ನಮ್ಗೆ 'ಡಾಗ್ಸ್ ಆರ್ ನಾಟ್ ಅಲೌಡ್' ಸ್ಥಿತಿ ಬರಬಾರ್ದು

Bangalore Clubs under Assembly Scanner
ಬೆಂಗಳೂರು,ಆ.2- ಡ್ರೆಸ್‌ಕೋಡ್ ನೆಪದಲ್ಲಿ ಕ್ಲಬ್ ಪಬ್ ಗಳಲ್ಲಿ ಸ್ವೇಚ್ಛಾಚಾರ ಹೆಚ್ಚಾಗಿದೆ. ಬ್ರಿಟೀಷರ ಕಾಲದಲ್ಲಿ 'ಇಂಡಿಯನ್ಸ್ ಮತ್ತು ಡಾಗ್ಸ್ ಆರ್ ನಾಟ್ ಅಲೌಡ್' ಎಂದು ಕ್ಲಬ್‌ಗಳ ಮುಂದೆ ಬೋರ್ಡ್‌ ಗಳನ್ನು ಹಾಕಲಾಗಿತ್ತು. ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಈ ಪದ್ಧತಿಯಲ್ಲಿ ಏನೂ ಬದಲಾವಣೆ ಇಲ್ಲ. ಈಗಲೂ ಅದೇ ಕೆಟ್ಟ ಪರಂಪರೆ ಮುಂದುವರೆದಿದೆ.

ನಮ್ಗೆ ಮತ್ತೆ ಈ ಪರಿಸ್ಥಿತಿ ಬರಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹೆಗಲಿನ ಮೇಲಿನ ಟವಲ್ ಸರಿ ಮಾಡಿಕೊಳ್ಳುತ್ತಾ ವಿಧಾನಸಭೆಯಲ್ಲಿ ಗರ್ಜಿಸಿದರು.

ಬುಧವಾರ (ಆ.1) ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರಿನ ಕ್ಲಬ್, ಪಬ್ ಗಳಿಗೆ ಕಡಿವಾಣ ಹಾಕುವ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾತಿಗಿಳಿದ ಪಂಚೆಧಾರಿ ಸಿದ್ದರಾಮಯ್ಯ ಅವರು ಹೀಗೆಂದರು.

ಗಾಂಧೀಜಿಯವರು ದುಂಡುಮೇಜಿನ ಸಮಾವೇಶಕ್ಕೆ, ಲಂಡನ್ ಸಮಾವೇಶಕ್ಕೆ ಚಪ್ಪಲಿ ಮತ್ತು ಪಂಚೆಯಲ್ಲೆ ಹೋಗಿದ್ದರು. ವಿಶ್ವೇಶ್ವರಯ್ಯನವರಿಗೆ ಅಪಮಾನ ಮಾಡಲಾಯಿತು ಎಂಬ ಕಾರಣಕ್ಕಾಗಿ ಸೆಂಚುರಿ ಕ್ಲಬ್ ಆರಂಭಿಸಲಾಯಿತು. ಈಗ ಕ್ಲಬ್‌ಗಳ ಸಂಸ್ಕೃತಿ ಯಾವ ಮಟ್ಟಕ್ಕೆ ವಿಪರೀತಕ್ಕೆ ಹೋಗಿದೆ ಎಂದರೆ ಅಲ್ಲಿ ಬಟ್ಟೆ ಹಾಕಿಕೊಂಡು ಹೋಗುವವರಿಗಿಂತ ಬಟ್ಟೆ ಬಿಚ್ಚಿಕೊಂಡು ಬರುವವರಿಗೇ ಹೆಚ್ಚಿನ ಮರ್ಯಾದೆ, ಮಾನ್ಯತೆ ಸಿಗುತ್ತಿದೆ.

ಇದು ಸರಿಯಲ್ಲ. ನಮ್ಮ ಸಂಸ್ಕೃತಿ ಉಳಿಸಬೇಕಾಗಿದೆ. ನಾವು ಕಾನೂನನ್ನು ಮಾಡುವವರು. ನಮಗೆ ಅಲ್ಲಿ ಮರ್ಯಾದೆ ಇಲ್ಲ ಎಂದ ಮೇಲೆ ಅಲ್ಲಿ ಕಾನೂನಿಗೂ ಗೌರವ ಇರುವುದಿಲ್ಲ. ಲಂಗು-ಲಗಾಮು ಇಲ್ಲದೆ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಕ್ಲಬ್‌ಗಳ ಹಾವಳಿಯನ್ನು ಮಟ್ಟ ಹಾಕಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಚರ್ಚೆಯ ಅಂತ್ಯಕ್ಕೆ ಕ್ಲಬ್‌ಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ನಿರ್ಣಯ ಕೈಗೊಂಡರು.ಇದಕ್ಕಾಗಿ ಸದನ ಸಮಿತಿ ನೇಮಕ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.

ಪಂಚೆ ಕಂಡ್ರೆ ಕಳ್ಳನ ಮರ್ಯಾದೆ: ಈ ಚರ್ಚೆ ಆರಂಭವಾಗಿದ್ದು, ಪ್ರತಿಷ್ಠಿತ ಕ್ಲಬ್ ಗಳಲ್ಲಿ (ಉದಾಹರಣೆಗೆ ಕೆಎಸ್ ಸಿಎ ಕ್ಲಬ್ ) ಚಪ್ಪಲಿ, ಪಂಚೆ ಹಾಕಿಕೊಂಡು ಹೋದರೆ ಕ್ಲಬಿನ ಒಳಗಡೆ ಬಿಡೋದಿಲ್ಲಾ, ಆಚೆ ಕಳುಹಿಸುತ್ತಾರೆ, ನಾವೇ ಕಾನೂನು ಮಾಡುವವರು ವಿಧಾನಸೌಧಕ್ಕೆ ಚಪ್ಪಲಿ, ಪಂಚೆ ಹಾಕಿಕೊಂಡು ಬರಬಹುದಾದರೆ, ಕ್ಲಬ್‌ಗಳಿಗೆ ಏಕೆ ಹೋಗಬಾರದು? ಅವರೇನು ಆಕಾಶದಿಂದ ಬಂದವರೇ? ಎಂದು ಕಾಂಗ್ರೆಸ್ ಸದಸ್ಯ ಎ ಮಂಜು ವಿಷಯ ಪ್ರಸ್ತಾಪಿಸಿದರು.

ಇದೇ ಅನುಭವ ಪಡೆದಿದ್ದ ಲಕ್ಷ್ಮಣಸವದಿ, ಪಿ.ಎಂ.ಅಶೋಕ್ ಮುಂತಾದವರು ದನಿಗೂಡಿಸಿ ಚಪ್ಪಲಿ, ಪಂಚೆ ಕಂಡ್ರೆ ಕ್ಲಬ್‌ನ ಸಿಬ್ಬಂದಿ ಕಳ್ಳನನ್ನು ಕಂಡ ಹಾಗೆ ಗದರಿಸಿ ಆಚೆಗೆ ದಬ್ಬುತ್ತಾರೆ. ಅವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅವರ ಚಟುವಟಿಕೆಯನ್ನು ನಿಯಂತ್ರಣ ಮಾಡಲೇಬೇಕು ಎಂದರು.

ಬೆಂಗಳೂರು ಸುತ್ತ ಮುತ್ತ 1515 ಕ್ಲಬ್‌ಗಳಿವೆ, ಮೈಸೂರು ಪ್ರಾಂತ್ಯದಲ್ಲಿ 1311, ಬೆಳಗಾವಿಯಲ್ಲಿ 503, ಗುಲ್ಬರ್ಗಾದಲ್ಲಿ 386 ಕ್ಲಬ್‌ಗಳು ನೊಂದಾವಣಿಯಾಗಿವೆ. ಒಟ್ಟಾರೆ 2,315 ಕ್ಲಬ್ ಗಳಿದ್ದು ಸರ್ಕಾರವೇ 57 ಕ್ಲಬ್ ಗಳಿಗೆ ಜಾಗ ನೀಡಿದೆ. ಇನ್ನೂ ಅನೇಕ ಕ್ಲಬ್ ಗಳಿಗೆ ಮಾನ್ಯತೆ ಸಿಕ್ಕಿಲ್ಲ ಎಂಬ ವಿಷಯ ಹೊರಬಿತ್ತು.

ಎಲ್ಲ ಸದಸ್ಯರ ಒತ್ತಾಯದ ಮೇರೆಗೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಕ್ಲಬ್ ಚಟುವಟಿಕೆ ನಿಯಂತ್ರಣ ಮಾಡಲು ಸದನ ಸಮಿತಿ ರಚಿಸಿ ಅವುಗಳಿಗೆ ನಿಯಂತ್ರಣ ಹಾಕಬೇಕೆಂದು ಸರ್ಕಾರಕ್ಕೆ ಆದೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+