ಕೆಎಂಎಫ್ ಅಧ್ಯಕ್ಷ ರೆಡ್ಡಿ ರಾಜೀನಾಮೆ ಕೇಳಿಲ್ಲ: ಪುಟ್ಟಸ್ವಾಮಿ

ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವ ಪುಟ್ಟಸ್ವಾಮಿ ಅವರು, ಸೋಮಶೇಖರ ರೆಡ್ಡಿ ಅವರು ರಾಜೀನಾಮೆ ನೀಡಬೇಕು ಎಂದಿದ್ದರು. ಆದರೆ, ನಂತರ 'ನಾನು ಹಾಗೆ ಹೇಳೇ ಇಲ್ಲ. ಅವರು ಆರೋಪಿಯಷ್ಟೇ, ರಾಜೀನಾಮೆ ಕೇಳಲು ನಾನ್ಯಾರು' ಎಂದಿದ್ದಾರೆ.
ಬೇಲ್ ಡೀಲ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸೋಮಶೇಖರ ರೆಡ್ಡಿ ಅವರು ಕೆಎಂಎಫ್ ಅಧ್ಯಕ್ಷರಾಗಿ ಮುಂದುವರೆಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷರಾಗಿ ಮುಂದುವರೆಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ರೆಡ್ಡಿ ಬಂಧನವಾದರೆ ತಕ್ಷಣವೇ ಅಧಿಕಾರದಿಂದ ಕೆಳಗಿಳಿಯಬೇಕು. ಅವರು ಕೆಎಂಎಫ್ ಅಧ್ಯಕ್ಷರಾಗಿ ಮುಂದುವರೆಯಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಆ.7ರಂದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಪುಟ್ಟಸ್ವಾಮಿ ಹೇಳಿದ್ದರು.
ಆದರೆ, ಮೂರು ಗಂಟೆಗಳ ನಂತರ ಈ ಮೇಲಿನ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ ಸೋಮಶೇಖರ ರೆಡ್ಡಿ ಅವರು, ಕೆಎಂಎಫ್ ಸ್ಥಾನದಿಂದ ಸೋಮಶೇಖರ ರೆಡ್ಡಿ ಅವರು ಇಳಿಯಬೇಕು ಎಂದು ಹೇಳಿಲ್ಲ. ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಮೇಲೆ ಆರೋಪ ಬಂದಿದೆ ನಿಜ. ಆದರೆ ಅವರು ಅಪರಾಧಿ ಅಲ್ಲ ಹೀಗಾಗಿ ಅವರು ರಾಜೀನಾಮೆ ನೀಡಬೇಕಿಲ್ಲ. ರಾಜೀನಾಮೆ ಕೇಳುವ ಅಧಿಕಾರ ಮುಖ್ಯಮಂತ್ರಿಗಳು ಅಥವಾ ಸ್ಪೀಕರ್ ಅವರಿಗೆ ಇದೆ. ನನಗೆ ಅಧಿಕಾರವಿಲ್ಲ' ಎಂದು ಪುಟ್ಟಸ್ವಾಮಿ ಹೇಳಿದರು.
ರೆಡ್ಡಿ ಹೇಳಿಕೆ: ಓಬಳಾಪುರಂ ಮೈನಿಂಗ್ ಕಂಪೆನಿ ಪ್ರಕರಣಕ್ಕಷ್ಟೇ ಮಾತ್ರವಲ್ಲದೆ, ಕರ್ನಾಟಕ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಪ್ರಕರಣದಲ್ಲೂ ಜನಾರ್ದನ ರೆಡ್ಡಿ ಜಾಮೀನು ಕೊಡಿಸಲು ತಂತ್ರ ರೂಪಿಸು ಯೋಚಿಸಿತ್ತು ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕವಾಗಿಯೇ ಜಾಮೀನು ಪಡೆಯಬೇಕಾಗಿತ್ತು. ಓಎಂಸಿ ಬೇಲ್ ಡೀಲ್ ಯಶಸ್ವಿಯಾದ 24 ಗಂಟೆಗಳೊಳಗೆ ಎಎಂಸಿ ಬೇಲ್ ಡೀಲ್ ಕುದುರಿಸಲು ರೆಡ್ಡಿ ಬಳಗ ಚಿಂತಿಸಿತ್ತು ಎಂದು ವರದಿಯಾಗಿದೆ.
ಸೋಮಶೇಖರ ರೆಡ್ಡಿ ಎರಡು ದಿನದಿಂದ ಎಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೇ ಬಂಧಿತರಾಗಿರುವ ಕಂಪ್ಲಿ ಶಾಸಕ ಸುರೇಶ್ ಬಾಬು ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ ಎಂಬ ಆರೋಪ ರೆಡ್ಡಿ ಬಳಗದಿಂದ ಕೇಳಿ ಬಂದಿದೆ.
ನನಗೆ ನೋಟಿಸ್ ನೀಡಿರುವ ಪ್ರಕಾರ ವಿಚಾರಣೆಗೆ ಹಾಜರಾಗಿದ್ದೇನೆ. ತಾನು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ವಿಷಯವನ್ನು ತಾನು ವಿಚಾರಣಾ ತಂಡದ ಮುಂದೆ ಸ್ಪಷ್ಟ ಪಡಿಸುತ್ತೇನೆ ರಾಜಕೀಯವಾಗಿ ಬೆಳೆಯುತ್ತಿರುವ ತಮ್ಮ ವಿರುದ್ಧ ಸೇಡಿನ ರಾಜಕಾರಣದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕುಮ್ಮಕ್ಕಿನಿಂದ ಇಂತಹ ವಿಚಾರಣೆಗಳನ್ನು ತಮ್ಮ ವಿರುದ್ಧ ನಡೆಸಲಾಗುತ್ತಿದೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.












Click it and Unblock the Notifications