ಶಾಸಕಾಂಗ ಪಕ್ಷ ಸಭೆ ಕರೆಯಲು ಸಿದ್ಧ : ಸದಾನಂದ ಗೌಡ

ಬುಧವಾರ ಜನತಾ ದರ್ಶನದಲ್ಲಿ ಭಾಗಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸದಾನಂದ ಗೌಡರು, ಶಾಸಕಾಂಗ ಪಕ್ಷದ ಸಭೆ ಕರೆಯಲು ನನಗೇನೂ ಅಭ್ಯಂತರವಿಲ್ಲ. ಆದರೆ, ಸಭೆ ಕರೆಯಲು ಬಿಜೆಪಿ ಹೈಕಮಾಂಡಿನಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಸಂಗತಿಯನ್ನು ದೆಹಲಿಯ ಹಿರಿಯ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಅವರ ಪದಚ್ಯುತಿಯ ಬೇಡಿಕೆ ಮುಂದಿಟ್ಟುಕೊಂಡು, ಯಡಿಯೂರಪ್ಪನವರ ಪಾಳಯ ಒಂದು ನಿಯೋಗ ದೆಹಲಿಗೆ ತೆರಳಲು ಸಿದ್ಧವಾಗಿದೆ ಎಂಬ ಸಂಗತಿಗೆ ಪ್ರತಿಕ್ರಿಯಿಸಿರುವ ಅವರು, ಯಾರು ಬೇಕಾದರೂ ದೆಹಲಿಗೆ ಹೋಗಲಿ, ಏನೇ ಬೇಡಿಕೆ ಇಡಲಿ, ಯಾರನ್ನೇ ಭೇಟಿಯಾಗಲಿ ನಾನು ಹೆದರುವುದಿಲ್ಲ. ಸದ್ಯದಲ್ಲಿಯೇ ಸಂಪುಟವನ್ನು ವಿಸ್ತರಿಸಲಿದ್ದು, ನನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳುತ್ತೇನೆ. ಇದನ್ನೆಲ್ಲ ನೋಡಿಕೊಳ್ಳಲು ಹಿರಿಯ ನಾಯಕರಿದ್ದಾರೆ. ಅವರ ಅಣತಿಯಂತೆ ಮುಂದೆ ನಡೆದುಕೊಳ್ಳುತ್ತೇನೆ ಎಂದು ಸದಾನಂದ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾನಂದ ಗೌಡರ ಸ್ಥಾನದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ತರಬೇಕೆಂದು ಆಗ್ರಹಿಸುತ್ತಿರುವ ಯಡಿಯೂರಪ್ಪ ಮತ್ತು ಹಿಂಬಾಲಕರು, ಇನ್ನು ಮೂರು ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಸದಾನಂದ ಗೌಡರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮೊದಲು ಯಡಿಯೂರಪ್ಪ ಅವರ ನಿವಾಸದಲ್ಲಿ ಭೇಟಿಯಾಗಿದ್ದ ಯಡಿಯೂರಪ್ಪ ಬಣ, ನಂತರ ಸಂಜೆ ಉದಾಸಿ ಮನೆಯಲ್ಲಿಯೂ ಭೇಟಿಯಾಗಿ ಮುಂದಿನ ರಾಜಕೀಯ ನಡೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ.
ಯಡಿಯೂರಪ್ಪ ವಾಗ್ದಾಳಿ : ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ, ಜನರಿಗೆ ನೀರು ಸಿಗುತ್ತಿಲ್ಲ, ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ, ಜಾನುವಾರುಗಳು ಮೇವಿಲ್ಲದೆ ತತ್ತರಿಸುತ್ತಿವೆ. ಇಂಥ ಸಮಯದಲ್ಲಿ ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಿ ಜನರ ಕುಂದುಕೊರತೆಗಳನ್ನು ಕೇಳಲು ಮತ್ತು ಕಷ್ಟ ಪರಿಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲೇಬೇಕಾಗಿದೆ. ಮುಖ್ಯಮಂತ್ರಿಗಳು ಹಿಂಜರಿಯುತ್ತಿರುವುದೇಕೆ ಎಂದು ಯಡಿಯೂರಪ್ಪ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹರೀಶ್‌ಗೆ ತಿರುಗೇಟು : ಹಾದಿಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸದಾನಂದ ಗೌಡರು ಹರಿಶ್ ಅವರನ್ನು ಟೀಕಿಸಿದ್ದಾರೆ. ಇದನ್ನು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ಗಮನಕ್ಕೂ ತರಲಾಗಿದೆ ಎಂದು ಡಿವಿಎಸ್ ನುಡಿದಿದ್ದಾರೆ. ಸದಾನಂದ ಗೌಡರು ಸದಾ ನಗುತ್ತಿದ್ದರೆ ಅವರದು ಹಸನ್ಮುಖಿ ಎಂದು ತಿಳಿಯಬೇಕಾಗಿಲ್ಲ, ಅದು ವಿಕಟ ನಗೆ ಎಂದು ಹರಿಹರದ ಶಾಸಕ ಹರೀಶ್ ಅವರು ಸದಾನಂದ ಗೌಡರನ್ನು ಹೀಯಾಳಿಸಿದ್ದರು. (ಪಿಟಿಐ)












Click it and Unblock the Notifications