ಜಗದೀಶ್ ಶೆಟ್ಟರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಎಸ್ ಎಂ ಚೇತನ್ ಎಂಬುವರು ಸಲ್ಲಿಸಿರುವ ಖಾಸಗಿ ದೂರನ್ನು ಪರಿಗಣಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾ. ಸುಧೀಂದ್ರ ರಾವ್ ಅವರು ಮುಂದಿನ ವಿಚಾರಣೆಯನ್ನು ಜು.21ಕ್ಕೆ ಮುಂದೂಡಿದ್ದಾರೆ.
ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರು ಭೂ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಕರ್ನಾಟಕ ಜನ ಜಾಗೃತಿ ವೇದಿಕೆಯ ತಲಕಾಡು ಚಿಕ್ಕರಂಗೇಗೌಡ ಎಂಬುವರು ಆರೋಪಿಸಿದ ಬೆನ್ನಲ್ಲೇ ಲೋಕಾಯುಕ್ತಕ್ಕೆ ಚೇತನ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಚೇತನ್ ಅವರ ದೂರಿನ ಪ್ರಕಾರ ಬೆಂಗಳೂರು ಉತ್ತರ ತಾಲೂಕು ದಾಸನಪುರ-ಯಶವಂತಪುರ ಹೋಬಳಿಗೆ ಸೇರಿದ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356 ಎಕರೆ(188 ಎಕರೆ ಖಾಸಗಿ ಜಮೀನು) ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಾಗದಲ್ಲಿ ಎಪಿಎಂಸಿ ಕಾಯಿದೆ ಪ್ರಕಾರ ರೈತರಿಗೆ ಮೆಗಾ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಹೀಗೆ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾದರೆ,. ಉಳಿದ 188.9 1/2 ಎಕರೆ ಭೂಮಿ ಖಾಸಗಿಯವರದ್ದಾಗಿತ್ತು.
ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದಾದ ನಂತರ 04/03/2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ 186.9 1/2 ಎಕರೆಯನ್ನು ಡಿನೋಟಿಫಿಕೇಷನ್ ಮಾಡುವ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿರುವ ಅರೋಪ ಹೊರೆಸಲಾಗಿದೆ.
ಅಲ್ಲದೆ ಸ್ವಾಧೀನಪಡಿಸಿಕೊಂಡ ಭೂಮಿಯ ಮೂಲ ಒಡೆಯರಿಗೆ ಪರಿಹಾರಧನ ಇನ್ನೂ ಸಿಕ್ಕಿಲ್ಲ. ಈ ಜಮೀನನ್ನು ಮೂಲ ಮಾಲೀಕರಿಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಅದು ಬಿಟ್ಟು ಖಾಸಗಿಯವರಿಗೆ ನೀಡಿರುವುದು ಸರಿಯಿಲ್ಲ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ತಲಕಾಡು ಚಿಕ್ಕರಂಗೇಗೌಡ ಅವರು ಆರೋಪಿಸಿದ್ದರು.












Click it and Unblock the Notifications