ಮಂಗಳೂರು ಪ್ರಕರಣ, 8 ಆರೋಪಿಗಳ ಬಂಧನ

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಖಂಡನೀಯ. ಈ ಘಟನೆಗೆ ಸಂಬಂಧಿಸಿ ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಈ ಘಟನೆಯ ಬಗ್ಗೆ ಈಗಾಗಲೇ ಗೃಹ ಸಚಿವರಲ್ಲಿ ತಾನು ವರದಿ ಕೇಳಿದ್ದು, ವರದಿ ಆಧಾರದ ಮೇಲೆ ಯಾದರಿಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಶೆಟ್ಟರ್ ಅವರು ಹೇಳಿದರು.
ನಗರದ ಹೊರವಲಯದ ಪಡೀಲ್ ಬಡ್ಲಗುಡ್ಡೆಯಲ್ಲಿರುವ 'ಮಾರ್ನಿಂಗ್ ಮಿಸ್ಟ್' ಹೋಂ ಸ್ಟೇ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿದ್ದ ನಾಲ್ವರು ಹುಡುಗಿಯರು ಸಹಿತ 12 ಮಂದಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಇದಕ್ಕೆ ರಾಷ್ಟ್ರಾದ್ಯಂತದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಹೋಮ್ ಸ್ಟೇ ಮೇಲೆ ದಾಳೀ ಮಾಡಿದ 8 ಮಂದಿಯನ್ನು ಬಂಧಿಸಿರುವ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ದೃಢಪಡಿಸಿದ್ದಾರೆ. ಬಿಪಿನ್ ಗೋಪಾಲಕೃಷ್ಣ ಅವರು ಭಾನುವಾರ ಮಧ್ಯಾಹ್ನ ಘಟನೆ ನಡೆದ ಹೋಮ್ ಸ್ಟೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೊಡನೆ ಚರ್ಚೆ ನಡೆಸಲಾಗಿದೆ.
ಈ ಹೋಮ್ ಸ್ಟೇನಲ್ಲಿ ಯಾವುದೇ ರೇವ್ ಪಾರ್ಟಿ ನಡೆಯುತ್ತಿರಲಿಲ್ಲ ಎಂದು ತಿಳಿದು ಬಂದಿದೆ. 13 ಜನ ಇಲ್ಲಿ ಬರ್ಥ್ ಡೇ ಪಾರ್ಟಿ ಮಾಡುತ್ತಿದ್ದರು. ಡ್ರಗ್ಸ್ ಸೇವನೆ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಹೋಮ್ ಸ್ಟೇ ಲೈಸನ್ಸ್ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಳ್ಳಲಾಗುವುದು.
ಆದರೆ, ದಾಳಿ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಗೃಹ ಸಚಿವ ಆರ್ ಅಶೋಕ್ ಅವರಿಂದ ಆದೇಶ ಬಂದಿದೆ ಎಂದು ಎಡಿಜಿಪಿ ಬಿಪಿನ್ ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರಿಗೆ ಹೇಳಿದರು.
ರಾಜ್ಯದಾದ್ಯಂತ ಖಂಡನೆ: ಮಂಗಳೂರಿನ ರೆಸಾರ್ಟ್ ನಲ್ಲಿದ್ದ ಯುವತಿಯರ ಮೇಲೆ ಹಲ್ಲೆ ನಡೆಸಿರುವುದನ್ನು ರಾಜ್ಯದ ವಿವಿಧ ಮಹಿಳಾ ಸಂಘಟನೆ ಪ್ರತಿನಿಧಿಗಳು ಖಂಡಿಸಿದ್ದಾರೆ. ಘಟನೆಯಲ್ಲಿ ಆರೋಪ ಹೊತ್ತಿರುವ ಕಾರ್ಯಕರ್ತರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸ್ತ್ರೀಪರ ಸಂಘಟನೆಗಳು ಆಗ್ರಹಿಸಿದೆ.
ಶನಿವಾರದ ಘಟನೆ ಸಂಬಂಧ 40ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಕೆಲ ಕಾಲ ಪ್ರತಿಭಟನೆ ನಡೆಸಿದ್ದರು.












Click it and Unblock the Notifications