ಕಾಂಗೈ ಪಾಳಯದಲ್ಲಿ ತಣ್ಣಗೆ ಬೀಸುತ್ತಿರುವ ಬಿರುಗಾಳಿ

ತಾಜಾ ಆಗಿ ಮೇಲ್ಮನೆ ಚುನಾವಣೆಯಲ್ಲೂ ತನಗೆ ಸಲ್ಲಬೇಕಾದ ಸ್ಥಾನಗಳನ್ನು ದಕ್ಕಿಸಿಕೊಳ್ಳುವಲ್ಲಿ ಅದು ವಿಫಲಗೊಂಡಿದೆ. ಇದರಿಂದ ಪುರಾತನ ನಾಯಕನೊಬ್ಬನಿಗೆ ಸಲ್ಲಬೇಕಾದ ಜಯವೂ ಸಿಗದೆ ಹೋಯಿತು. ಇದುವರೆಗೆ ಅಖಂಡವಾಗಿ ಓಲೈಸಿಕೊಂಡು ಬಂದಿದ್ದ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗೇ ಗೆಲುವು 'ಕೈ'ತಪ್ಪಿತು. ಈ ಬೆಳವಣಿಗೆಗಳು 'ಕೈ' ಪಕ್ಷವನ್ನು ಮತ್ತಷ್ಟು ಹೈರಾಣಗೊಳಿಸಿವೆ.
ಇದರ ಆಸುಪಾಸಿನಲ್ಲೇ ಕಾಂಗ್ರೆಸ್ ಪಕ್ಷವು ಮತ್ತೊಂದು ಕಂಟಕವನ್ನು ಎದುರಿಸುವಂತಾಗಿದೆ. ಹುಟ್ಟಾ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಬಂಡಾಯದ ಬಾವುಟವನ್ನು ಜೋರಾಗಿಯೇ ಬೀಸಿದ್ದಾರೆ. ಅದೂ ರಾಜ್ಯ ರಾಜಕಾರಣದಲ್ಲಿನ ಆಗುಹೋಗುಗಗಳಲ್ಲಿ ಅಧಿಪತ್ಯ ಸ್ಥಾಪಿಸುವ ಲಿಂಗಾಯತ ಜಾತಿಯ ಅಜೆಂಡಾವನ್ನಿಟ್ಟುಕೊಂಡು ಎದ್ದುಕುಳಿತಿದ್ದಾರೆ. ಇದು ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್ಸಿಗೆ ನಿಜಕ್ಕೂ ದುಃಸ್ವಪ್ನ ಕಂಡಂತಿದೆ.
ಸುಮಾರು 6 ದಶಕಗಳಿಂದ ಕಾಂಗ್ರೆಸ್ಸಿಗೆ ಅಚಲ ನಿಷ್ಠೆ ತೋರಿರುವ ಶಾಮನೂರು ಶಿವಶಂಕರಪ್ಪ ಅವರು ಪಕ್ಷದಲ್ಲಿನ ಇತ್ತೀಚಿನ ವಿದ್ಯಾಮಾನಗಳ ಬಗ್ಗೆ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಆದರೆ ಪಕ್ಷದ ಮೂಲ ಚೌಕಟ್ಟು ಶಿಥಿಲಗೊಳ್ಳುತ್ತಿರುವುದನ್ನು ಕಂಡು ಆಕ್ರೋಶಗೊಂಡ ಶಾಮನೂರು ಶಿವಶಂಕರಪ್ಪ ಅವರು ಈಗ ರಾಜ್ಯ ಕಾಂಗ್ರೆಸ್ ಸಮಿತಿಯ ಮೇಲೆ ಅಧಿಪತ್ಯ ಸ್ಥಾಪಿಸಲು ಬಲವಾಗಿ ಹಕ್ಕು ಮಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದೆಡೆಗಿನ ತಮ್ಮ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬುದನ್ನು ಮನದಟ್ಟುಪಡಿಸಿಕೊಂಡಿರುವ ಮೂಲಾ ಕಾಂಗ್ರೆಸ್ಸಿಗ ಶಾಮನೂರು ಅವರು ಪಕ್ಷದ ರಾಜ್ಯ ನಾಯಕರುಗಳನ್ನು ಯಾವುದೇ ಲೆಕ್ಕಕ್ಕೆ ತೆಗೆದುಕೊಳ್ಳದೇ ದೆಹಲಿ ಮಟ್ಟದಲ್ಲೇ ತಮ್ಮ ಅಸ್ತಿತ್ವ ದೃಢಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಒಂದಷ್ಟು ಒಲವನ್ನೂ ಸಂಪಾದಿಸಿದ್ದಾರೆ. ಮೇಲ್ಮನೆ ಸದಸ್ಯೆ ಮೋಟಮ್ಮನಂತಹವರು ಜಾತಿ ರಾಜಕಾರಣ ಸಲ್ಲದು ಎಂದು ಗುಡುಗಿದ್ದರೆ ಹಿರೇಕೆರೂರು ಶಾಸಕ ಬಿಸಿ ಪಾಟೀಲರು ಶಾಮನೂರು ಪರ ಬ್ಯಾಟ್ ಬೀಸಿದ್ದಾರೆ.
ಈ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪ ಅವರು ಹೈಕಮಾಂಡಿನ ಮನಸ್ಥಿತಿಯನ್ನೂ ಅಳೆದಿದ್ದಾರೆ. ಮೊನ್ನೆ ಪಕ್ಷದ ಅಧಿನಾಯಕಿ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದನ್ನು ಬಿಟ್ಟರೆ ಪಕ್ಷದ ವತಿಯಿಂದ ವೀರಶೈವ ಸಮೀಕರಣ ಸಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
'ಅತ್ತ ಆಡಳಿತಾರೂಢ ಬಿಜೆಪಿ ಪಕ್ಷವು ರಾಜ್ಯದಲ್ಲಿನ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅದೇ ಲಿಂಗಾಯತರನ್ನು ನಮ್ಮತ್ತ ಸೆಳೆದುಕೊಳ್ಳುವುದು ಕಾಂಗ್ರೆಸ್ಸಿಗೆ ಸಂಜೀವಿನಿಯಾಗಬಲ್ಲದು. ಲಿಂಗಾಯತರಿಗೆ ಮಣೆ ಹಾಕಿ ನೋಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ಗ್ಯಾರಂಟಿ' ಎಂದು ಪಾಟೀಲರು ಪೊಲೀಸ್ ಶಿಸ್ತಿನೊಂದಿಗೆ ಶಾಮನೂರು ಶಿವಶಂಕರಪ್ಪಗೆ ಸೆಲ್ಯೂಟ್ ಹೊಡೆದಿದ್ದಾರೆ.
ಹಾಗೆ ನೊಡಿದರೆ, ಕೆಪಿಸಿಸಿಯಲ್ಲಿ ಇತ್ತೀಚಿಗೆ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕೂಗು, ಕೊರಗು ಜೋರಾಗಿಯೇ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗಿರಲಿ ಸಮಿತಿ ಸದಸ್ಯರುಗಳ ಪೈಕಿ ಯಾರಾದರೂ ಲಿಂಗಾಯತರಿದ್ದಾರಾ? ಎಂದು ನೋಡಿದರೆ ಉಹುಂ, ಭೂತಗನ್ನಡಿ ಹಾಕಿಕೊ0ಡು ಹುಡುಕಿದರೂ ಲಿಂಗಾಯತರ ಪ್ರಾತಿನಿಧ್ಯ ಅಷ್ಟಕ್ಕಷ್ಟೇ ಇದೆ.
ಇದೇ ಶಾಮನೂರು ಗುಂಪನ್ನು ರೊಚ್ಚಿಗೆಬ್ಬಿಸಿರುವುದು. ಹಾಗಾಗಿಯೇ, ಶಾಮನೂರು ಶಿವಶಂಕರಪ್ಪ ಅವರು ಈ ಬಾರಿ ಲಿಂಗಾಯತ card ಅನ್ನು ಬಲವಾಗಿ ಎತ್ತಿಹಿಡಿದಿದ್ದಾರೆ. ದಾವಣಗೆರೆಯ ಉದ್ಯಮಿ, ಹಿರಿಯ ರಾಜಕೀಯ ನೇತಾರ ತಮ್ಮ ಇಳಿವಯಸ್ಸಿನಲ್ಲಿ ಪಕ್ಷದ ಚುಕ್ಕಾಣಿ ಹಿಡಿದು, ವಿಜಯಪತಾಕೆ ಹಾರಿಸುತ್ತಾರಾ? ವೀರಶೈವ ಮತದಾರ ಏನನ್ನುತ್ತಾರೆ? ಕಾದುನೊಡಬೇಕು.












Click it and Unblock the Notifications