• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೆಸ್ಸೆಸ್ ಮುಖ್ಯಸ್ಥ ಕೆಎಸ್ ಸುದರ್ಶನ್ ಪತ್ತೆಯಾದರು

By Srinath
|
ಮೈಸೂರು, ಆ.3:ನಗರದಲ್ಲಿ ಶುಕ್ರವಾರ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮಾಜಿ ಸರ ಸಂಚಾಲಕ ಕೆ.ಎಸ್. ಸುದರ್ಶನ ಅವರು ನಾಪತ್ತೆಯಾಗಿ ಆತಂಕ ಸೃಷಿಯಾಗಿದ್ದ ಪ್ರಕರಣವು 6 ಗಂಟೆ ಬಳಿಕ ಅವರು ಪತ್ತೆಯಾಗುವುದರೊಂದಿಗೆ ಸುಖಾಂತ್ಯ ಕಂಡಿದೆ.

ವಾಯುವಿಹಾರಕ್ಕೆ ತೆರಳಿದ್ದ ಸುದರ್ಶನ ಅವರು ದಾರಿ ತಪ್ಪಿದ್ದರಿಂದ ಪೊಲೀಸರು ಹಾಗೂ ಸಂಘ ಪರಿವಾರದ ಕಾರ್ಯಕರ್ತರಲ್ಲಿ ಆತಂಕ ಉಂಟಾಗಿತ್ತು. ಅವರನ್ನು ಅಪಹರಿಸಲಾಗಿದೆ ಎಂಬ ಗಾಳಿ ಸುದ್ದಿಯೂ ಹರಡಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು. ನಾಪತ್ತೆಯಾದ ಸುಮಾರು 6 ಗಂಟೆಯ ನಂತರ ನಗರದ ಹೊರವಲಯದ ಕೆಸರೆಯ ಮನೆಯೊಂದರಲ್ಲಿ ಅವರು ಸುರಕ್ಷಿತವಾಗಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ಈಗಿನ ಛತ್ತೀಸ್ ಗಢದ ರಾಯ್ ಪುರದಲ್ಲಿ ಸಂಕೇತಿ ಹಿಂದೂ ಕುಟುಂಬದಲ್ಲಿ ಜನಿಸಿದ (ಜೂನ್ 18, 1931) ಕೆಎಸ್ ಸುದರ್ಶನ್ ಅವರು ಮೊದಲ ಬಾರಿಗೆ ತಮ್ಮ 9ನೆಯ ವಯಸ್ಸಿನಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಂಡಿದ್ದರು. 1954ರಲ್ಲಿ ಪ್ರಚಾರಕ್ ಆಗಿ ಅವರನ್ನು ನೇಮಿಸಲಾಗಿತ್ತು. ಸಂಕೇತಿ ಭಾಷೆಯ ಜತೆಗೆ ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ, ಛತ್ತೀಸ್ ಗಡಿ ಮತ್ತಿತರ ಭಾಷೆಗಳನ್ನು ಅವರು ನಿರರ್ಗಳವಾಗಿ ಮಾತನಾಡುತ್ತಾರೆ.

81 ವಯಸ್ಸಿನ ಸುದರ್ಶನ ಅವರು ಚಾಮುಂಡಿ ಬೆಟ್ಟದ ಸಮೀಪ ನಜರಬಾದ್‌ನಲ್ಲಿ ಸೆಂಚುರಿ ಪಾರ್ಕ್ ಬಳಿಯಿರುವ ತಮ್ಮ ಸಹೋದರನ ಮನೆಗೆ ಭೋಪಾಲ್‌ನಿಂದ ಆ. 1ರಂದು ಆಗಮಿಸಿದ್ದರು. ಎಂದಿನಂತೆ ಬೆಳಿಗ್ಗೆ 5.20 ಗಂಟೆಗೆ ವಾಯು ವಿಹಾರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಅವರ ಆಪ್ತ ಸಹಾಯಕ ಬ್ರಿಜೇಶ್‌ನಾಥ್ ಬರುವುದಾಗಿ ಹೇಳಿದರೂ, ಒಬ್ಬರೇ ಹೆಜ್ಜೆ ಹಾಕಿದರು. ಈ ಮಧ್ಯೆ, 'ಜಡ್' ಶ್ರೇಣಿಯ ಭದ್ರತೆ ಹೊಂದಿರುವ ಸುದರ್ಶನ ಅವರ ಇಬ್ಬರು ಭದ್ರತಾ ಸಿಬ್ಬಂದಿ ಜೆಎಲ್‌ಬಿ ರಸ್ತೆಯ ಮಾಧವ ಕೃಪಾದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ, ಗನ್‌ಮ್ಯಾನ್ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು.

ವಾಯು ವಿಹಾರಕ್ಕೆ ತೆರಳಿದ ಅವರು ನಜರಬಾದ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ನಾಯ್ಡು ನಗರದವರೆಗೆ ಮೆಲ್ಲ ಮೆಲ್ಲಗೆ ಹೆಜ್ಜೆ ಹಾಕುತ್ತ ತಂಪಾದ ವಾತಾವರಣ ಆಸ್ವಾದಿಸುತ್ತ ತೆರಳಿದರು. ತೀವ್ರ ಬಳಲಿಕೆಯಿಂದ ರಸ್ತೆ ಬದಿಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದರು. ಮರೆಗುಳಿ ರೋಗ ಇರುವುದರಿಂದ ಅವರಿಗೆ ತಾನು ಎಲ್ಲಿದ್ದೇನೆ ಎಂಬ ಅರಿವು ಬಾರದೆ ಅಲ್ಲಿಯೇ ಸುತ್ತ ಮುತ್ತ ತಿರುಗಾಡಿದರು. ಸ್ಥಳೀಯರಿಗೆ ಇವರ ಪರಿಚಯ ಇಲ್ಲದ್ದರಿಂದ ಯಾರೂ ಇವರ ಬಗ್ಗೆ ಗಮನ ಹರಿಸಲಿಲ್ಲ. ಹಾಗೆಯೇ ಇವರು ಕೂಡ ತಮ್ಮ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಿಲ್ಲ.

ವಾಯು ವಿಹಾರಕ್ಕೆ ತೆರಳಿ ಅರ್ಧ ಗಂಟೆಯಾದರೂ ಸುದರ್ಶನ ಮರಳಿ ಮನೆಗೆ ಬಾರದ್ದರಿಂದ ಆತಂಕಕ್ಕೆ ಒಳಗಾದ ಸಹೋದರ, ನಿವೃತ್ತ ಎಂಜಿನಿಯರ್‌ ಕೆ.ಎಸ್. ರಮೇಶ್, ಅರಮನೆ, ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಸುತ್ತಮುತ್ತ ಹುಡುಕಾಟ ನಡೆಸಿದರು. ಆದಾಗ್ಯೂ, ಸುದರ್ಶನ ಸುಳಿವು ಲಭ್ಯವಾಗಲಿಲ್ಲ. ಇದರಿಂದ ಭಯಭೀತರಾದ ಅವರು ನಜರಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಅಷ್ಟರಲ್ಲಾಗಲೇ ಸುದರ್ಶನ ನಾಪತ್ತೆ ಪ್ರಕರಣ ಬಹಿರಂಗವಾಗಿದ್ದರಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಕೂಡ ಹುಡುಕಾಟಕ್ಕೆ ಮುಂದಾದರು. ನಗರ ಪೊಲೀಸ್ ಕಮಿಷನರ್ ಕೆ.ಎಲ್. ಸುಧೀರ್ ಅವರು ಸುದರ್ಶನ ಪತ್ತೆಗೆ ನೆರವಾಗುವವರಿಗೆ ರೂ 20 ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದರು.

ಕೊನೆಗೂ ಬೆಳಿಗ್ಗೆ 11.15 ಗಂಟೆಗೆ, ನಾಪತ್ತೆಯಾದ ಸ್ಥಳದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಕೆಸರೆಯ ಅಶೋಕ್ (ಅಶ್ವಥ್) ಅವರ ಮನೆಯಲ್ಲಿ ಸುದರ್ಶನ ಇರುವುದು ಪತ್ತೆಯಾದಾಗ ಎಲ್ಲರೂ ನಿರಾಳರಾದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ವಯಸ್ಸಾದ ವ್ಯಕ್ತಿಯೊಬ್ಬರು (ಸುದರ್ಶನ) ಮನೆಯ ಹತ್ತಿರ ಬಂದು ಪಾನಿ ದೋ (ನೀರು ಕೊಡಿ) ಎಂದು ಹಿಂದಿಯಲ್ಲಿ ಕೇಳಿದರು. ಆಗ ಸಮಯ 10.45 ಗಂಟೆ. ಅವರನ್ನು ಮನೆಯೊಳಗೆ ಬರಮಾಡಿಕೊಂಡು ನೀರು ಕೊಟ್ಟೆವು. ಬಳಿಕ ಮಜ್ಜಿಗೆ ಕೊಡುವಂತೆ ಕೇಳಿದರು.

'ತಾಯಿ ಹೇಮಾವತಿ ಹಾಗೂ ತಂದೆ ಶ್ರೀನಿವಾಸ್ ಮಜ್ಜಿಗೆ, ಬಿಸ್ಕತ್ತು ಕೊಟ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಬೆಳಿಗ್ಗೆಯಿಂದ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ವೃದ್ಧರು ನಮ್ಮ ಮನೆಗೆ ಬಂದ ಸ್ವಲ್ಪ ಸಮಯದಲ್ಲಿಯೇ ವಿದ್ಯುತ್ ಬಂತು. ಟಿ.ವಿ ಹಾಕಿದೆವು. ಎಲ್ಲ ಚಾನೆಲ್‌ಗಳಲ್ಲೂ ನಮ್ಮ ಮನೆಯಲ್ಲಿ ಇರುವ ವ್ಯಕ್ತಿಯ (ಸುದರ್ಶನ) ಚಿತ್ರ ಬಿತ್ತರಗೊಂಡು ನಾಪತ್ತೆ ಆಗಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಆಗ ನಮ್ಮ ಮನೆಯಲ್ಲಿರುವವರೇ ಸುದರ್ಶನ್ ಎಂದು ಗೊತ್ತಾಯಿತು. ತಕ್ಷಣವೇ ನಜರಬಾದ್ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ವಿಷಯ ತಿಳಿಸಿದೆ ಎಂದು ಅಶೋಕ್ ಹೇಳಿದರು. ಅಶೋಕ್ ಕೂಡ ಚಿಕ್ಕವರಿದ್ದಾಗ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದರು.

ಅಶೋಕ್ ಮನೆಗೆ ಆಗಮಿಸಿದ ಪೊಲೀಸ್‌ ಕಮಿಷನರ್‌ ಮತ್ತು ಇತರ ಅಧಿಕಾರಿಗಳು ಸುದರ್ಶನ ಅವರನ್ನು ಕರೆ ತಂದು ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದರು. ಅನಂತರ ಸುರಕ್ಷಿತವಾಗಿ ಸಹೋದರ ರಮೇಶ್‌ ಮನೆಗೆ ತಲುಪಿಸಿದ್ದಾರೆ. ಅಂತಿಮವಾಗಿ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಅಶೋಕ್‌ನ ಸಮಯೋಚಿತ ಪ್ರಜ್ಞೆಗೆ ಮೆಚ್ಚಿರುವ ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ 25 ಸಾವಿರ ರೂ. ನಗದು ಪುರಸ್ಕಾರ ನೀಡಿ, ಆತನ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ಸುದ್ದಿಗಳುView All

English summary
Former sarsanghachalak of the Rashtriya Swayamsevak Sangh (RSS) Kuppahalli Sitaramayya Sudarshan reportedly went missing from Mysore on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more