ಸಂಜೆ 6ರ ನಂತರ ಕಟ್ಟಡ ನಿರ್ಮಾಣಕ್ಕೆ ಬಿತ್ತು ಕೋರ್ಟ್ ಕಲ್ಲು

ಗುರುವಾರ ಈ ಮಹತ್ವದ ಆದೇಶ ಹೊರಡಿಸಿರುವ ಹೈಕೋರ್ಟ್ ಮುಂಜಾನೆ 8ರಿಂದ ಸಂಜೆ 6 ಗಂಟೆಯವರೆಗೆ ಮಾತ್ರವೇ ಕಟ್ಟಡ ಕಾಮಗಾರಿ ಸೇರಿದಂತೆ ಇತರೆ ಕಾಂಕ್ರೀಟ್ ಕಾಮಗಾರಿಗಳನ್ನು ನಡೆಸಲು ಸಮ್ಮತಿ ನೀಡಿದೆ.
ಅಂದರೆ ಸಂಜೆ 6ರ ನಂತರ ಮತ್ತು ಬೆಳಗ್ಗೆ 8 ಗಂಟೆಗೆ ಮುನ್ನ ಯಾವುದೇ ಕಟ್ಟಡ ಕಾಮಗಾರಿ ನಡೆಸಬಾರದು ಎಂದು ನ್ಯಾ. ಬಿವಿ ನಾಗರತ್ನ ಅವರಿದ್ದ ವಿಭಾಗೀತ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಬೆಂಗಳೂರಿನ ದಕ್ಷಿಣ ಭಾಗದ ಜೆಪಿ ನಗರದಲ್ಲಿ ಶೋಭಾ ಡೆವಲಪರ್ಸ್ ಸಂಸ್ಥೆ ರಾತ್ರಿಯ ವೇಳೆಯಲ್ಲೂ ಕಟ್ಟಡ ಕಾಮಗಾರಿ ನಡೆಸುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಜೆಪಿ ನಗರ 1ನೇ ಹಂತದ ನಿವಾಸಿಗಳ ಕ್ಷೇಮಾಭ್ಯುದಯ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕಟ್ಟಡ ಕಾಮಗಾರಿ ಹೆಸರಿನಲ್ಲಿ ನಿಮಗೆ ಸಾರ್ವಜನಿಕರಿಗೆ ತೊಂದರೆ ಕೊಡಲು ಯಾವುದೇ ಅವಕಾಶವಿಲ್ಲ. ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಸಲು ನಿಮಗೆ ಅನುಮತಿ ನೀಡಿದವರ‍್ಯಾರು? ಕೇವಲ ಹಣ ಮಾಡೋದಷ್ಟೇ ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿತು.
ಈ ಸಂದರ್ಭದಲ್ಲಿ ತಾವು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಂಸ್ಥೆ ಮಂಡಿಸಿದ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ಪಾಳಿಯ ಹೆಸರಿನಲ್ಲಿ ಸಾರ್ವಜನಿಕರ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.












Click it and Unblock the Notifications