ಆಂಧ್ರಪ್ರದೇಶ ಸಿಎಂ ಆಗಿ ಜಗನ್ ಆಯ್ಕೆ ಖಚಿತ: ಸಮೀಕ್ಷೆ

ಆಂಧ್ರಪ್ರದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಂಭವ ಹೆಚ್ಚಾಗಿದ್ದು, ವೈಎಸ್ ಆರ್ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಶೇ 48 ರಷ್ಟು ಜನ ವೈಎಸ್ ಜಗನ್ ಅವರನ್ನು ಸಿಎಂ ಆಗಿ ಕಾಣಲು ಬಯಸಿದ್ದಾರೆ. ಉಳಿದಂತೆ ತೆಲುಗುದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು ಅವರು ಶೇ 18 ರಷ್ಟು ಹಾಗೂ ಕೆಸಿಆರ್ ಅವರು ಶೇ 17ರಷ್ಟು ಮತ ಪಡೆದಿದ್ದಾರೆ.
ಲೋಕಸಭೆ ಚುನಾವಣೆಯಲ್ಲೂ ವೈಎಸ್ ಆರ್ ಕಾಂಗ್ರೆಸ್ ಉತ್ತಮ ಫಲಿತಾಂಶದೊಂದಿಗೆ ಮುನ್ನಡೆ ಸಾಧಿಸಲಿದೆ. ಒಟ್ಟಾರೆ 42 ಸೀಟುಗಳ ಪೈಕಿ 21 ಸೀಟುಗಳು ವೈಎಸ್ ಆರ್ ಕಾಂಗ್ರೆಸ್ ಪಕ್ಷ ಪಡೆಯಲಿದೆ. ಟಿಆರ್ ಎಸ್ ಪಕ್ಷಕ್ಕೆ 10 ಸೀಟುಗಳು ಲಭಿಸಲಿದೆ.
ತೆಲುಗುದೇಶಂ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಭಾರಿ ಮುಖಭಂಗ ಕಾದಿದೆ. ಕಾಂಗ್ರೆಸ್ ಹಾಗೂ ಹೀಗೂ 9 ಸೀಟು ಪಡೆಯಲಿದ್ದು, ಟಿಡಿಪಿಗೆ ಯಾವುದೇ ಸೀಟು ಗೆಲ್ಲುವ ಸಾಧ್ಯತೆಯಿಲ್ಲ. ಪಕ್ಷೇತರರು 2 ಸೀಟು ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಇದಕ್ಕೂ ಮುನ್ನ ದಿ ಇಂಡಿಯಾ ಟುಡೇ ಹಾಗೀ ನೆಲ್ಸನ್ ಕಂಪನಿ ಅವರು ನಡೆಸಿದ ಸಮೀಕ್ಷೆಯಲ್ಲೂ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿತ್ತು. ವೈಎಸ್ ಆರ್ ಕಾಂಗ್ರೆಸ್ ಪಕ್ಷ 23 ರಿಂದ 27 ಸಂಸದ ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಹೇಳಿತ್ತು.
ಯುಪಿಎ ಸರ್ಕಾರ ಕೂಡಾ ಅಸ್ತಿತ್ವ ಕಳೆದುಕೊಳ್ಳಲಿದ್ದು 259 ಸ್ಥಾನಗಳಿಂದ 171 ಅಥವಾ 181 ಸ್ಥಾನಕ್ಕೆ ಕುಸಿಯಲಿದೆ. ಎನ್ ಡಿಎ ಮೈತ್ರಿಕೂಟಕ್ಕೆ 195 ರಿಂದ 205 ಸಂಸದ ಸ್ಥಾನ ಲಭಿಸಲಿದೆ. ಆದರೆ, ಕೇಂದ್ರದಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ವೈಎಸ್ ಆರ್ ಕಾಂಗ್ರೆಸ್ ಪಕ್ಶ ಮಹತ್ವದ ಪಾತ್ರ ವಹಿಸಲಿದೆ.
2014ರ ಲೋಕಸಭೆ ಚುನಾವಣೆಗೂ ತುಂಬಾ ಮುಂಚಿತವಾಗಿ ಸಮೀಕ್ಷೆಗಳು ಆರಂಭವಾಗಿರುವುದು ಹಲವರ ಹುಬ್ಬೇರಿಸಿದೆ. ಅದರೆ, ಸಮೀಕ್ಷೆ ವರದಿಗಳು ಸದ್ಯದ ಟ್ರೆಂಡ್ ಆಧಾರಿಸಿ ಹಾಗೂ ಸಾರ್ವಜನಿಕರ ಅಭಿಪ್ರಾಯದ ಸಂಗ್ರಹ ನಂತರ ಸಮೀಕರಿಸಿ ತಯಾರಿಸಲಾಗಿರುತ್ತದೆ.
ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ವಾತಾವರಣ ಇರುತ್ತದೆಯೋ ಯಾರ ಕಡೆ ಗಾಳಿ ಬೀಸುತ್ತದೆಯೋ ಕಾದು ನೋಡಬೇಕಿದೆ.ಆದರೆ, ಜನಪ್ರಿಯದ ಉತ್ತುಂಗದಲ್ಲಿರುವ ಜಗನ್ ಮೋಹನ್ ರೆಡ್ಡಿ ಅವರು ಕಾನೂನಿನ ತೊದಕಿನ ನಡುವೆಯೂ ಆಂಧ್ರಪ್ರದೇಶ ಹಾಗೂ ಕೇಂದ್ರದಲ್ಲಿ ಮಹತ್ವದ ಪಾತ್ರ ವಹಿಸುವುದಂತೂ ಖಂಡಿತ ಎನ್ನಬಹುದು.











Click it and Unblock the Notifications