ಶೆಟ್ಟರ್ ಗೆ ಸಿಎಂ ಪಟ್ಟ, ಸಂಜೆ ದೆಹಲಿಗೆ ಬೆಂಬಲಿಗರು

ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟಿನ ಬಿಸಿ ಮುಗಿಲು ಮುಟ್ಟಿದ್ದು, ಸದಾನಂದ ಗೌಡರ ತಲೆದಂಡವನ್ನು ಬೇಡಿದೆ. ಕೂಡಲೇ ಶಾಸಕಾಂಗ ಸಭೆ ಕರೆಯುವಂತೆ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ.
ಸಿಎಂ ಉದಾಸಿ ಅವರ ಮನೆಯಲ್ಲಿ ಯಡಿಯೂರಪ್ಪ ಬಣದ ಮಹತ್ವದ ಸಭೆ ಇದೀಗ ಮುಕ್ತಾಯವಾಗಿದ್ದು, ಸಂಜೆ ವೇಳೆಗೆ ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ.
ಯಡಿಯೂರಪ್ಪನವರ ಡಾಲರ್ಸ್ ಕಾಲನಿಯಲ್ಲಿರುವ ನಿವಾಸದಲ್ಲಿ ಯಡಿಯೂರಪ್ಪ ಅವರೊಂದಿಗೆ ಜಗದೀಶ್ ಶೆಟ್ಟರ್ ಅವರು ಮಾತುಕತೆ ನಡೆಸಿ ಹೊರಬಿದ್ದರು. ನಂತರ ಯಡಿಯೂರಪ್ಪ ಅವರ ಆಪ್ತರ ಸಭೆ ಮುಕ್ತಾಯವಾದ ನಂತರ ಸಿಎಂ ಉದಾಸಿ ಮನೆಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಸೋಮಣ್ಣ, ರೇಣುಕಾಚಾರ್ಯ, ಸಂಸದರಾದ ಸುರೇಶ್ ಅಂಗಡಿ, ಜಿ.ಎಸ್.ಬಸವರಾಜು, ಜಿ.ಎಂ.ಸಿದ್ದೇಶ್, ಆಯನೂರು ಮಂಜುನಾಥ್ ಮತ್ತಿತರರು ಭಾಗವಹಿಸಿ ಬಿರುಸಿನ ಚರ್ಚೆ ನಡೆಸಿದರು.
ಸಮಯದ ಗೊಂಬೆಗಳು : ಮೇ 30ರಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆ ನಂತರ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ನಮ್ಮಲ್ಲಿರುವ ಗೊಂದಲವೆಲ್ಲ ಬಗೆಹರಿದಿದೆ ಎಂದು ಬಹಿರಂಗವಾಗಿ ಯಡಿಯೂರಪ್ಪ ಹೇಳಿದ್ದರು.
ನಂತರ ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ತಮ್ಮ ಬೇಡಿಕೆಗಳ ಕುರಿತು ಚರ್ಚೆ ನಡೆಸುತ್ತೇವೆ, ಅಂತರಿಕ ಬಿಕ್ಕಟ್ಟು ಏನಿಲ್ಲ ಎಂದು ಯಡಿಯೂರಪ್ಪ ಆಪ್ತರು ಹೇಳಿಕೊಂಡು ತಿರುಗುತ್ತಿದ್ದರು. ಯಾವಾಗ ಕೆಪಿಸಿಸಿಯಲ್ಲಿ ವೀರಶೈವ ಸಮುದಾಯದ ಬಗ್ಗೆ ದನಿ ಎತ್ತಿದ ನಂತರ ಬಿಜೆಪಿ ಕೂಡಾ ಎಚ್ಚೆತ್ತುಕೊಂಡಿದೆ.
ಗಣಿ ಲಂಚ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಮತ್ತೆ ಜೈಲು ದರ್ಶನ ಯೋಗ ಪಡೆಯುವ ಸಾಧ್ಯತೆ ಇರುವುದರಿಂದ, ವೀರಶೈವ ಸಮುದಾಯಕ್ಕೆ ಸೇರಿರುವ ಜಗದೀಶ್ ಶೆಟ್ಟರ್‌ರನ್ನು ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಬಣ ಹೊರಟಿದೆ.
ಸದಾನಂದ ಗೌಡ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಜೆಡಿಎಸ್‌ಗೆ ಮತ್ತೆ ಬಲಬಂದಂತಾಗಿದೆ. ಸದಾನಂದ ಗೌಡ ಜೆಡಿಎಸ್ ಪರವಾಗಿ ಆಡಳಿತ ನಡೆಸುತ್ತಿದ್ದಾರೆ.ಜೊತೆಗೆ ಜೆಡಿಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಮನ್ನಣೆ ನೀಡಿ, ಬಿಜೆಪಿ ಶಾಸಕರ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಬಿಎಸ್‌ವೈ ಬಣ ಆರೋಪಿಸಿದೆ.
ಏತಕ್ಕೆ ಶಾಸಕಾಂಗ ಸಭೆ ಕರೆಯಬೇಕು ಎಂಬ ಪ್ರಶ್ನೆಗೆ ಜನರ ಕಷ್ಟಗಳನ್ನು ನಾವು ಸಿಎಂ ಹಾಗೂ ಸಂಪುಟ ಸದಸ್ಯರ ಮುಂದೆ ಹಂಚಿಕೊಳ್ಳಬೇಕಿದೆ. ನಮ್ಮ ಕ್ಷೇತ್ರಗಳ ಅಭಿವೃದ್ಧಿ ಅನುದಾನ ಸಿಕ್ಕಿಲ್ಲ. ಬರದಿಂದ ನಾಡು ತತ್ತರಿಸಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.












Click it and Unblock the Notifications