ಅಕ್ಟೋಬರಿನಿಂದ ಮತ್ತೆ ಆಧಾರ್ ನೋಂದಣಿ: ನಿಲೇಕಣಿ

ರಾಜ್ಯ ಸರಕಾರವು ಕೇಂದ್ರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಅಗತ್ಯಬಿದ್ದಲ್ಲಿ ಹಣಕಾಸು ನೆರವಿಗೂ ಸಿದ್ಧವಿದೆ ಎಂದು ರಾಜ್ಯ ತಿಳಿಸಿದೆ.
ಆಧಾರ್ (UID) ನೋಂದಣಿಯಿಂದ ಕರ್ನಾಟಕದ ಸರಕಾರಿ ಯೋಜನೆಗಳಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ನಾಲ್ಕು ಯೋಜನೆಗಳಿಗೆ ಆಧಾರ್ ಕಾರ್ಡ್ ಆಧಾರ ವಾಗಲಿದೆ. ರೇಶನ್ ಕಾರ್ಡ್, ಪಿಂಚಣಿ ಯೀಜನೆ, ವಿದ್ಯಾರ್ಥಿವೇತನ ಯೋಜನೆ ಮತ್ತು ಗೃಹ ನಿರ್ಮಾಣ ಯೋಜನೆಗಳನ್ನು ಅನುಷ್ಠಾಣಗೊಳಿಸಲು ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನೇ ಆದ್ಯವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಸಂಪೂರ್ಣ ಸಹಮತ ವ್ತಕ್ತಪಡಿಸಿದ ಆಧಾರ್ ಮುಖ್ಯಸ್ಥ ನಂದನ್ ನಿಲೇಕಣಿ ಅವರು ಅಕ್ಟೋಬರಿನಿಂದ ರಾಜ್ಯದ 21 ಜಿಲ್ಲೆಗಳಲ್ಲಿ ಆಧಾರ್ ನೋಂದಣಿಗೆ ಮತ್ತೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಧಾರ್ ನೋಂದಣಿ ಕಾರ್ಯ ಯಶಸ್ವಿಯಾಗಿ ಮುಗಿದಿದೆ ಎಂದು ಸಂತಸ ವ್ಯಕ್ತಪಡಿಸಿದ ನಿಲೇಕಣಿ ಅವರು ಉಳಿದ ಜಿಲ್ಲೆಗಳಲ್ಲೂ ಇದೇ ಸಫಲನೆ ಕಾಣುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಧಾರವಾಡದಲ್ಲಿ ಆಧಾರ್ ನೋಂದಣಿಗೆ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ನಿಲೇಕಣಿ ಇದೇ ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಗಳ ಜಾರಿಗಾಗಿ ಆಧಾರ್ ಕಾರ್ಡ್ ಇದ್ದರೆ ನಕಲಿ ಹಾವಳಿಯನ್ನು ತಡೆಗಟ್ಟಬಹುದು. ಉದ್ದೇಶಿತ ಫಲಾನುಭವಿಗಳಿಗೇ ಯೋಜನೆಯ ಪ್ರಯೋಜನಗಳು ಪ್ರಾಪ್ತಿಯಾಗಲಿವೆ. ಈಗಾಗಲೇ 1.41 ಕೋಟಿ ಜನರ ನೋಂದಣಿ ಕಾರ್ಯ ಮುಗಿದಿದೆ. ಉಳಿದವರಿಗೂ ಆಧಾರ್ ಕಾರ್ಡ್ ಅನ್ನು ಹಂತ ಹಂತವಾಗಿ ತಲುಪಿಸುವುದಾಗಿ ನಿಲೇಕಣಿ ಪ್ರಕಟಿಸಿದರು.












Click it and Unblock the Notifications