ದುಬಾರಿ ಗ್ಯಾಜೆಟ್ಸ್ ದೋಚಿದ ಪಬ್ ಪರಿಚಾರಿಕೆಯರು!

ಸುಮಾರು 6 ಲಕ್ಷ ರುಪಾಯಿ ಬೆಲೆಬಾಳುವ ಕಂಪ್ಯೂಟರುಗಳು, ಎಲ್ ಸಿಡಿ ಟಿವಿಗಳು, ಸಿಸಿಟಿವಿ ಕ್ಯಾಮರಾಗಳನ್ನು ಶನಿವಾರ ಹೊತ್ತೊಯ್ದಿದ್ದ ಆ ಮೂರೂ ಯುವತಿಯರನ್ನು ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ. ಅಂಧೇರಿಯ ಯಾಸ್ಮಿನ್ ಅಬ್ದುಲ್ ಷೇಕ್ (23), ಮಲಾಡಿನ ಶಿರಿಲಾಲ್ ಸೆಬಾಸ್ಟಿನ್ (20) ಮತ್ತು ಮಲಾಡಿನ ಮಲ್ವಾನಿಯ ಅಶ್ರಫ್ ಷೇಕ್ ಎಂಬ ಯುವತಿಯರು ಈಗ ಪೊಲೀಸ್ ಅತಿಥಿಗಳಾಗಿದ್ದಾರೆ.
ಏಳು ತಿಂಗಳಿಂದ Soda Pub Jointನಲ್ಲಿ ದುಡಿಯುತ್ತಿದ್ದ ಈ ಯುವತಿಯರು ಪಬ್ ನಲ್ಲಿ ಇತ್ತೀಚೆಗೆ ಕಳ್ಳತನದಲ್ಲಿ ನಿರತರಾಗಿದ್ದರೆಂದು ಪಬ್ ಮಾಲೀಕ ವಿಕ್ರಂ ಸೇಠ್ ಮೊನ್ನೆ ಗುರುವಾರ ಕೆಲಸದಿಂದ ತೆಗೆದುಹಾಕಿದ್ದರು.
ಒಂದೆಡೆ ತಮ್ಮನ್ನು ಕೆಲ್ಸದಿಂದ ತೆಗೆದುಹಾಕಿದ್ದಷ್ಟೇ ಅಲ್ಲದೆ ಸಂಬಳಗಳನ್ನು ಬಾಕಿ ಉಳಿಸಿಕೊಂಡ ಪಬ್ ಮಾಲೀಕನಿಗೆ ಸರಿಯಾಗಿ ಪಾಠ ಕಲಿಸಲು ನಿರ್ಧರಿಸಿದ ಈ ಯುವತಿಯರು ಜಂಟಿ ಕಾರ್ಯಾಚರಣೆಗೆ ಇಳಿದು 6 ಲಕ್ಷ ರುಪಾಯಿ ಮೌಲ್ಯದ ಗ್ಯಾಜೆಟ್ಸ್ ದೋಚಿದರು!
ಯುವತಿಯರು ದೋಚಿದ್ದು ಹೇಗೆ?: ಶನಿವಾರ ರಾತ್ರಿ ಪಬ್ ಬಾಗಿಲು ಮುಚ್ಚಿದಾಗ ಪಕ್ಕದ ಬಿಲ್ಡಿಂಗಿನಲ್ಲಿದ್ದ ವಾಚ್ ಮನ್ ನಿಂದ ಬೀಗದ ಕೀಯನ್ನು ಪಡೆದಿದ್ದಾರೆ. ಬೀಗದ ಕೈ ಸಿಗುತ್ತಿದ್ದಂತೆ ಕಾವಲುಗಾರನಿಗೆ ಅನುಮಾನಕ್ಕೆ ಆಸ್ಪದ ನೀಡದಂತೆ ಪೂರ್ವ ನಿಯೋಜಿತ ಕೆಲಸವನ್ನು ಮಾಡಿಮುಗಿಸಿದ್ದಾರೆ.
ಕೊನೆಗೆ ಪಕ್ಕದ ಬಿಲ್ಡಿಂಗ್ ( ಕೀ ಹಸ್ತಾಂತರಿಸಿದ ವಾಚ್ ಮನ್ ಇದ್ದ ಬಿಲ್ಡಿಂಗ್) ಸಿಸಿಟಿವಿಯಲ್ಲಿ ಅಷ್ಟೂ ಕಳ್ಳತನ ದಾಖಲಾಗಿತ್ತು. ಅದನ್ನು ನೋಡಿದ ಪೊಲೀಸರು ಮೂವರು ಯುವತಿಯರನ್ನು ಬಂಧಿಸಿದ್ದಾರೆ.












Click it and Unblock the Notifications