ಬಿಜೆಪಿ ನಾಟಕದ ಬಗ್ಗೆ ಜನತೆಯ ತೀವ್ರ ಆಕ್ರೋಶ

bjp-crisis-karnataka-people-show-anger
ಬೆಂಗಳೂರು, ಜೂನ್ 30: ರಾಜ್ಯದ ಮಹಾಜನತೆಗೆ ಹೇಸಿಗೆ ಹುಟ್ಟಿಸುವಷ್ಟು ಬಿಜೆಪಿ ಯಲ್ಲಿ ಆಂತರಿಕ ಕಲಹ ನಡೆಯುತ್ತಿದ್ದರೂ 'ಬಿಕ್ಕಟ್ಟು ಇಲ್ಲ; ಏನೂ ಇಲ್ಲ. ಯಾರೋ ತಲೆಕೆಟ್ಟು ಅಂತ ಹೇಳಿಕೆ ನೀಡಿರಬೇಕು ಅಷ್ಟೇ. ನೋಡಿ, ಶೇ. 99ರಷ್ಟು ಮಂದಿ ಪಕ್ಷದ ಜತೆಗಿದ್ದಾರೆ' ಎಂದು ಸನ್ಮಾನ್ಯ ಗೃಹ ಸಚಿವ ಆರ್. ಅಶೋಕ್ ಅವರು ಹೇಳಿಕೆ ನೀಡಿದ್ದಾರೆ.

ಇದನ್ನು ಕೇಳಿಸಿಕೊಂಡ ಮಹಾಜನತೆ ಯಾವ ಕಡೆಯಿಂದ ನಗಬೇಕೋ ತಿಳಿಯದೇ ಸುಖಾಸುಮ್ಮನೆ ಮಜಾ ತಗೋತಿದ್ದಾರೆ. 'ಅಲ್ಲ ಈ ಅಶೋಕ ಮಹಾರಾಜರು ಆ ಒಂದು ಪರ್ಸೆಂಟನ್ನೂ ಏಕೆ ಬಿಟ್ಟರು. ಅದನ್ನೂ ಸೇರಿಸಿಕೊಂಡು ಪಕ್ಷಕ್ಕೆ ನೂರು ತುಂಬಿದೆ. ಇನ್ನು ಅಷ್ಟೇಯಾ ಪಕ್ಷದ ಭವಿಷ್ಯ' ಎಂದು ಏಕೆ ಹೇಳಲಿಲ್ಲವೋ ಎಂದು ಅಸಹ್ಯದಿಂದ ಕೇಳುತ್ತಿದ್ದಾರೆ.

ಅಥವಾ ಆ ಒಂದು ಪರ್ಸೆಂಟು ತಾವೇನೋ ಎಂದು ಭಾವಿಸಿರಬೇಕು ಎಂದು ಜನ ಕೇಳತೊಡಗಿದ್ದಾರೆ. ಅಂದರೆ ಅಶೋಕ ಮಹಾರಾಜರು ಪಕ್ಷದಲ್ಲಿ ಏಕಾಂಗಿ ಆಗಿದ್ದಾರಾ? ಅಥವಾ ಸದಾನಂದವೂ ಬೇಡ ಜಗದೀಶರ ಜಗನ್ನಾಟಕವೂ ಬೇಡ.

ಯಾವುದೇ ಜಗಳ ಕಂಡುಬಂದಾಗ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ತಮಗೇನಾದರೂ ಮುಖ್ಯಮಂತ್ರಿ ಅಲಂಕರಿಸಲು ಮಹಾವಕಾಶ ಪ್ರಾಪ್ತಿಯಾಗುತ್ತದಾ? ಎಂದು ಕಾದು ಕುಳಿತಿದ್ದಾರಾ ಎಂದೂ ಜನ ಅಶೋಕರ ನಡೆ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬರಗಾಲ ಬಿದ್ದು, ಜನ ಕಂಗಾಲಾಗಿರುವಾಗ ಇವರದೇನು ಕಿತಾಪತಿ? ಕುಡಿಯೋಕ್ಕೆ ನೀರಿಲ್ಲ. ಜನ, ಜಾನುವಾರುಗಳು ದಿಕ್ಕೆಟ್ಟು ಕುಳಿತಿದ್ದಾರೆ. ಜನರ ಬಗ್ಗೆ ಈ ಶೇ. 99ರಷ್ಟು ನಾಯಕರಿಗೆ (ಶೇ. 1 ರಷ್ಟಿರುವ ಅಶೋಕ್ ಸೇರಿದಂತೆ) ಕಾಳಜಿಯೇ ಇಲ್ಲವಾ? ಏನಿದು ರಾಜೀನಾಮೆ ಪ್ರಹಸನಗಳು? ತಾಕತ್ತಿದ್ದರೆ ನೇರವಾಗಿ ಸ್ಪೀಕರ್ ಗೆ ರಾಜೀನಾಮೆ ಬಿಸಾಕಿ, ಅತ್ಲಾಗೆ ಹೋಗಲಿ. ಅಂದರೆ ವಿಧಾನ ಸಭೆ ವಿಸರ್ಜಿಸಿ, ಮತ ಭಿಕ್ಷೆಗೆ ನಮ್ಮಲ್ಲಿಗೆ ಬರಲಿ. ಆಗ ತೋರಿಸುತ್ತೇವೆ ನಮ್ಮ ತಾಕತ್ತು ಎಂದು ಬಿಜೆಪಿ ಜಗನ್ನಾಟಕ ಕಂಡು ಜನ ಸಿಡಿಮಿಡಿಗೊಳ್ಳುತ್ತಿದ್ದಾರೆ.

ಆಂಗ್ರಿ ಬರ್ಡ್ಸ್: ವೆಬ್ ಸೈಟುಗಳಲ್ಲಿ, ಇಮೇಲುಗಳಲ್ಲಿ ಬಿಜೆಪಿಯ ನಾಟಕವನ್ನು ಖಂಡತುಂಡವಾಗಿ ಖಂಡಿಸುತ್ತಿದ್ದಾರೆ. ಇಂತಹ ಪಕ್ಷ ರಾಜ್ಯವನ್ನು ಆಳುತ್ತಿರುವುದು ನಮ್ಮ ದುರಂತವೇ ಸರಿ ಎಂದು ಜನ ಶುಕ್ರವಾರದಿಂದ ಒಂದೇ ಸಮನೆ ಕಿಡಿಕಾರುತ್ತಿದ್ದಾರೆ. ಉತ್ತರ ಕರ್ನಾಟಕದ ಬರಗಾಲದ ಬಗ್ಗೆ ಅತೀವ ಕಾಳಜಿ ತೋರಿರುವ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸಹ ಇದನ್ನೇ ಹೇಳಿದ್ದಾರೆ.

ಅಂದಹಾಗೆ, ರಾಜ್ಯ ಬಿಜೆಪಿ ನಾಯಕರ ಬೀದಿ ಜಗಳ ಇನ್ನೂ ಮುಗಿದಿಲ್ಲ. ರಾಜ್ಯದ ಉಸ್ತುವಾರಿ ಹೊತ್ತಿರುವ ವರಿಷ್ಠ ಧರ್ಮೇಂದ್ರ ಪ್ರಧಾನ್ ಪಕ್ಷ ನಿಲುವೇನು ಎಂಬುದನ್ನು ಇನ್ನೂ ಹೇಳಿಲ್ಲ. ಕರ್ನಾಟಕದ ಬಿಜೆಪಿ ಮಂದಿಯ ಆಂತರಿಕ ಕಲಹ ನಿರ್ಣಾಯಕ ಘಟ್ಟ ತಲುಪಿರುವಾಗ ರಾಜ್ಯ ಜನತೆಯ ಸಹನೆಯ ಕಟ್ಟೆಯೂ ಒಡೆದಿದೆ. ಬಹಿರಂಗವಾಗಿಯೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನೀವೇನನ್ನುತ್ತೀರಿ!?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+