ಮುಖ್ಯಮಂತ್ರಿ ಭಾಗ್ಯ ಜಗದೀಶ್ ಶೆಟ್ಟರಿಗೇ !
ಬೆಂಗಳೂರು, ಜುಲೈ 6: ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿಯಾಗುವ ಭಾಗ್ಯ ಒಲಿಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವನ್ನು ಶಮನಗೊಳಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿನ ಬಿಜೆಪಿ ವರಿಷ್ಠರು ರಾಜಿಸೂತ್ರವನ್ನು ಬಹುತೇಕ ಆಖೈರುಗೊಳಿಸಿದ್ದಾರೆ.

ಪಕ್ಷದ ಭೀಷ್ಮ ಪಿತಾಮಹ ಅಡ್ವಾಣಿಯವರು ಒಲ್ಲದ ಮನಸ್ಸಿನಿಂದಲೇ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಮತ್ತು ಯಡಿಯೂರಪ್ಪ ನಿಷ್ಠ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಸಮ್ಮತಿ ಸೂಚಿಸಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ.
ಅಡ್ವಾಣಿ ಅವರು ಕೊನೆಗೂ ಯಡಿಯೂರಪ್ಪಗೆ ಬಗ್ಗಿದರೆ ಎಂಬುದಕ್ಕಿಂತ ಭಿನ್ನಮತಕ್ಕೆ ಪರಿಹಾರ ಕಂಡುಕೊಳ್ಳಲು ಚುನಾವಣೆಯೊಂದೇ ದಾರಿ ಎಂಬಂತಾಗಿತ್ತು. ಆದರೆ ಅದು ದುರ್ಗಮದ ಹಾದಿಯಾಗಿದ್ದು, ಪಕ್ಷದಲ್ಲಿ ಯಾರೊಬ್ಬರೂ ಚುನಾವಣೆ ಎದುರಿಸುವ ಧಾರ್ಷ್ಯ ತೋರಲಿಲ್ಲ ಎನ್ನಲಾಗಿದೆ.
ಇನ್ನು ಸನ್ಮಾನ್ಯ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸುವುದಕ್ಕೂ ಮಹೂರ್ತ ನಿಗದಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾಳೆ ಸಂಜೆ (ಶನಿವಾರ) ಪಕ್ಷದ ಸಂಸದೀಯ ಮಂಡಳಿ ಸಭೆ ಸೇರಲಿದೆ ಎಂದು ದಿಲ್ಲಿ ಮೂಲಗಳು ಹೇಳಿವೆ.
ಪೃಥ್ವಿರಾಜ್ ಮಾರ್ಗದಲ್ಲಿರುವ ಅಡ್ವಾಣಿ ಮನೆಗೆ ಗುರುವಾರ ರಾತ್ರಿ ಧಾವಿಸಿದ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಕರ್ನಾಟಕದ ಬೆಳವಣಿಗೆ ಕುರಿತು ವಿವರಿಸಿದರು. ಗಡ್ಕರಿ ಅವರು ಸುಮಾರು 1 ಗಂಟೆ ಕಾಲ ಅಡ್ವಾಣಿ ಅವರ ಜತೆ ಸಮಾಲೋಚನೆ ನಡೆಸಿ, ಜಗದೀಶ್ ಶೆಟ್ಟರ್ ನೇಮಕಕ್ಕೆ ಅನುಮೋದನೆ ಪಡೆದರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ, ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೂ ಗಡ್ಕರಿ ಸುದೀರ್ಘ ಮಾತುಕತೆ ನಡೆಸಿದರು. ಆದರೆ ಪಕ್ಷಕ್ಕೆ ಸಂಬಂಧಪಟ್ಟಂತೆ ಯಾವುದೇ 'ಉನ್ನತ' ನಿರ್ಧಾರ ಕೈಗೊಳ್ಳುವುದು ಬಿಜೆಪಿಯ ಸಂಸದೀಯ ಮಂಡಳಿಗೆ ಬಿಟ್ಟ ವಿಚಾರ. ಹಾಗಾಗಿ ನಾಳೆ ಕರೆದಿರುವ ಸಂಸದೀಯ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.
ಇದೇ ಸಭೆಯಲ್ಲಿ ಬಿಜೆಪಿ ಆಡಳಿತದ ರಾಜ್ಯವೊಂದರಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯ ಸ್ಥಾನ ಸೃಷ್ಟಿಸುವ ಮತ್ತು ಆ ಸ್ಥಾನದಲ್ಲಿ ಯಾರನ್ನು ಪ್ರತಿಷ್ಠಾಪಿಸಬೇಕು ಎಂಬುದರ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications