'ಉಚಿತ' ಜನರಿಕ್ ಔಷಧಿ: ಕೇಂದ್ರದಿಂದ 27000 ಕೋಟಿ ರೂ
ಬೆಂಗಳೂರು, ಜುಲೈ 6: ಕಳೆದ ತಿಂಗಳು ಅಪರೂಪಕ್ಕೆ ಎಂಬಂತೆ ಜನಸಾಮಾನ್ಯರ ನೆರವಿಗಾಗಿ ರಾಜ್ಯ ಸರಕಾರವು ಅರ್ಧಕ್ಕೆ ಅರ್ಧ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಮಾರಾಟ ಮಾಡಲು ಜನತಾ ಬಜಾರ್ ಜನರಿಕ್ ಡ್ರಗ್ ಸ್ಟೋರುಗಳನ್ನು ತೆರೆದಿದೆ. ಇದೇನು ಬಾಲಿವುಡ್ ನಟ ಅಮೀರ್ ಖಾನರ 'ಸತ್ಯಮೇವ ಜಯತೆ' ಪ್ರಭಾವವೋ ಏನೋ ಅಂತೂ ಜನಪರ ನಿರ್ಧಾರ ತೆಗೆದುಕೊಂಡಿತು. ಸಮಾಧಾನಕರ ಸಂಗತಿಯೆಂದರೆ ಕೇಂದ್ರ ಸರಕಾರವೂ ಇದೇ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಮುಂದಾಗಿದೆ.

ಸಮಾಧಾನಕರ ಸಂಗತಿಯೆಂದರೆ ಹಣಕ್ಕಾಗಿ ಬಾಯ್ಬಿಡುವ, cartel ಸ್ಥಾಪಿಸಿಕೊಂಡು ಉದ್ಯಮವನ್ನು ಆಳುವ ಔಷಧೋದ್ಯಮವು ಕೇಂದ್ರದ ಈ ಯೋಜನೆಯನ್ನು ಸ್ವಾಗತಿಸಿದೆ. 'ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಔಷಧ ಸರಬರಾಜು ಸಂಬಂಧ ಸರಕಾರ ಜಾರಿಗೆ ತರುವ ಯಾವುದೇ ಯೋಜನೆ ಸ್ವಾಗತಾರ್ಹ' ಎಂದು ಉದ್ಯಮ ಪ್ರತಿಕ್ರಿಯಿಸಿದೆ.
ಈ ಅಮೂಲ್ಯ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕಡಿಮೆ ಬೆಲೆಯ ಉಚಿತ ಜನರಿಕ್ ಔಷಧಗಳು ಲಭ್ಯವಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ. ಈ ಔಷಧಗಳು ಕಂಪನಿಗಳ ಬ್ರ್ಯಾಂಡೆಡ್ ಔಷಧಗಳಿಗಿಂತ ಕಡಿಮೆ ಬೆಲೆಗೆ ದೊರೆಯಲಿವೆ. ಇದರಿಂದ ಎಲ್ಲರಿಗೂ ಉಚಿತ ಔಷಧೋಪಚಾರ ದೊರಕಲಿದೆ.
12ನೆಯ ಪಂಚವಾರ್ಷಿಕ ಯೋಜನೆಯಡಿ ಇದು ಪ್ರಸ್ತಾವನೆಗೊಂಡಿದ್ದು, ಕೇಂದ್ರ ಸರಕಾರ 20 ಕೋಟಿ ರುಪಾಯಿಗಳನ್ನು ವಿನಿಯೋಗಿಸಲಿದೆ. ಇದೇ ವೇಳೆ ಇತರೆ ರಾಜ್ಯಗಳು 7 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಿವೆ.
ಈ ಯೋಜನೆಯಿಂದಾಗಿ ದೇಶೀಯ ಸ್ತರದಲ್ಲಿ ಜನರಿಕ್ ಔಷಧ ಉತ್ಪಾದನೆ ಮಾಡುವ 1.1 ಲಕ್ಷ ಕೋಟಿ ರು.ಗಳ ಉದ್ಯಮಕ್ಕೂ ನಿಜವಾದ ಟಾನಿಕ್ ನೀಡಿದಂತಾಗಿದೆ. ಏಕೆಂದರೆ ಈ ಕಂಪನಿಗಳು ಇದುವರೆಗೂ ಜನರಿಕ್ ಔಷಧಗಳನ್ನು ಉತ್ಪಾದಿಸಿ, ತೃತೀಯ ಬಡ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದವು. ಆದ್ದರಿಂದ ಈ ಉದ್ಯಮ ಈಗ ದೇಶೀಯ ಮಾರುಕಟ್ಟೆಗೂ ತನ್ನ ಉತ್ಪಾದನೆಯನ್ನು ವಿನಿಯೋಗಿಸಬಹುದಾಗಿದೆ.












Click it and Unblock the Notifications