ಅಗಾಥಾ ಸಂಗ್ಮಾಗೆ ಕೊಕ್, ಚಿರಂಜೀವಿ ಸಂಪುಟಕ್ಕೆ?

ಪ್ರಣಬ್ ಮುಖರ್ಜಿ ಅವರಿಂದ ಸ್ಥಾನ ತೆರವಾದ ನಂತರ ಭಾರತಕ್ಕೆ ಹೊಸ ಆರ್ಥಿಕ ಸಚಿವ, ಗೃಹ ಸಚಿವ ಹಾಗೂ ರಕ್ಷಣಾ ಖಾತೆ ಸಚಿವರು ನೇಮಕಗೊಳ್ಳಲಿದ್ದಾರೆ. ಹಣಕಾಸು ಖಾತೆ ಮತ್ತೆ ಮನಮೋಹನ್ ಸಿಂಗ್ ಅವರೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಸ್ಥಾನಕ್ಕೆ ಎಕೆ ಆಂಟನಿ ಹೆಸರು ಕೂಡಾ ಕೇಳಿ ಬರುತ್ತಿದೆ. ಗೃಹ ಸಚಿವ ಪಿ ಚಿದಂಬರಂ ಅವರಿಗೆ ರಕ್ಷಣಾ ಖಾತೆ ಹೊಣೆಯನ್ನು ನೀಡುವ ಮಾತುಕತೆ ನಡೆದಿದೆ.
ಈ ನಡುವೆ ಎನ್ ಸಿಪಿ ತಿಕ್ಕಾಟದ ನಂತರ ಕೆಲ ಪ್ರಮುಖ ಖಾತೆಗಳು ಬದಲಾದರೂ ಅಚ್ಚರಿಯೇನಿಲ್ಲ. ಹೊಸಬರ ಸೇರ್ಪಡೆಗೆ ಮನಮೋಹನ್ ಸಿಂಗ್ ಹೆಚ್ಚು ಒತ್ತು ನೀಡುವ ಸಾಧ್ಯತೆ ಇಲ್ಲವಾದರೂ ಕೆಲವು ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಬಿಜೆಪಿ ಬೆಂಬಲಿತ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಪಿಎ ಸಂಗ್ಮಾ ಅವರ ಪುತ್ರಿ ಮನಮೋಹನ್ ಸಿಂಗ್ ಕ್ಯಾಬಿನೇಟ್ ನ ಅತ್ಯಂತ ಕಿರಿಯ ಸಚಿವೆ ಅಗಾಥಾ ಸಂಗ್ಮಾ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ. ಪ್ರಜಾರಾಜ್ಯಂ ಪಕ್ಷದ ರಾಜ್ಯಸಭಾ ಸದಸ್ಯ ಚಿರಂಜೀವಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಲೋಕಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪಿ ಚಿದಂಬರಂ ಹಾಗೂ ಸುಶೀಲ್ ಕುಮಾರ್ ಶಿಂಧೆ ನಡುವೆ ಪೈಪೋಟಿ ನಡೆದಿದೆ. ಈ ನಡುವೆ ಪಿ ಚಿದಂಬರಂ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಿದರೆ, ಗೃಹ ಸಚಿವ ಸ್ಥಾನವನ್ನು ಓರ್ವ ಮುಸ್ಲಿಂ ಸಚಿವರಿಗೇ ಏಕೆ ನೀಡಬಾರದು ಎಂಬ ಕೂಗು ಎಐಸಿಸಿ ಕಚೇರಿಯಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ ಮನಸ್ಸು ಮಾಡಿದ್ದೇ ಆದರೆ, ಕಾನೂನು ಹಾಗೂ ನ್ಯಾಯಾಂಗ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್‌ಗೆ ಗೃಹ ಖಾತೆ ಒಲಿಯಬಹುದು.ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹಾಗೂ ಕೈಗಾರಿಕೆ ಹಾಗೂ ಜವಳಿ ಸಚಿವ ಆನಂದ್ ಶರ್ಮಾರ ಖಾತೆಗಳೂ ಬದಲಾಗುವ ಸಂಭವವಿದೆ. ಒಟ್ಟಾರೆ ಯುಪಿಎ ಸರ್ಕಾರದಲ್ಲಿ ಗಮನಾರ್ಹ ಬದಲಾವಣೆಗಳು ಆಗುವ ಮುನ್ಸೂಚನೆ ಸಿಕ್ಕಿದೆ.
ರಾಹುಲ್ ಎಂಟ್ರಿ? : ಉನ್ನತ ಹುದ್ದೆ ಅಲಂಕರಿಸಲು ನಾನು ಸಿದ್ಧ ಎಂದು ರಾಹುಲ್ ಗಾಂಧಿ ಘೋಷಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಮಾತುಗಳು ಕೇಳಿ ಬಂದಿದೆ. 10 ಜನ ಸಂಸದರು ಲೋಕಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಪಟ್ಟಕ್ಕೆ ರಾಹುಲ್ ಗಾಂಧಿಯೇ ಸರಿ ಎಂದು ಸೋನಿಯಾ ಗಾಂಧಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಆದರೆ, ಸದ್ಯಕ್ಕಂತೂ ರಾಹುಲ್ ಗೆ ಸ್ಥಾನ ಸಿಗುವ ಸಾಧ್ಯತೆ ಕಮ್ಮಿ. ಖಾಲಿ ಇರುವ ಸ್ಥಾನಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿದ್ದು, ಇರುವ ಸಚಿವರ ಸ್ಥಾನ ಪಲ್ಲಟ ಹಾಗೂ ಸಂಪುಟ ವಿಸ್ತರಣೆ ಬಿಸಿ ಮನಮೋಹನ್ ಸಿಂಗ್ ನೆತ್ತಿಗೇರಿದೆ.












Click it and Unblock the Notifications