಬೆಲೆಯಲ್ಲಿ 5 ರು.ನಷ್ಟು ಏರಿಸಲು ಅನುಮತಿ ನೀಡಿ, ಸರಕಾರದ ನಿಯಂತ್ರಣದಲ್ಲಿರುವ ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳ ದರಗಳನ್ನು ಸೋನಿಯಾ ಗಾಂಧಿ ಭಾರತಕ್ಕೆ ಹಿಂತಿರುಗಿದ ಮೇಲೆ ಏರಿಸಲಾಗುವುದು ಎಂದು ಸರಕಾರ ತೀರ್ಮಾನಕ್ಕೆ ಬಂದಿತ್ತು. ಆದರೆ, ಈಗ ಪೆಟ್ರೋಲ್ ದರವೂ ಉಳಿದ ತೈಲೋತ್ಪನ್ನಗಳ ದರಗಳೊಂದಿಗೇ ಏರಿಸಲಾಗುವುದು. ಸೋನಿಯಾ ಗಾಂಧಿ ಅವರು ಸೆ.10ರಂದು ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ ವಾಪಸ್ ಬರಲಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 11 ಡಾಲರಿನಷ್ಟು ಏರಿಕೆ ಕಂಡಿದೆ. ಆದರೆ, ರುಪಾಯಿ ಬೆಲೆ ಮಾತ್ರ ತಟಸ್ಥವಾಗಿಯೇ ಇದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 5 ರು.ನಷ್ಟು ನಷ್ಟವಾಗುತ್ತಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೇಳಿವೆ. ಈ ಏರಿಕೆಗೆ ಕೇಂದ್ರ ಸಂಪುಟ ತಾತ್ವಿಕ ಅನುಮತಿಯನ್ನೂ ನೀಡಿತ್ತು, ಆದರೆ, ಕಡೆ ಗಳಿಗೆಯಲ್ಲಿ ಬೆಲೆ ಏರಿಕೆಗೆ ಹಿಂದೇಟು ಹಾಕಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಏರಿಕೆಯನ್ನು ತೀವ್ರ ವಿರೋಧಿಸುವುದಾಗಿ ಯುಪಿಎ ಸರಕಾರದ ಅಂಗಪಕ್ಷ ತೃಣಮೂಲ ಕಾಂಗ್ರೆಸ್ ಬೆದರಿಕೆ ಹಾಕಿತ್ತು.
ಸದ್ಯಕ್ಕೆ ಬೆಂಗಳೂರಿನಲ್ಲಿ ಪೆಟ್ರೋಲ್ 75.95 ಪೈಸೆಗೆ ಮಾರಾಟ ಮಾಡಲಾಗುತ್ತಿದೆ. ಇದು ಇಡೀ ದೇಶದಲ್ಲೇ ಅತ್ಯಧಿಕ. ಮೌಲ್ಯವರ್ಧಿತ ತೆರಿಗೆಯಲ್ಲದೆ, ಪ್ರವೇಶ ತೆರಿಗೆ ಕೂಡ ಅಧಿಕವಾಗಿರುವುದರಿಂದ ಬೆಂಗಳೂರಿನಲ್ಲಿ ತೈಲ ಬಲುತುಟ್ಟಿಯಾಗಿದೆ. ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಬಂದರೂ ಪ್ರವೇಶ ತೆರಿಗೆ ಇಳಿಸಲು ಕರ್ನಾಟಕ ಸರಕಾರ ಇನ್ನೂ ಮನಸು ಮಾಡಿಲ್ಲ. [ಷೇರುಗಳು ಏರುಪೇರು]












Click it and Unblock the Notifications