ಸಿದ್ರಾಮಣ್ಣ ದೃಷ್ಟಿ ಲಿಂಗಾಯತರತ್ತ; ಅಹಿಂದ ಹಿಂದಕ್ಕೆ

ಅಹಿಂದ ಮೂಲಕ ಕಾಂಗ್ರೆಸ್ ಪ್ರವೇಶಿಸಿದ ಹಾಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಹಿಂದ ಬಿಟ್ಟು ಯಾವುದೋ ಕಾಲವಾಗಿದೆ. ಅಹಿಂದ ರಾಗ ಹಾಡುತ್ತಾ ಮುಖ್ಯಮಂತ್ರಿ ಸ್ಥಾನ ಬಯಸಿ ಬಂದಿದ್ದ ಸಿದ್ರಾಮಣ್ಣಗೆ ಅದರಿಂದ ಏನೂ ಗಿಟ್ಟುಪಾಟಾಗಿಲ್ಲ. ಹಾಗಾಗಿ ಈಗವರು ವೀರಶೈವರತ್ತ ಕಣ್ಣುಹಾಕಿದ್ದಾರೆ.
ಈ ಬೆಳವಣಿಗೆಗೆ ಮತ್ತೊಂದು ಕಾರಣವಾಗಿರುವುದು ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು (ಒಕ್ಕಲಿಗ ಸಮುದಾಯದವರು) ತಾವು ದಿಲ್ಲಿ ಮಟ್ಟದ ನಾಯಕರು. ಹಾಗಾಗಿ ಇತ್ತ ಸುಳಿದಾಡುವುದಿಲ್ಲ ಎಂದು ಏಳುತ್ತಲೇ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲೇ ಠಿಕಾಣಿ ಹೂಡಿರುವುದು. ಇದು ಸಿದ್ದರಾಯನ್ನವರ ನಿದ್ದೆಗೆಡಿಸಿದೆ.
ಅದರಂತೆ ಯಾವಾಗ ಆ ಒಕ್ಕಲಿಗ ರಾಷ್ಟ್ರೀಯ ನಾಯಕರು ಸ್ಥಳೀಯಮಟ್ಟದಲ್ಲಿ ಚಲಾವಣೆಗೆ ಸಜ್ಜಾದರೋ, ಒಂದು ಕ್ಷಣವೂ ಟೈಮ್ ವೇಸ್ಟ್ ಮಾಡದೆ 'ಅಹಿಂದ ಸಂಗದಲ್ಲಿದ್ದರೆ ತಾನು ಹಿಂದುಳಿಯುವುದರಲ್ಲಿ ಅನುಮಾನವೇ ಇಲ್ಲ. ಜೀವಮಾನದಲ್ಲಿ ಒಮ್ಮೆಯಾದರೂ ಸಿಎಂ ಆಗಬೇಕೆಂದರೆ ಪ್ರಬಲ ಜನಾಂಗದ ಬೆಂಬಲ ಬೇಕೇಬೇಕು ಎಂಬ ರಾಜಕೀಯ ಸೂಕ್ಷ್ಮ ಅರಿತ ಸಿದ್ದರಾಯನ್ನವರು ಸೀದಾ ಹೋಟೆಲ್ ಏಟ್ರಿಯಾದೊಳಕ್ಕೆ ನುಗ್ಗೇಬಿಟ್ಟಿದ್ದಾರೆ.
ಅಲ್ಲಿರುವ ವೀರಶೈವ ನಾಯಕರನ್ನು ತಬ್ಬಿಕೊಂಡವರೇ ನಾನೂ ನಿಮ್ಮವನೇ ಎಂದಿದ್ದಾರೆ. ಈಗಾಗಲೇ ನಮ್ಮಲ್ಲೇ ಕೆಪಿಸಿಸಿ ಅಧ್ಯಕ್ಷ/ ಮುಖ್ಯಮಂತ್ರಿ ಸ್ಥಾನಗಳು ಭರ್ತಿಯಾಗಿರುವಾಗ ಇವರೇಕೆ ಇಲ್ಲಿ ಟವಲ್ ಹಾಕಲು ಬಂದರು ಎಂದು ವೀಶರಶೈವ ಮಂದಿ ಒಂದಷ್ಟು ಗಲಿಬಿಲಿಗೊಂಡಿದ್ದು ಸಹಜವೇ.
ಕೆಪಿಸಿಸಿಯ ಹಾಲಿ ಅಧ್ಯಕ್ಷ, ಪರಿಶಿಷ್ಟ ಜನಾಂಗದ ಸಜ್ಜನ ಡಾ. ಜಿ ಪರಮೇಶ್ವರ ಅವರನ್ನು ವಿರೋಧಿಸುವ ಸಿದ್ದರಾಮಯ್ಯ ಅವರಿಗೆ ಎಸ್ಸೆಂ ಕೃಷ್ಣ ಅವರೇನಾದರೂ ಡಾ. ಪರಮೇಶ್ವರಪ್ಪ ಜತೆ ಕೈಜೋಡಿಸಿದರೆ ತನಗೆ ಸಂಕಷ್ಟ ಎದುರಾಗುವುದು ಗ್ಯಾರಂಟಿ ಎಂದೆಣಿಸಿದ ಸಿದ್ದರಾಮಯ್ಯ ದಿಢೀರನೇ ವೀರಶೈವರ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಗಿಂತ ಹೆಚ್ಚಾಗಿ ಸದ್ಯಕ್ಕೆ ಕಾಂಗ್ರೆಸ್ ಜಾತಿ ರಾಜಕೀಯವೇ ಹೆಚ್ಚು interesting ಆಗಿದೆ.












Click it and Unblock the Notifications