ಆದಿಚುಂಚನಗಿರಿಶ್ರೀ ಮೇಲೆ ಲೋಕಾಯುಕ್ತ FIR

ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ, ವಿವರ ಸಲ್ಲಿಸುವಂತೆ ನಗರ ಎಸ್ಪಿಯವರಿಗೆ ಸೂಚಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 156/3 ರ ಅಡಿ ಎಫ್ಐಆರ್ ದಾಖಲಾಗಿದೆ. ಮೇಲ್ನೋಟಕ್ಕೆ ಈ ಆರೋಪವು ಸಾಬೀತಾಗಿರುವುದರಿಂದ ಬಾಲಗಂಗಾಧರನಾಥ ಶ್ರೀಗಳ ಜತೆಗೆ, ಎರಡು ಜನ ಸ್ವಾಮೀಜಿಗಳು, ಸೇರಿದಂತೆ 20 ಜನರ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಕ್ರಮ ಭೂಮಿ ಮಾರಾಟದ ಆರೋಪ ಹೊತ್ತಿರುವ ಬಾಲಗಂಗಾಧರನಾಥ ಸ್ವಾಮೀಜಿ, ವೀರಭದ್ರಯ್ಯ, ಪ್ರಶಾಂತನಾಥ ಸ್ವಾಮೀಜಿ ಅವರ ಮೇಲೆ ತನಿಖೆಗೆ ಮಂಗಳವಾರ(ಜೂ.12) ರಂದು ಲೋಕಾಯುಕ್ತ ವಿಶೇಷ ನ್ಯಾಯಪೀಠ ಆದೇಶಿಸಿತ್ತು.
ಪ್ರಕರಣದ ಬಗ್ಗೆ ಆದೇಶ ಹೊರ ಬಿದ್ದಮೇಲೆ ಪ್ರತಿಕ್ರಿಯಿಸಿದ್ದ ಬಾಲಗಂಗಾಧರನಾಥ ಸ್ವಾಮೀಜಿ, 'ಈ ಪ್ರಕರಣಕ್ಕೂ ನಮಗೂ ಏನೂ ಸಂಬಂಧವಿಲ್ಲ. ಯಾವುದೇ ತನಿಖೆ ಎದುರಿಸಲು ಸಿದ್ಧ. ಟ್ರಸ್ಟ್ ನಲ್ಲಿ ನಮ್ಮ ಹೆಸರಿಲ್ಲ' ಎಂದಿದ್ದರು.
23 ಕ್ಕೂ ಅಧಿಕ ಜನರ ಮೇಲೆ ದೂರು ದಾಖಲಾಗಿಸಲಾಗಿತ್ತು. ಆರಂಭದಲ್ಲಿ ಆರೋಪ ಪಟ್ಟಿಯಲ್ಲಿ ಬಿಬಿಎಂಪಿ ಅಧಿಕಾರಿ ಶಂಕರಲಿಂಗೇ ಗೌಡ ಅವರ ಹೆಸರು ಕಾಣಿಸಿಕೊಂಡಿತ್ತು.
ಆದರೆ, ದೂರುದಾರ ಲಕ್ಷ್ಮಿನಾರಾಯಣ ಅವರು ಕೊನೆ ಕ್ಷಣದಲ್ಲಿ ಪಟ್ಟಿ ತಿದ್ದುಪಡಿ ಮಾಡಿ ಆರೋಪಿಗಳ ಪಟ್ಟಿ ಕೋರ್ಟಿಗೆ ಸಲ್ಲಿಸಿದರು.
ಲಕ್ಷ್ಮಿನಾರಾಯಣ ಅವರು ನೀಡಿದ ದೂರನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಮೇ.29ಕ್ಕೆ ಮುಂದೂಡಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಹುಳಿಮಾವು ಬಳಿ ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದ ರಾಮಲಿಂಗೇಶ್ವರ ಟ್ರಸ್ಟ್ ಗೆ 15 ಎಕರೆ ಭೂಮಿ ನೀಡಲಾಗಿತ್ತು.
ಅದರೆ ರಾಮಲಿಂಗೇಶ್ವರ ಟ್ರಸ್ಟ್ ನಿಂದ ಸದರಿ ಭೂಮಿಯನ್ನು ಪಡೆದ ಆದಿಚುಂಚನಗಿರಿ ಸ್ವಾಮೀಜಿ ಅವರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನು ಬಾಹಿರವಾಗಿ ಟ್ರಸ್ಟ್ ನಿಂದ ಭೂಮಿ ವರ್ಗಾವಣೆಯಾಗಿದೆ. ಈ ಅಕ್ರಮದಲ್ಲಿ ಸುಮಾರು 27ಕ್ಕೂ ಹೆಚ್ಚು ಜನ ಆರೋಪಿಗಳಿದ್ದಾರೆ. 5 ಜನ ಐಎಎಸ್ ಅಧಿಕಾರಿಗಳಿದ್ದಾರೆ ಎಂದು ತಿಳಿದು ಬಂದಿದೆ.
ಆದಿಚುಂಚನಗಿರಿ ಟ್ರಸ್ಟ್ ನಿಂದ ಶಾಲೆ, ಆಸ್ಪತ್ರೆ, ಕಾಲೇಜುಗಳನ್ನು ನಡೆಸಿಕೊಂಡು ಬರಲಾಗಿದ್ದು, ಎಲ್ಲೂ ಅಕ್ರಮ ನಡೆದಿಲ್ಲ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಸ್ವಾಮೀಜಿ ಆಪ್ತರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications