ಜನಾರ್ದನ ರೆಡ್ಡಿ ಬಗ್ಗೆ ಹುಷಾರು: ಹೈಕೋರ್ಟ್

ಏನಪಾ ಅಂದರೆ ರೆಡ್ಡಿ ಅಂತ ಹೆಸರು ಹೇಳಿದರೆ ನ್ಯಾಯಾಧೀಶರುಗಳು ಒಂದು ಕ್ಷಣ ಬೆಚ್ಚಿಬೀಳುತ್ತಾರೆ. ನಂತರ ಸಾವರಿಸಿಕೊಂಡು ಅದು ಯಾವ ರೆಡ್ಡಿ ಅಂದ್ಕೊಂಡು ಒಮ್ಮೆ ತಮ್ಮ ಮೈ ಚಿವುಟಿಕೊಂಡು 'ಸರಿ ಸರಿ ಇದ್ಯಾವುದೋ ಬೇರೆ ಕಸು' ಅಂದುಕೊಂಡು ನ್ಯಾಯಯುತ ತೀರ್ಪು ನೀಡುತ್ತಾರೆ.
ಆದರೆ ಆ ಹೆಸರು ಗಾಲಿ ಕುಟುಂಬದ್ದು ಎಂದು ತಿಳಿದುಬಂದರೆ ಜಪ್ಪಯ್ಯ ಅಂದರೂ ಕರಗುವುದಿಲ್ಲ. ನ್ಯಾಯಯುತವಾಗಿಯೇ ತಮ್ಮ ವಿವೇಚನೆ ಬಳಸಿ ಜಾಮೀನು ನೀಡಬಹುದಾದರೂ ಇಲ್ಲದ ಊಸಾಬಾರಿ ನಮಗ್ಯಾಕೆ ಎಂದು ಪ್ರಾಸಿಕ್ಯೂಷನ್ ವಾದವನ್ನು ಎತ್ತಿಹಿಡಿಯುತ್ತಾ, no bail ಎಂದು ಷರಾ ಬರೆಯುತ್ತಾರೆ.
ಜನಾರ್ದನ ರೆಡ್ಡಿ ಬಗ್ಗೆ ಹುಷಾರು: ರಾಜ್ಯ ಹೈಕೋರ್ಟಿನಲ್ಲೂ ಗಾಲಿ ಹವಾ ಬೀಸುತ್ತಿದೆ. 'ಗಾಲಿ ಜನಾರ್ದನ ರೆಡ್ಡಿ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ' ಎಂದು ನ್ಯಾ. ರಾಮಮೋಹನ ರೆಡ್ಡಿ ಅವರು ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಎಂಬ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ವಿಚಾರದ ಸಂಬಂಧ ಹೈಕೋರ್ಟ್ ಅರ್ಜಿ ದಾಖಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರನ ಹೆಸರು ಪರಿಶೀಲಿಸಿದ ನ್ಯಾಯಮೂರ್ತಿಗಳು, 'ಇದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಅರ್ಜಿಯೇ' ಎಂದು ಪ್ರಶ್ನಿಸಿದರು. ಗಾಲಿ ಜನಾರ್ದನ ರೆಡ್ಡಿ ಹೆಸರು ಕೇಳಿದೊಡನೆ ತುಂಬಾ ಹುಷಾರ್ ಆಗಿಬಿಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಏನೇನೋ ಅಪಾಯ ಎದುರಾಗುವ ಸಾಧ್ಯತೆಯಿದೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.
ರಕ್ತದಾನವೂ ಸಮಾಜ ಸೇವೆಯಲ್ಲವೇ: ಮತ್ತೊಂದು ಕುತೂಹಲದ ಪ್ರಕರಣದಲ್ಲಿ 'ನಾನು ರಕ್ತದಾನ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಆದ್ದರಿಂದ, ಸಾಮಾಜಿಕ ಸೇವೆ ಕೋಟಾದಡಿಯಲ್ಲಿ ನನಗೊಂದು ನಿವೇಶನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು' ಎಂದು ಹಾಸನ ನಾಗರಿಕರೊಬ್ಬರು ಹೈಕೋರ್ಟ್ ಮೊರೆ ಹೋದರು.
ನಿವೇಶನ ಮಂಜೂರಾತಿ ಮಾಡದ ಹಾಸನ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಮಂಜುನಾಥ್ ಎಂಬುವರು ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಿದ್ದರು. 'ನಾನು ಇದುವರೆಗೂ ಹಲವು ಬಾರಿ ರಕ್ತದಾನ ಮಾಡಿದ್ದು, ತನ್ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಹೀಗಾಗಿ, ನನಗೊಂದು ನಿವೇಶನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಆದೇಶಿಸಬೇಕು' ಎಂದು ಕೋರಿದ್ದಾರೆ.
ಆದರೆ, ಮಂಜುನಾಥ್ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾ.ರಾಮಮೋಹನ್ ರೆಡ್ಡಿ ಅವರು, 'ಈ ಸಾಲಿನಲ್ಲಿ 112 ಪಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಆದರಿಂದ, ಮುಂದಿನ ವರ್ಷ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದು. ಸರ್ಕಾರವು ಅರ್ಜಿಯನ್ನು ಪರಿಶೀಲಿಸಿ ಸೂಕ್ತ ತಿರ್ಮಾನ ಕೈಗೊಳ್ಳಬೇಕು' ಎಂದು ಸೂಚಿಸಿ ಪ್ರಕರಣ ಇತ್ಯರ್ಥ ಪಡಿಸಿದರು.












Click it and Unblock the Notifications