ಮಹಾರಾಷ್ಟ್ರದಲ್ಲಿಯೂ ನಾಲ್ವರು ಶಂಕಿತ ಉಗ್ರರ ಬಂಧನ

ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಾಲ್ವರನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಇವರೆಲ್ಲರೂ ಬೆಂಗಳೂರಿನ ಬಂಧಿತರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದರು ಎಂದು ಎಟಿಎಸ್ ಚೀಫ್ ರಾಕೇಶ್ ಮರಿಯಾ ಅವರು ತಿಳಿಸಿದ್ದಾರೆ. ಆದರೆ, ಅವರು ಯಾರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವಿವರ ನೀಡಲು ಮರಿಯಾ ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲಿ ಓರ್ವ ಪತ್ರಕರ್ತ ಮತ್ತು ಒಬ್ಬ ಡಿಆರ್‌ಡಿಓ ಇಂಜಿನಿಯರ್ ಸೇರಿದಂತೆ ಆರು ಉಗ್ರವಾದಿಗಳನ್ನು ಬಂಧಿಸಿದ ಮೇಲೆ ಈ ಸಂಗತಿಯನ್ನು ಮಹಾರಾಷ್ಟ್ರದಲ್ಲಿನ ಪೊಲೀಸರಿಗೆ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಟ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಇದರ ಆಧಾರದ ಮೇಲೆ ದಾಳಿ ಮಾಡಿದ ಎಟಿಎಸ್ ಅಧಿಕಾರಿಗಳು ಶಂಕಿತ ಉಗ್ರವಾದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಪೊಲೀಸರು ನೀಡಿದ ಸುಳಿವಿನ ಆಧಾರದ ಮೇಲೆ ಸತತ ದಾಳಿ ನಡೆಸಿದ ಎಟಿಎಸ್ ಅಧಿಕಾರಿಗಳು ನಾಂದೇಡ್ ಜಿಲ್ಲೆಯ ನಾನಾ ಭಾಗಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಎಲ್ಲ ಭಯೋತ್ಪಾದನಾ ಹುನ್ನಾರದ ಕೇಂದ್ರ ಸೌದಿ ಅರೇಬಿಯಾದಲ್ಲಿ ಇದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಹರಡಿಕೊಂಡಿರುವ ಯುವ ಉಗ್ರರಿಗೆ ಅಲ್ಲಿಂದಲೇ ಸಂದೇಶಗಳು ರವಾನೆಯಾಗುತ್ತಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಹಿಂದೂ ನಾಯಕರೊಬ್ಬರನ್ನು ಹತ್ಯೆಗೈಯಬೇಕೆಂದು ಸಂಚು ಹೂಡಿದ್ದ 26 ವರ್ಷದ ಒಬೇದ್ ರೆಹಮಾನ್‌ನನ್ನು ಬೆಂಗಳೂರು ಪೊಲೀಸರೇ ಬಂಧಿಸಿದ್ದು, ಅವನನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆ ಅಂತರ್ಜಾಲದಲ್ಲಿ ನುರಿತಿರುವ ಯುವ ಉಗ್ರವಾದಿಗಳನ್ನು ನೇಮಿಸಿಕೊಂಡಿದ್ದು, ಅವರ ಮೂಲಕ ಭಯೋತ್ಪಾದನೆಯ ಬೀಜವನ್ನು ವಿಶ್ವದಾದ್ಯಂತ ಬಿತ್ತುತ್ತಿದೆ.












Click it and Unblock the Notifications