ಬೆಂಗ್ಳೂರಿನಲ್ಲಿ ದಾರಿ ಕಾಣದಾಗಿದೆ ರಾಘವೇಂದ್ರನೇ!

ಬೆಂಗಳೂರಿನ ಟ್ರಾಫಿಕ್ ಜಾಮ್ ಗೆ ವಿವಿಧ ಕಾರಣಗಳಿದೆ. ಇತ್ತೀಚೆಗೆ ರಾಶಿಗಟ್ಟಲೆ ಕಸದ ರಾಶಿ ಕೂಡಾ ಸೇರಿದೆ. ಅವೈಜ್ಞಾನಿಕ ರಸ್ತೆ ದುರಸ್ತಿ ಕಾಮಗಾರಿ ಯಾವಾಗಲೂ ಇದ್ದದ್ದೇ. ಮಳೆಗಾಲದಲ್ಲಿ ರಸ್ತೆಗಳಿಗೆ ತೇಪೆ ಹಾಕುವುದು.
ಸಚಿವರೋ, ಮುಖ್ಯಮಂತ್ರಿಗಳೋ ನಿಮ್ಮ ಬಡಾವಣೆಗೆ ಬರುತ್ತಿದ್ದಾರೆ ಎಂದರೆ, ಮದುವಣಗಿತ್ತಿ ಸಿಂಗಾರ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ರೂಢಿ. ಈಗ ಈ ಸಮಸ್ಯೆಗಳ ಜೊತೆಗೆ ಟ್ರಾಫಿಕ್ ಪೊಲೀಸರಿಗೆ ಹೊಸ ಸಮಸ್ಯೆ ಎದುರಾಗಿದೆ.
ವರ್ಷದಿಂದ ವರ್ಷಕ್ಕೆ ಟ್ರಾಫಿಕ್ ಸಿಗ್ನಲ್ ಬೋರ್ಡ್ ಗಳು ಮಾಯವಾಗುತ್ತಿದೆ. ಇದು ಕಿಡಿಗೇಡಿಗಳ ಕೃತ್ಯವೋ, ಅಥವಾ ವ್ಯವಸ್ಥೆಯ ವೈಫಲ್ಯವೋ ಎಂಬ ಚರ್ಚೆ ಪಕ್ಕಕ್ಕಿಟ್ಟರೆ, ಅಂಕಿ ಅಂಶದ ಪ್ರಕಾರ ಕಳೆದ ವರ್ಷ ಸುಮಾರು 2,500 ಕ್ಕೂ ಅಧಿಕ ಟ್ರಾಫಿಕ್ ಫಲಕಗಳು ಮಾಯವಾಗಿದೆ.
ಪೊಲೀಸ್ ಇಲಾಖೆ ವಸ್ತು ಕಳುವಾದರೆ, ಮರ್ಯಾದೆ ಇರುವುದಿಲ್ಲ ಎಂದು ಶತ ಪ್ರಯತ್ನ ಪಟ್ಟು ಹುಡುಕಿದರೂ ಕೈಗೆ ಸಿಕ್ಕ ಸೈನ್ ಬೋರ್ಡ್ ಗಳು ಮೊದಲಿದ್ದ ಸ್ಥಿತಿಯಲ್ಲಂತೂ ಇರುವುದಿಲ್ಲ.
ಪ್ರತಿ ಸೈನ್ ಬೋರ್ಡ್ ಗೆ 4,500 ರು, ತಗುಲುತ್ತದೆ. ಇದರ ಜೊತೆಗೆ ಅಳವಡಿಕೆ ವೆಚ್ಚವೂ ಸೇರುತ್ತದೆ, ಸೈನ್ ಬೋರ್ಡ್ ಪ್ಲೇಟ್ ಸುಮಾರು 2,000 ರು ಆಗುತ್ತದೆ ಎಂದು ಎಸಿಪಿ(ಟ್ರಾಫಿಕ್) ಎಂಎ ಸಲೀಂ ಹೇಳಿದ್ದಾರೆ.
ಟ್ರಾಫಿಕ್ ಸಿಗ್ನಲ್ ಸೈನ್ ಬೋರ್ಡ್ ಕದಿಯುವ ಕಳ್ಳರಲ್ಲಿ ಶಿವಾಜಿ ನಗರ ಹಾಗೂ ಮೈಸೂರು ರಸ್ತೆ ಪ್ರದೇಶದವರು ನಿಷ್ಣಾತರು. ಕಬ್ಬಿಣದ ಬೋರ್ಡ್ ಬದಲು ಕೆಲ ದಿನಗಳ ಕಾಲ ಫ್ಲೆಕ್ಸ್ ಬೋರ್ಡ್ ಗಳನ್ನು ಬಳಸಿದೆವು. 100 ರು ನಲ್ಲಿ ಕೆಲಸ ಆಗಿಬಿಟ್ಟಿತು. ಆದರೆ, ಇದು ತಾತ್ಕಾಲಿಕ ಪರಿಹಾರ ಮಾತ್ರ. ಬೆಂಗಳೂರು ಸದ್ಯಕ್ಕೆ 8,000 ಟ್ರಾಫಿಕ್ ಸೈನ್ ಬೋರ್ಡ್ ಕೊರತೆ ಅನುಭವಿಸುತ್ತಿದೆ ಎಂದು ಸಲೀಂ ಹೇಳಿದ್ದಾರೆ.
ನೋ ಪಾರ್ಕಿಂಗ್ : ಮೂರು ವರ್ಷಗಳ ಹಿಂದೆ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಸುಮಾರು 30,000 ಸೈನ್ ಬೋರ್ಡ್ ಗಳನ್ನು ವಿವಿಧೆಡೆ ಸ್ಥಾಪಿಸಿದ್ದರು. ಆದರೆ, ನಗರದಲ್ಲಿ ಈ ಸೈನ್ ಬೋರ್ಡ್ ಕಳ್ಳತನ ಆರಂಭವಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಾ ಹೋಗಿದೆ.
'ನೋ ಪಾರ್ಕಿಂಗ್' ಸೈನ್ ಬೋರ್ಡ್ ಕಾಣೆಯಾದ ಮೇಲೆ ನಮ್ಮ ಮನೆ ಮುಂದೆ ಕಾಲ್ ಸೆಂಟರ್ ಕ್ಯಾಬ್ ಗಳು ಸಾಲು ಗಟ್ಟಲೇ ನಿಲ್ಲ ತೊಡಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಸೈನ್ ಬೋರ್ಡ್ ಇಲ್ಲದ ಕಾರಣ ಪೊಲೀಸರು ಕೂಡಾ ಕಾನೂನಿನ ಪ್ರಕಾರ ಎಚ್ಚರಿಕೆ ನೀಡಲು ಆಗುತ್ತಿಲ್ಲ ಎಂದು ದೊಮ್ಮಲೂರಿನ ನಿವಾಸಿಯೊಬ್ಬರು ಗೋಳು ತೋಡಿಕೊಂಡಿದ್ದಾರೆ.
ಈ ವರೆಗೂ ಕಾಣೆಯಾಗಿರುವ ಸೈನ್ ಬೋರ್ಡ್ ಗಳ ಪೈಕಿ ನೋ ವೇ ಪಾರ್ಕಿಂಗ್ ಹಾಗೂ ಒನ್ ವೇ ಸೈನ್ ಬೋರ್ಡ್ ಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಟ್ರಾಫಿಕ್ ಸಲಹೆಗಾರ ಪ್ರೊ ಎಂಎನ್ ಶ್ರೀಹರಿ ಅವರು , ಸೈನ್ ಬೋರ್ಡ್ ವಿತಕರನ್ನು ದೂರುತ್ತಾರೆ. ಸೈನ್ ಬೋರ್ಡ್ ಗಳನ್ನು ಸಮರ್ಪಕವಾಗಿ ಎಲ್ಲೆಡೆ ಸ್ಥಾಪಿಸಿಲ್ಲ. ಏಪ್ರಿಲ್ 2012ರಲ್ಲಿ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಪ್ರದೇಶವನ್ನು ಗುರುತಿಸಲಾದರೂ ಈವರೆಗೂ ಯಾವುದೇ ಸೈನ್ ಬೋರ್ಡ್ ನೆಟ್ಟಿಲ್ಲ. ಟ್ರಾಫಿಕ್ ಪೊಲೀಸರು ಸೈನ್ ಬೋರ್ಡ್ ಕೊರತೆಯ ಬಗ್ಗೆ ಹೇಳುತ್ತಾರೆ.
ಇನ್ನು ಹಲವೆಡೆ ಇರುವ ಸೈನ್ ಬೋರ್ಡ್ ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.ಉದಾಹರಣೆಗೆ ಮೈಸೂರು ರಸ್ತೆ ಗೋಪಾಲನ್ ಮಾಲ್ ಬಳಿ ಇರುವ ಸೈನ್ ಬೋರ್ಡ್ ನೋಡಿದ ತಕ್ಷಣಕ್ಕೆ ಟ್ರಾಫಿಕ್ ಪೊಲೀಸರಿಗೆ ಅರ್ಥವಾಗುವುದಿಲ್ಲ ಆ ರೀತಿ ಕ್ಲಿಷ್ಟವಾಗಿದೆ. ಇನ್ನು ವಾಹನ ಸವಾರರು ಯಾವ ಕಡೆ ಹೋಗಲು ಫಲಕ ಸೂಚಿಸುತ್ತಿದೆ ಎಂಬುದು ಹೇಗೆ ತಿಳಿಯುತ್ತದೆ ಎಂದು ಶ್ರೀಹರಿ ಪ್ರಶ್ನಿಸುತ್ತಾರೆ.
ಮಳೆಗಾಲ ಮುಗಿದು ನವೆಂಬರ್ ಹೊತ್ತಿಗೆ ಮಾತ್ರ ಹೊಸ ಸೈನ್ ಬೋರ್ಡ್ ಅಳವಡಿಕೆ ಅಥವಾ ಹಳೆ ಸೈನ್ ಬೋರ್ಡ್ ಬದಲಾವಣೆ ಸಾಧ್ಯ ಎಂದು ಎಸಿಪಿ ಸಲೀಂ ಹೇಳಿದ್ದಾರೆ.












Click it and Unblock the Notifications