ನಿತ್ಯಾನಂದ ಸಿಎಂ ವಿರುದ್ಧವೇ ಕೇಸ್ ಹಾಕಿದ್ದೇಕೆ!?
ಬೆಂಗಳೂರು, ಜೂನ್ 15: ತನ್ನ ವಿರುದ್ಧ ಯಾರೇ ಕೇಸು ಹಾಕಲಿ ಅವರ ವಿರುದ್ಧವೇ ಮತ್ತೊಂದು ಕೇಸು ಜಡಿದು ಕಾನೂನು ಪ್ರಕ್ರಿಯೆಯ ದಿಕ್ಕುತಪ್ಪಿಸುವ ವಿಚಿತ್ರ ಪರಿಪಾಠ ವಿವಾದಾತ್ಮಕ ದೇವಮಾನವ ಬಿಡದಿ ಧ್ಯಾನಪೀಠಂ ಆಶ್ರಮದ ನಿತ್ಯಾನಂದ ಸ್ವಾಮಿಯದ್ದು. ಆ ಮೂಲಕ ತನ್ನ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಅಡ್ಡಪಡಿಸುವುದೆ ನಿತ್ಯಾ ಕಾಯಕ.

ಮುಖ್ಯಮಂತ್ರಿಯ ವಿರುದ್ಧವೇ ಕೇಸ್ ಹಾಕಿರುವುದು ಇದಕ್ಕೆ ಒಳ್ಳೆಯ ಉದಾಹರಣೆ. ಇನ್ನು ತಾಜಾ ಉದಾಹರಣೆ ಅಂದರೆ, ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾನೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಆದರೂ ನಮ್ಮ ನಿತ್ಯಾನಂದ ಸ್ವಾಮಿಯನ್ನು ಹುಡುಕಿಕೊಡಿ ಎಂದು ಆತನ ಭಕ್ತ ಪಟಾಲಂ ಹೈಕೋರ್ಟ್ ಮೊರೆಹೋಗಿದೆ. ಇನ್ನು, ಆಯ್ದ ಮಾಧ್ಯಮಗಳ ಬಾಯಿಮುಚ್ಚಿಸುವ ವಿಫಲ ಪ್ರಯತ್ನಕ್ಕೆ ಕೈಹಾಕುವುದೂ ನಿತ್ಯಾ ವಕೀಲರ ಆಟವಾಗಿದೆ. ಇಂತಹ ಸಂದರ್ಭಗಳಲ್ಲಿ ನಿತ್ಯಾಗೆ ಸಾಥ್ ನೀಡಲು ವಕೀಲರ ದಂಡೇ ಇದೆ. ಇನ್ನೂ ಏನೆಲ್ಲ ಕೃತ್ರಿಮ ಕಾನೂನು ಅಸ್ತ್ರಗಳನ್ನು ನಿತ್ಯಾ ವಕೀಲರು ಝಳಪಿಸುತ್ತಾರೋ ಅದರ ಫಲಾನುಭವಿಗಳೇ ಹೇಳಬೇಕು.
ಹಿಂದಿನ ಕೆಲವು ಕೇಸುಗಳನ್ನು ಕೆದಕಿದಾಗ ... ಸಿಐಡಿ ತನಿಖೆಯಲ್ಲಿ ತನ್ನ ವಿರುದ್ಧ ಸಾಕ್ಷಿ ಹೇಳಿದ್ದ ಬಹುತೇಕ ಎಲ್ಲರನ್ನೂ ನಿತ್ಯಾ ಕಟಕಟೆಗೆ ಎಳೆದಿದ್ದ. ಸಿಐಡಿ ತನಿಖೆಯ ಉಸ್ತುವಾರಿ ವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೂ ದೂರು ನೀಡಿ ಅವರನ್ನು ಹಣಿಯಲು ಯತ್ನಿಸಿದ್ದ. ಇಂತಹ ಕಪಟ ಕಾರಣಗಳಿಂದಾಗಿಯೇ ಸುಮಾರು 2 ವರ್ಷಗಳಿಂದ ಪ್ರಕರಣದ ವಿಚಾರಣೆಗೆ ನಾನಾ ವಿಘ್ನಗಳು ಎದುರಾಗಿವೆ.
ನಿತ್ಯಾನಂದನ ಲಾ ಪಟಾಲಂ ಆಟಾಟೋಪ: 2010ರ ಡಿಸೆಂಬರ್ ಪ್ರಾರಂಭದಲ್ಲೇ ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ನಿತ್ಯಾನಂದ ಹಾಗೂ ಇತರೆ ಆರೋಪಿಗಳ ವಿರುದ್ಧ charge sheet ಸಲ್ಲಿಕೆಯಾಗಿತ್ತು. ಅಲ್ಲಿಂದೀಚೆಗೆ ನಿತ್ಯಾನಂದ ವಕೀಲರ ಪಡೆ ಒಂದಿಲ್ಲೊಂದು ಆಟ ಶುರುವಿಟ್ಟುಕೊಂಡಿದೆ.
ತನ್ನ ಕೆಲ ಆಪ್ತ ವಕೀಲರು (ಸರಕಾರಿ ವಕೀಲರೂ ಸೇರಿದಂತೆ), ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಕೆಲ ಉನ್ನತ ವ್ಯವಸ್ಥೆಯನ್ನು 'ಉಪಯೋಗಿಸಿಕೊಂಡು' ಈತ ದೂರುದಾರ ಹಾಗೂ ಸಾಕ್ಷಿಗಳ ವಿರುದ್ಧ ಕೇಸುಗಳ ಮೇಲೆ ಕೇಸುಗಳನ್ನು ಜಡಿಯುತ್ತಾನೆ. ಇಂತಹ 'ನಿತ್ಯ ಆಪರೇಶನ್' ಬಗ್ಗೆ ಸಿಐಡಿ ತನಿಖೆಯಲ್ಲಿ ದಾಖಲಿಸಲಾಗಿದೆ.
ಬ್ಲ್ಯಾಕ್ ಮೇಲ್ ಮಾಡಲೆಂದೇ ಕೇಸುಗಳು: ನಿತ್ಯಾನಂದನ ಕಾಮಕೇಳಿ ವಿವಾದಕ್ಕೆ ಸಂಬಧಿಸಿದಂತೆ ಸಿ.ಡಿ. ಬಿಡುಗಡೆಯಾದಾಗ ಸರಕಾರ ಪರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತು. ಅತ್ತ ನಿತ್ಯಾನಂದ ಬಂಧನವಾಗಿ ಜಾಮೀನು ಪಡೆದು ಹೊರಬಂದ ಮೇಲೆ ಎಲ್ಲ ಆಟಗಳೂ ಶುರುವಾದವು. ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಪ್ರತ್ಯೇಕ ಪ್ರಕರಣಗಳನ್ನು ನಿತ್ಯಾನಂದನ ಲಾ ಪಟಾಲಂ ದಾಖಲಿಸಿತು.
ಹೀಗೆ ಖಾಸಗಿ ದೂರುಗಳನ್ನು ದಾಖಲಿಸಲು ಇರುವ ಸ್ಪಷ್ಟ ಕಾರಣವೆಂದರೆ ದೂರುದಾರರು ಮತ್ತು ಸಾಕ್ಷಿಗಳನ್ನು ವಿಚಾರಣೆಯಿಂದ ವಿಮುಖರನ್ನಾಗಿಸುವುದು. ತನ್ಮೂಲಕ ತಾನು ಕ್ಲೀನ್ ಚಿಟ್ ಪಡೆಯಬಹುದು ಎಂಬುದು ನಿತ್ಯಾನಂದನ ದೂರಾಲೋಚನೆ. ಈ ಅಂಶವನ್ನು ಸ್ವತಃ ಸಿಐಡಿ ಅಧಿಕಾರಿಗಳೇ ಬಹಿರಂಗಪಡಿಸುತ್ತಾರೆ.
ವಿಚಾರಣಾಧಿಕಾರಿಗಳ ಮೇಲೂ... ನಿತ್ಯಾನಂದನ ರಾಸಲೀಲೆ ಪ್ರಕರಣವನ್ನು ಪ್ರಾಮಾಣಿಕವಾಗಿ ವಿಚಾರಣೆ ನಡೆಸಿ ಕೋರ್ಟಿಗೆ ಯೋಗಪ್ಪ ಎಂಬ ಸಿಐಡಿಯ ಹಿರಿಯ ಅಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿದರು. ನಿತ್ಯಾನ ಯಾವುದೇ ಆಮಿಷ, ಲಂಚಕ್ಕೆ yield ಆಗದ ಖಡಕ್ ಅಧಿಕಾರಿ ಯೋಗಪ್ಪ ಅವರನ್ನು ನಿಯಂತ್ರಿಸಲು ನಿತ್ಯಾನಂದ ಕಾರ್ಯತಂತ್ರ ರೂಪಿಸಿದ.
ಇದಕ್ಕೂ ಮುನ್ನ, ನಿತ್ಯಾನಂದನ ಸುಳ್ಳು ಹೃದಯ ಬೇನೆ, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲುವಾಸ ತಪ್ಪಿಸಿಕೊಳ್ಳುವ ಯತ್ನವೆಲ್ಲವನ್ನೂ ಇದೇ ಅಧಿಕಾರಿ ಕೋರ್ಟ್ ಗಮನಕ್ಕೆ ತಂದರು ಇದೆಲ್ಲ ಸಿಟ್ಟನ್ನೂ ನ್ಯಾಯಾಂಗ ನಿಂದನೆ ಅರ್ಜಿ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಿದ.
'ತನ್ನ ಮೇಲೆ ಆರೋಪ ಮಾಡಿದ ಎಲ್ಲರ ಮೇಲೂ ನಿತ್ಯಾನಂದ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾನೆ. ಈ ಕುರಿತಂತೆ ಕೋರ್ಟ್ ಗಮನಿಸಬೇಕು.' ಎಂದು ಸಿಐಡಿ ಅಧಿಕಾರಿಗಳು ಕೋರ್ಟಿಗೆ ಮನವಿ ಮಾಡಿರುವುದನ್ನೇ ನ್ಯಾಯಾಂಗ ನಿಂದನೆ ಎಂದು ಪರಿವರ್ತಿಸಿ, ಅರ್ಜಿ ಗುಜರಾಯಿಸಿದ. ಕೊನೆಗೆ ಈ ಅರ್ಜಿಯನ್ನು ವಜಾಗೊಳಿಸಲು ಹೈಕೋರ್ಟೇ ಬರಬೇಕಾಯಿತು.












Click it and Unblock the Notifications