ಸದಾನಂದ ಸಚಿವರಿಂದಲೂ ರಾಜೀನಾಮೆಗೆ ಮಹೂರ್ತ

ಮುಖ್ಯಮಂತ್ರಿ ಸದಾನಂದ ಗೌಡರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಸಚಿವ ಜಾರಕಿಹೊಳಿ ಮತ್ತು ಆಸ್ನೋಟಿಕರ್ ಅವರು ಮಧ್ಯಾಹ್ನ 2 ಗಂಟೆಗೆ ರಾಜೀನಾಮೆ ಸಲ್ಲಿಸಲು ಮಹೂರ್ತ ನಿಗದಿಪಡಿಸಿದ್ದಾರೆ.
'ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸದಾನಂದ ಗೌಡರನ್ನು ಕೆಳಗಿಳಿಸಬಾರದು. ಹಾಲಿ ಸರಕಾರ 5 ವರ್ಷ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಆದ್ದರಿಂದ ಮೊದಲು ನಾವಿಬ್ಬರು ರಾಜೀನಾಮೆ ನೀಡುತ್ತೇವೆ. ಆ ನಂತರ, ಪರಿಸ್ಥಿತಿ ನೋಡಿಕೊಂಡು ಇತರೆ ಶಾಸಕರೂ ಮುಖ್ಯಮಂತ್ರಿ ಕೈಗೆ ರಾಜೀನಾಮೆ ಸಲ್ಲಿಸಲಿದ್ದಾರೆ' ಎಂದು ಆಸ್ನೋಟಿಕರ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ, ಯಾವುದೇ ಬಣದೊಂದಿಗೂ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಗೃಹ ಸಚಿವ ಆರ್ ಅಶೋಕ್ ಅವರು ಬೆಂಗಳೂರಿಗೆ ಬಂದಿಳಿದ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಸ್ವಾಗತಿಸಿದ್ದಾರೆ.
ಬಚ್ಚೇಗೌಡ ಹೇಳಿಕೆಗೆ ಸುರೇಶ್ ಗೌಡ ಕೆಂಡಾಮಂಡಲ:
ಮಾಜಿ ಮುಖ್ಯಮಂತ್ರಿಯೊಬ್ಬರ ಚಿತಾವಣೆಯ ಮೇರೆಗೆ ಕೆಲವು ಸಹೋದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎಂದು ಬಚ್ಚೇಗೌಡರು ಹಗುರವಾಗಿ ಮಾತನಾಡಿರುವುದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ತುಮಕೂರು ಶಾಸಕ, ಯಡಿಯೂರಪ್ಪ ಅವರ ಕಟ್ಟರ್ ಬೆಂಬಲಿಗ ಸುರೇಶ್ ಗೌಡ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಚ್ಚೇಗೌಡರು ಹೀಗೆ ಮಾತನಾಡುವ ಮುನ್ನ ತಮ್ಮ ಇತಿಹಾಸ ಏನು ಎಂಬುದನ್ನು ಅರಿತುಕೊಳ್ಳಲಿ. Congress, JDS ಪಕ್ಷಗಳು ಆಡಳಿತದಲ್ಲಿದ್ದಷ್ಟೂ ದಿನ ಮಂತ್ರಿಗರಿ ಅನುಭವಿಸಿ, ಆ ಬಳಿಕ ಮಂತ್ರಿಗಿರಿ ಆಸೆಗಾಗಿ BJPಗೆ ಹಾರಿದ ಕುಖ್ಯಾತಿ ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡ ಅವರಿಗೆ ಸಲ್ಲುತ್ತದೆ. ಅಂತಹ ವ್ಯಕ್ತಿ ನಮ್ಮ ಧೀಮಂತ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಈ ಬಗ್ಗೆ ಯಡಿಯೂರಪ್ಪನವರೇ ಸರಿಯಾದ ಪ್ರತಿಕ್ರಿಯೆ ನೀಡುತ್ತಾರೆ.
ಒಂದು ವಾರದ ಹಿಂದೆ ನಾನು ನನ್ನ ಕ್ಷೇತ್ರದ ಬಗ್ಗೆ ಮಾತನಾಡಲು ಬಚ್ಚೇಗೌಡರನ್ನು ಭೇಟಿ ಮಾಡಿದ್ದೆ. ಆಗ ಸನ್ಮಾನ್ಯ ಬಚ್ಚೇಗೌಡರು - ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಅವರು ತನ್ನನ್ನು ಕಾಂಗ್ರೆಸ್ಸಿಗೆ ಕರೆಯುತ್ತಿದ್ದಾರೆ. ಆದ್ದರಿಂದ ನೀವೂ (ಸುರೇಶ್ ಗೌಡ) ಬನ್ನಿ. ಅತ್ಲಾಗೆ ಕಾಂಗ್ರೆಸ್ಸಿಗೆ ಹೋಗಿಬಿಡೋಣ - ಎಂದು ನನಗೆ ಆಹ್ವಾನ ನೀಡಿದರು.
ಅಧಿಕಾರಕ್ಕಾಗಿ ಬಚ್ಚೇಗೌಡರು ಯಾವುದೇ ಪಕ್ಷದ ಜತೆಯೂ ಕೈಜೋಡಿಸಬಲ್ಲರು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ನಾಲ್ಕು ವರ್ಷಗಳ ಹಿಂದೆ ಮಂತ್ರಿಗಿರಿಗಾಗಿ ಬಿಜೆಪಿಗೆ ಬಂದ ಬಚ್ಚೇಗೌಡರಿಂದ, ಮೊದಲಿನಿಂದಲೂ ಬಿಜೆಪಿಯಲ್ಲಿರುವ ನಾವು ಪಾಠ ಕಲಿಯಬೇಕಿಲ್ಲ.












Click it and Unblock the Notifications