• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗಬೇಡಿ, ಆಗಸ್ಟ್ 20 ವಿಶ್ವ ಸೊಳ್ಳೆ ದಿನಾಚರಣೆ!

By ಪ್ರಸಾದ ನಾಯಿಕ
|

ನಮಗೆ ಗೊತ್ತಿರುವುದು ಪರಿಸರ ದಿನಾಚರಣೆ, ಮಕ್ಕಳ ದಿನಾಚರಣೆ, ಏಡ್ಸ್ ದಿನಾಚರಣೆ, ಶಿಕ್ಷಕರ ದಿನಾಚರಣೆಯಂಥ ಕೆಲವೇ ಕೆಲವು ಆಚರಣೆಗಳು. ಆದರೆ ನಿಮಗೆ ಗೊತ್ತಿರಲಿ, ವರ್ಷದ 365 ದಿನಗಳಲ್ಲಿ ಒಂದಿಲ್ಲೊಂದು ದಿನಾಚರಣೆ ಇದ್ದೇ ಇರುತ್ತದೆ. ಕೈತೊಳೆಯಲೊಂದು ದಿನ, ಕಾಲು ತೊಳೆಯಲೊಂದು, ಪ್ರಾರ್ಥಿಸಲೊಂದು ದಿನ... ಒಂದೆ ಎರಡೆ...

ಆದರೆ, ವಿಶ್ವ ಸೊಳ್ಳೆ ದಿನಾಚರಣೆ ಎಂಬ ಆಚರಣೆಯ ಬಗ್ಗೆ ಕೇಳಿದ್ದೀರಾ? ಕೇಳಿದ್ದೀರಾದರೆ ಇದರ ಬಗ್ಗೆ ನಿಮಗೆ ಎಷ್ಟು ಗೊತ್ತು? ಕಿವಿಯಲ್ಲಿ ಗುಂಯ್ ಅಂದಾಗ ಚಪ್ಪಾಳೆ ಬಾರಿಸಿ ಸೊಳ್ಳೆಯನ್ನು ಕೊಲ್ಲುವುದೊಂದು ಗೊತ್ತೇ ಹೊರತು, ಈ ರಕ್ತ ಹೀರುವ ಪುಟಾಣಿ ಕೊಲೆಗಡುಕ ಮಾಡುವ ಅನಾಹುತಗಳ ಬಗ್ಗೆ ನಮಗೆ ಎಷ್ಟು ಅರಿವಿದೆ? ಇಂಥದೊಂದು ದಿನಾಚರಣೆ ಇದೆ ಎಂದು ಊಹಿಸಿರುವುದು ಕೂಡ ಅಸಾಧ್ಯ. ಹೌದು, ಅಂಥೊಂದು ದಿನಾಚರಣೆಯನ್ನು ಆಗಸ್ಟ್ 20, ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಮಲೇರಿಯಾ, ಡೆಂಗ್ಯೂ ಮುಂತಾದ ಮಾರಕ ರೋಗಗಳನ್ನು ಹಬ್ಬುತ್ತ ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಅನಾಹುತಕಾರಿ ಸೊಳ್ಳೆ ಬಗ್ಗೆ ಆಚರಣೆ ಏಕೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಆದರೆ, ಈ ದಿನಾಚರಣೆ ಸೊಳ್ಳೆಯನ್ನು ವೈಭವೀಕರಿಸಲು ಅಲ್ಲ, ಪ್ರಾಣಿ ದಯಾ ಸಂಘದವರು ಕೂಡ ದ್ವೇಷಿಸುವ ಸೊಳ್ಳೆ ಹರಡುವ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿದೆ. ನಗಬೇಡಿ, ಉದಾಸೀನವನ್ನೂ ಮಾಡಬೇಡಿ. [ಸೊಳ್ಳೆಗಳಿಗೆ ಯಮಪಾಶ]

ಮಲೇರಿಯಾ ರೋಗ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹಬ್ಬುತ್ತದೆ ಎಂದು ರೊನಾಲ್ಡ್ ರಾಸ್ 1897ರಲ್ಲಿ ಕಂಡು ಹಿಡಿದ ದಿನವನ್ನು ಕಳೆದ 114 ವರ್ಷಗಳಿಂದ ವಿಶ್ವದಾದ್ಯಂತ 'ವಿಶ್ವ ಸೊಳ್ಳೆ ದಿನ' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶೋಧಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ ನೋಬೆಲ್ ಪಾರಿತೋಷಕವೂ ಲಭ್ಯವಾಯಿತು. ಆದರೆ, ಮಲೇರಿಯಾ ರೋಗ ನಿರ್ಮೂಲನವಾಗಿದೆಯಾ? ಇನ್ನೂ ಇಲ್ಲ. ಈ ರೋಗದಿಂದ ಈಗಲೂ ಕೂಡ ಪ್ರತಿವರ್ಷ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ.

ಇನ್ನು ಇದೇ ಸೊಳ್ಳೆಯಿಂದಾಗಿ ಡೆಂಗ್ಯೂ ರೋಗ ಪ್ರಪಂಚದೆಲ್ಲೆಡೆ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿಯೇ ಈ ವರ್ಷ 16ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಬಿಬಿಎಂಪಿಗೆ ಇದು ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ಈ ದೃಷ್ಟಿಯಿಂದಲಾದರೂ ವಿಶ್ವ ಸೊಳ್ಳೆ ದಿನದಂದು ಸೊಳ್ಳೆಗಳ ಬಗ್ಗೆ ಮಾತನಾಡುತ್ತ, ರೋಗದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಎಲ್ಲರೂ ಕೈಹಾಕಬೇಕಿದೆ. ಸೊಳ್ಳೆಯನ್ನು ನಿರ್ನಾಮ ಮಾಡಲಾಗದಿದ್ದರೂ ಸೊಳ್ಳೆ ಕಡಿತದಿಂದ ಸಾಧ್ಯವಾದಷ್ಟು ದೂರವಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಡೆಂಗ್ಯೂ ಹೆಚ್ಚಾಗಿ ಉಲ್ಬಣಿಸುತ್ತಿರುವುದು ಈ ರೋಗದ ಬಗ್ಗೆ ಜಾಸ್ತಿ ಜಾಗೃತಿ ಇಲ್ಲದಿರುವುದು ಮತ್ತು ಅಗತ್ಯವಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದರಿಂದ ಎಂಬುದು ಸರ್ವವಿದಿತವಾಗ ಸಂಗತಿ. ಹಾಗಾಗಿ, ಸೊಳ್ಳೆಗೂ ಒಂದು ದಿನವೆ ಎಂದು ವ್ಯಂಗ್ಯವಾಗಿ ನಕ್ಕು ತಮಾಷೆ ಮಾಡುವ ಬದಲು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜನರಲ್ಲಿ ಜಾಗೃತಿ ಹೆಚ್ಚಿದಷ್ಟೂ ರೋಗ ಹಬ್ಬುವಿಕೆ ನಿಯಂತ್ರಣಕ್ಕೆ ಬರುತ್ತದೆ. ಇದು ಸಾಧ್ಯವಾಗಬೇಕಾದರೆ ಕೆಳಗಿನ ಸಂಗತಿಗಳು ಗಮನದಲ್ಲಿರಲಿ.

* ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

* ನೀರು ಹೂಕುಂಡಗಳಲ್ಲಿ, ತೆಂಗಿನ ಚಿಪ್ಪುಗಳಲ್ಲಿ, ತಗಡಿನ ಡಬ್ಬಿಗಳಲ್ಲಿ ನಿಲ್ಲದಂತೆ ನಿಗಾವಹಿಸಬೇಕು.

* ಸೊಳ್ಳೆಗಳನ್ನು ತಪ್ಪಿಸಲು ಕಾಯ್ಲ್ ಅಥವಾ ಲಿಕ್ವಿಡ್ ಅಥವಾ ಸೊಳ್ಳೆ ಪರದೆಗಳನ್ನು ತಪ್ಪದೆ ಬಳಸಬೇಕು.

* ಮುಸ್ಸಂಜೆಯ ಹೊತ್ತು ಮನೆಯ ಬಾಗಿಲು ಮುಚ್ಚಿಡುವುದು ಒಳಿತು.

* ಜ್ವರದ ಲಕ್ಷಣಗಳು ಕಾಣಿಸಿದರೆ ಕೂಡಲೆ ವೈದ್ಯರನ್ನು ಸಂಪರ್ಕಿಸುವುದು.

* ಆ ಸಂದರ್ಭದಲ್ಲಿ ಮನೆಮಂದಿಯೆಲ್ಲ ಕಾದು ಆರಿಸಿದ ನೀರನ್ನು ಕುಡಿಯುವುದು.

* ಮತ್ತು ಸಾಧ್ಯವಾದ ಮಟ್ಟಿಗೆ ವಿಶ್ವ ಸೊಳ್ಳೆ ದಿನಾಚರಣೆ ಬಗ್ಗೆ ಪ್ರಚಾರ ಮಾಡುವುದು ಮತ್ತು ತಿಳಿವಳಿಕೆ ಹೇಳುವುದು. [ಸೊಳ್ಳೆಗೆ ಹೆದರಿ ಸಭಾಪತಿಗೆ ಪತ್ರ ಬರೆದ ವಿಮಲಾಗೌಡ]

English summary
August 20 is observed as World Mosquito Day. Don't think why do we need a day to celebrate blood sucking mosquito. Think, what this insect is causing all over the world. Spread the word about mosquito day and create awareness about the diseases caused by mosquito.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more