ವರದಕ್ಷಿಣೆ: Accenture ಟೆಕ್ಕಿಯ ಪತ್ನಿ ಸೌಮ್ಯ ಸಾವು

ಕಾಡುಗೋಡಿ ಬಳಿಯ ಚನ್ನಸಂದ್ರ ನಿವಾಸಿ ವಿಶ್ವನಾಥ್ ಎಂಬುವರ ಪತ್ನಿ ಎಚ್. ಸೌಮ್ಯ (25) ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೋಮವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಸೌಮ್ಯ ಅವರು ಬಿಜಾಪುರ ಜೆಡಿಎಸ್ ಅಧ್ಯಕ್ಷ ಹನುಮಂತರಾಯ ಮತ್ತು ಸುಶೀಲ ಅವರ ಪುತ್ರಿ.
ವಿಜಾಪುರದವರೇ ಆದ ವಿಶ್ವನಾಥ್ ಅವರನ್ನು ಸೌಮ್ಯ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಸೌಮ್ಯ ಎಂ.ಟೆಕ್ ಪದವೀಧರೆಯಾಗಿದ್ದರೆ ವಿಶ್ವನಾಥ್ ವೈಟ್ ಫೀಲ್ಡ್ ನಲ್ಲಿರುವ Accenture ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್.
ಬಿಜಾಪುರ ಜೆಡಿಎಸ್ ಅಧ್ಯಕ್ಷರ ಪುತ್ರಿ:
'ಎಂ.ಟೆಕ್ ಪದವೀಧರೆಯಾಗಿದ್ದ ಸೌಮ್ಯ ತಾನೂ ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಹಂಬಲಿಸಿದ್ದಳು. ಆದರೆ ಗಂಡನ ಮನೆಯವರು ಅದಕ್ಕೆ ಸಮ್ಮತಿಸಲಿಲ್ಲ. ಅಳಿಯ ವಿಶ್ವನಾಥ್ ಮತ್ತು ಆತನ ಸೋದರ ಸತೀಶ್ ನಮ್ಮ ಮಗಳಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿ, ಕೊಲೆ ಮಾಡಿದ್ದಾರೆ. ಮದುವೆ ಸಂದರ್ಭದಲ್ಲಿ ಭಾರಿ ಚಿನ್ನ ಮತ್ತು ಹಣವನ್ನು ವರದಕಷಿಣೆಯಾಗಿ ನೀಡಿದ್ದೆವು. ಆದರೂ ಅಳಿಯ ವಿಶ್ವನಾಥ್ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನಂತೆ' ಎಂದು ಬಿಜಾಪುರ ಜೆಡಿಎಸ್ ಅಧ್ಯಕ್ಷರಾದ ಹನುಮಂತರಾಯ ಅವರು ದೂರಿದ್ದಾರೆ.
ಏನಾಯಿತೆಂದರೆ: ಸೌಮ್ಯ-ವಿಶ್ವನಾಥ್ ದಂಪತಿಯು ಚನ್ನಸಂದ್ರದ ಹಳೆ ಅಂಚೆ ಕಚೇರಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿಶ್ವನಾಥ್ ತಾಯಿ, ಸೋದರ ಸಹ ಜತೆಯಲ್ಲೇ ವಾಸವಾಗಿದ್ದರು. ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೌಮ್ಯ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ವಿಶ್ವನಾಥ್ ಅವರು ರಾತ್ರಿ ಏಳು ಗಂಟೆ ಸುಮಾರಿಗೆ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಾಡುಗೋಡಿ ಪೊಲೀಸರು ಹೇಳಿದ್ದಾರೆ.
'ಅಳಿಯ ವಿಶ್ವನಾಥ್ ಮತ್ತು ಆತನ ಪೋಷಕರು, ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ, ಅಳಿಯ ಮತ್ತು ಆತನ ಕುಟುಂಬ ಸದಸ್ಯರೇ ಕಾರಣ' ಎಂದು ಹನುಮಂತರಾಯ ಅವರು ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ವಿಶ್ವನಾಥ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಸೌಮ್ಯ ಪಾರ್ಥಿವ ಶರೀರವನ್ನು ಹನುಮಂತರಾಯ ಅವರು ಬಿಜಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಾಡುಗೋಡಿ ಪೊಲೀಸರು ವಿಶ್ವನಾಥ್ ಮತ್ತು ಸತೀಶನನ್ನು ಬಂಧಿಸಿದ್ದಾರೆ.












Click it and Unblock the Notifications