ಸುದ್ದಿಗೋಷ್ಠಿ: ಸಿಎಂ ಸದಾನಂದರಿಂದ ವಂದನಾರ್ಪಣೆ

sadananda-hints-at-change-in-karnataka-leadership
ಬೆಂಗಳೂರು, ಜುಲೈ 4: ರಾಜ್ಯ ಬಿಜೆಪಿಯಲ್ಲಿ ಒಂದಂತೂ ಸುಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡರು ಕೆಲವೇ ಕ್ಷಣಗಳ ಹಿಂದೆ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಿ ನೋಡಿದರೆ ಸದಾನಂದರು ಕುರ್ಚಿಯಿಂದ ಕೆಳಗಿಳಿಯುವುದು ಬಹುತೇಕ ಆಖೈರುಗೊಂಡಿದೆ ಎನ್ನಬಹುದು.

ರಾಜಕೀಯ ಜೀವನದಲ್ಲಿರುವ ವ್ಯಕ್ತಿಗೆ ಇದೆಲ್ಲ ಸಾಮಾನ್ಯ ಮತ್ತು ಸಹಜ. ಸಿಹಿ-ಕಹಿ ಅಂತ ಭೇದ ಭಾವ ಇಲ್ಲ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವೆ. ಆದರೆ ಇದನ್ನು ಮಾಧ್ಯಮಗಳೂ ಗುರುತಿಸದೇ ಹೋದವು. ನಿನ್ನೆ ನಾನು ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಜಗದೀಶ್ ಶೆಟ್ಟರ್ ಇಬ್ಬರೂ ಒಟ್ಟೊಟ್ಟಿಗೇ ಹೋಗಿ ನಮ್ಮ ಅಹವಾಲುಗಳನ್ನು ವರಿಷ್ಠರ ಮುಂದೆ ಸಲ್ಲಿಸಿದೆವು. ಯಾರಾದರೂ ಪ್ರತಿಸ್ಪರ್ಧಿಯ ಜತೆ ಹಾಗೆ ಹೋಗುತ್ತಾರಾ? ಅಂದರೆ ನಾನು ಸಿಹಿ ಕಹಿಯನ್ನು ಸ್ವೀಕರಿಸುವ ಪರಿಯಿದು ಎಂದು ಸದಾನಂದರು ತಮ್ಮನ್ನು ತಾವೇ ಸಮರ್ಥಿಸಿಕೊಂಡರು.

ಕಳೆದ 11 ತಿಂಗಳಿಂದ ಉತ್ತಮ ಕೆಲಸವನ್ನೇ ಮಾಡುತ್ತಾ ಬಂದಿದ್ದೇನೆ. ವರಿಷ್ಠರಿಗೆ ಅದೆಲ್ಲ ಗೊತ್ತಿದ್ದರೂ ಮತ್ತೊಮ್ಮೆ ಅದನ್ನೇ ನಿನ್ನೆ ಹೇಳಿಬಂದಿದ್ದೇನೆ. ಹೆಚ್ಚಿನದೇನೂ ಹೇಳುವುದಕ್ಕೆ ಇಲ್ಲ. ಮೂರು ದಿನಗಳಲ್ಲಿ ವರಿಷ್ಠರು ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ' ಎಂದು ಸದಾ ನಗುಮುಖ ಹೊತ್ತಿರುವ ಗೌಡರು ಮ್ಲಾನವದನರಾಗಿ ತಮ್ಮೊಳಗಿನ ದುಃಖವನ್ನು ಹೊರಹಾಕಿದ್ದಾರೆ.

ಹೈಕಮಾಂಡ್ ಬಹುಶಃ ಸದಾನಂದರಿಗೆ ಪೂರಕವಾದ ನಿರ್ಧಾರ ಕೈಗೊಂಡಂತಿಲ್ಲ. ಆದರೂ ಎಲ್ಲವನ್ನೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

11 ತಿಂಗಳ ಅವಧಿಯಲ್ಲಿ ನಾನು ಯಾವುದೇ ತಪ್ಪು ಮಾಡಲಿಲ್ಲ. ತಪ್ಪು ಮಾಡಿದವರು ಬೇರೆ ಯಾರೋ (ಯಡಿಯೂರಪ್ಪ?) ಇದ್ದಾರೆ ಎಂದು ಹೇಳಲು ಬಾಯಿ ಮಾಡಿದರಾದರೂ ಅದೇಕೋ ಮಾತನ್ನು ತುಂಡರಿಸಿ ಬೇರೆಯವರು ಮುಖ್ಯಮಂತ್ರಿಯಾದರೂ ಕಹಿ ಎಂದು ಭಾವಿಸುವುದಿಲ್ಲ ಎಂದು ಓತಪ್ರೋತವಾಗಿ ಹೇಳಿದರು.

ನಿಷ್ಕಳಂಕ ಆಡಳಿತ ನೀಡಿದ್ದೇನೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಅಪಚಾರ ಎಸಗಿಲ್ಲ . ಇಂತಹ ಸನ್ನಿವೇಶದಲ್ಲಿ ನಾನು ಹೆದರಬೇಕಿಲ್ಲ. ಮುಖ್ಯಮಂತ್ರಿಯಾಗುವ ಮುನ್ನವೂ ಪಕ್ಷದ ನಿರ್ಣಯದಂತೆ ನಡೆದುಕೊಂಡಿದ್ದೇನೆ. ಈಗಲು ಸಹ ಪಕ್ಷದ ಆದೇಶಕ್ಕೆ ತಲೆಬಾಗಲಿದ್ದೇನೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳಿಂದ ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರಿಗೆ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಬೆಳವಣಿಗೆಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ಪಕ್ಷದ ನಾಯಕರು ಯೋಚಿಸುವಂತಾಗಬೇಕು. ಇಲ್ಲಿನ ಎಲ್ಲ ವಿಷಯಗಳನ್ನೂ ವರಿಷ್ಠರಿಗೆ ವಿವರಿಸಿದ್ದೇನೆ. ಒಂಬತ್ತು ಸಚಿವರ ರಾಜೀನಾಮೆ, ಗೊಂದಲ ಎಲ್ಲ ವಿಚಾರಗಳ ಬಗ್ಗೆಯೂ ವರಿಷ್ಠರು ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಸಣ್ಣಪುಟ್ಟ ವಿಷಯಗಳು ವೈಭವೀಕರಿಸಿದ್ದು ನನಗೆ ಬೇಸರ ತರಿಸಿದೆ. ನಮ್ಮಲ್ಲಿನ ಒಗ್ಗಟ್ಟಿನ ಬಗ್ಗೆ ಸುದ್ದಿಯಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಕೇಂದ್ರ ಸರ್ಕಾರ ನೀಡಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿದೆ. ಆದರೆ, ರಾಜ್ಯ ಕೇಳಿದಷ್ಟು ಹಣ ಬಿಡುಗಡೆ ಮಾಡುತ್ತಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ಪತ್ರ ವ್ಯವಹಾರ ಮುಂದುವರಿಸಲಾಗುವುದು. ರಾಜಕೀಯ ಜಂಜಾಟದಲ್ಲಿ ಬರಪೀಡಿತ ಪ್ರದೇಶಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಯಾರಲ್ಲು ಮೂಡುವುದು ಬೇಡ ಎಂದು ಸದಾನಂದಗೌಡರು ಹೇಳಿದರು.

ಇದೇ ತಿಂಗಳ 16ರಿಂದ ವಿಧಾನಮಂಡಲದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ತಿಳಿಸಿದ್ದಾರೆ.

ಶುಕ್ರವಾರ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಇದರಲ್ಲಿ ಜುಲೈ 16 ರಿಂದ ವಿಧಾನಮಂಡಲ ಅಧಿವೇಶನ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿರುವುದರಿಂದ ಬೆಳಗಾವಿಯಲ್ಲಿ ಈ ಬಾರಿ ಅಧಿವೇಶನ ನಡೆಸಲು ಸಾಧ್ಯವಾಗದು. ಅಲ್ಲಿನ ಸುವರ್ಣಸೌಧ ಉದ್ಘಾಟನೆಯಾದ ನಂತರ ಮುಂದಿನ ಅಧಿವೇಶನ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+