ಜಾಮೀನು ಸಡಿಲಿಕೆ ನಾಳೆಗೆ: ಯಡಿಯೂರಪ್ಪಗೆ ಸ್ವಾತಂತ್ರ್ಯ?

'ತನಗೆ ಈಗಾಗಲೇ ಜಾಮೀನು ನೀಡಿದ್ದೀರಿ. ಆದರೆ ಒಂದು ಷರತ್ತನ್ನೂ ವಿಧಿಸಿದ್ದೀರಿ. ಅದರಿಂದ ಜನನಾಯಕನಾಗಿ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ. ಆದ್ದರಿಂದ ರಾಜ್ಯ ಪ್ರವಾಸಕ್ಕೆ ಅನುವಾಗುವಂತೆ ಷರತ್ತು ಸಡಿಲಿಸಬೇಕು' ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆ ಸಂಬಂಧ ಇಂದು ಕೋರ್ಟಿನಲ್ಲಿ ವಿಚಾರಣೆ ನಡೆಯಿತು.
ಆದರೆ ಸಿಬಿಐ ಆಕ್ಷೇಪಣೆ ಎತ್ತಿದ್ದರಿಂದ ತೀರ್ಪನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಸದ್ಯದ ವಿಚಾರಣೆಯನ್ನು ವಿಶ್ಲೇಷಿಸಿ ಹೇಳುವುದಾದರೆ ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ನಾಳೆ ಮಂಗಳವಾರ ಸ್ವಾತಂತ್ರ್ಯ ಲಭಿಸುವುದು ಬಹುತೇಕ ಖಚಿತವಾಗಿದೆ.
ಮುಖ್ಯವಾಗಿ, ಈ ಹಿಂದೆ ಜಾಮೀನು ನೀಡುವಾಗ ಬೆಂಗಳೂರು ಬಿಟ್ಟು ಹೊರ ಹೋಗಬಾರದು ಎಂದು ನ್ಯಾಯಧೀಶ ಸುಭಾಷ್ ಬಶೆಟ್ಟಿ ಆದಿ ಅವರ ಏಕಸದಸ್ಯ ಪೀಠವು ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ 'ತಾನು ಬರ ಪ್ರವಾಸ ಮಾಡಬೇಕಾಗಿದೆ. ಹಾಗಾಗಿ ಷರತ್ತು ಸಡಿಲಿಸಿ' ಎಂದು ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದಾರೆ.
ಅದರೆ ಯಡಿಯೂರಪ್ಪನವರು ಷರತ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಾಕ್ಷ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಜಾಮೀನು ಸಡಿಲಿಕೆ, ರಿಯಾಯಿತಿ ಬೇಡವೆಂದು ಕೋರ್ಟಿಗೆ ಸಿಬಿಐ ಮೊರೆಯಿಟ್ಟಿತು.
ಇದನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯ ಹೆಸರಿನಲ್ಲಿ ಜಾಮೀನುದಾರರಿಗೆ ಅನಗತ್ಯವಾಗಿ ಕಿರುಕುಳ ನೀಡುವಂತಿಲ್ಲ ಎಂದು ಸಿಬಿಐಅನ್ನು ಗದರಿಕೊಂಡಿದೆ. ನಂತರ, ಸಿಬಿಐ ಸೂಚಿಸಿದಾಗ ವಿಚಾರಣೆಗೆ ಹಾಜರಾಗುವುದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಯಡಿಯೂರಪ್ಪ ಪರ ವಕೀಲರಿಗೆ ಕೋರ್ಟ್ ಸೂಚಿಸಿತು.
'ನಾಳೆಯೇ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಸಿಬಿಐ ಯಾವಾಗ ಬೇಕಾದರೂ ತಮ್ಮ ಕಕ್ಷಿದಾರರ ವಿಚಾರಣೆ ನಡೆಸಬಹುದು. ಅದಕ್ಕೆ ಅವರು ಸಂಪೂರ್ಣವಾಗಿ ಸಹಕರಿಸುತ್ತಾರೆ. ಆದರೆ 24 ಗಂಟೆಯ ನೋಟಿಸ್ ನೀಡುವಂತೆ ಸಿಬಿಐಗೆ ಸೂಚಿಸಬೇಕು' ಎಂದು ಯಡಿಯೂರಪ್ಪ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.
ಮತ್ತೆ ಮುಖಭಂಗ ತಪ್ಪಿಸಿಕೊಳ್ಳಲು ಇನ್ನೂ ಅರ್ಜಿ ಸಲ್ಲಿಸದ ಸಿಬಿಐ: ಈ ಮಧ್ಯೆ, ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಆ ವಿಚಾರವನ್ನು ಹೈಕೋರ್ಟಿನಲ್ಲೇ ಇತ್ಯರ್ಥಪಡಿಸಿಕೊಳ್ಳಿ ಎಂದು ಸೂಚಿಸಿತ್ತು. ಆದರೆ ಸಿಬಿಐ ಈ ಸಂಬಂಧ ಹೈಕೋರ್ಟಿನಲ್ಲಿ ಮರು ಅರ್ಜಿ ಸಲ್ಲಿಸುವ ಗೋಜಿಗೇ ಹೋಗಿಲ್ಲ.












Click it and Unblock the Notifications