ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ಆತ್ಮಕ್ಕೆ ಶ್ರದ್ದಾಂಜಲಿ ಅರ್ಪಿಸಿದ ಶಿಕ್ಷಕ!

|
Google Oneindia Kannada News

Deve Gowda demise fake news
ಶಿವಮೊಗ್ಗ, ಜೂ 15: ಇದು ಇವತ್ತಿನ ಜೋಕ್ಸ್ ಫಾರ್ ದಿ ಡೇ ಅಲ್ಲ. ಅಲ್ಲವೇ ಅಲ್ಲ. ಜೀವಂತವಾಗಿರುವಾಗಲೇ ವ್ಯಕ್ತಿಯೊಬ್ಬನಿಗೆ ಶ್ರದ್ದಾಂಜಲಿ ಅರ್ಪಿಸಿದ ಘಟನೆ, ಅದೂ ಮಾಜಿ ಪ್ರಧಾನಿಯೊಬ್ಬರಿಗೆ. ಮಣ್ಣಿನಮಗ ಎಚ್ ಡಿ ದೇವೇಗೌಡ ನಿಧನರಾದರೆಂದು ಭಾವಿಸಿ ಐದು ನಿಮಿಷ ಮೌನಾಚರಣೆ ನಡೆಸಿದ ಘಟನೆ ಜಿಲ್ಲೆಯ ಶಿರಾಳಕೊಪ್ಪ ಖಾಸಗಿ ಶಾಲೆಯೊಂದರಿಂದ ವರದಿಯಾಗಿದೆ.

ಪಟ್ಟಣದ ಶಾಲೆಯಲ್ಲಿ ಗುರುವಾರ (ಜೂ 14) ಎಂದಿನಂತೆ ಬೆಳಗ್ಗಿನ ಪ್ರಾರ್ಥನೆ, ರಾಷ್ಟ್ರಗೀತೆಯ ನಂತರ ಎಲ್ಲಾ ಮಕ್ಕಳಿಗೂ, ಸಿಬ್ಬಂದಿಗಳಿಗೂ ಆಘಾತ ಕಾದಿತ್ತು. ಶಿಕ್ಷಕನೊಬ್ಬ ಹೇಳಬಾರದ್ದನ್ನು ಹೇಳಿಬಿಟ್ಟ. ಮಕ್ಕಳು, ಸಿಬ್ಬಂದಿಯ ಮುಂದೆ ಮಾನ್ಯ ದೇವೇಗೌಡರು ನಿಧನರಾದರು ಎಂದು ಘೋಷಿಸಿಬಿಟ್ಟ.

ಎಲ್ಲರೂ ಒಂದು ಕ್ಷಣ ತಬ್ಬಿಬ್ಬು. ಅಷ್ಟಕ್ಕೇ ನಿಲ್ಲಿಸದ ಶಿಕ್ಷಕ 'ದೇವೇಗೌಡರ ಆತ್ಮಕ್ಕೆ ಶಾಂತಿ ಸಿಗಲಿ' ನಾವೆಲ್ಲಾ ಸೇರಿ ಮೃತರ ಗೌರವಾರ್ಥ ಐದು ನಿಮಿಷ ಮೌನಾಚರಣೆ ಮಾಡೋಣ ಎಂದು ಘೋಷಿಸಿದ. ಟೀಚರ್ ಹೇಳಿದ್ದು ಮಕ್ಕಳು ಕೇಳಬೇಕಲ್ಲವೇ, ಅವರ ಮಾರ್ಗದರ್ಶನದಂತೆ ಐದುನಿಮಿಷ ಮೌನಾಚರಣೆ ನಡೆಸಿಯೇ ಬಿಟ್ಟರು.

ಮೌನಾಚರಣೆಯ ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ' ದೇವೇಗೌಡರು ಮಾಜಿ ಪ್ರಧಾನಿ ಆಗಿದ್ದರು, ಅಲ್ಲದೆ ನಮ್ಮ ರಾಜ್ಯದ ಮುಖ್ಯಮಂತ್ರಿ ಕೂಡಾ ಆಗಿದ್ದರು. ಅವರು ಈ ನಾಡಿನ, ಈ ಮಣ್ಣಿನ ಹೆಮ್ಮೆಯ ಆಸ್ತಿ. ಅವರನ್ನು ಕಳೆದುಕೊಂಡ ನಾಡು ಇಂದು ಬರಡಾಗಿದೆ' ಎಂದು ಪ್ರಲಾಪಿಸಿದರು.

ಮುಂದುವರೆದು ಮಾತಾನಾಡಿದ ಶಿಕ್ಷಕರು, ದೇವೇಗೌಡ ಅವರು ರಾಜ್ಯದಿಂದ ಆಯ್ಕೆಯಾದ ಏಕೈಕ ಪ್ರಧಾನಿ. ಅವರು ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ದೇಶ ಮತ್ತು ರಾಜ್ಯ ಬಹಳ ಅಭಿವೃದ್ದಿ ಕಂಡಿತ್ತು. ಅವರು ಈ ದೇಶದ ರೈತರ ಆಶಾಕಿರಣ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ' ಎಂದು ಗುಣಗಾನ ಮಾಡಿ ಮಾತು ಮುಗಿಸಿದರು, ಆಚಾರ್ಯ ದೇವೋಭವಃ.

ಶಿಕ್ಷಕರ ಭಾಷಣದ ನಂತರ ಮಕ್ಕಳು ಎಂದಿನಂತೆ ತರಗತಿಯತ್ತ ನಡೆದವು. ಸಂಜೆಯವರೆಗೆ ತರಗತಿ ಕೂಡಾ ನಡೆಯಿತು. ಮಕ್ಕಳಿಗೆಲ್ಲಾ ಒಂದು ರೀತಿಯ ಕಸಿವಿಸಿ. ಮಾಜಿ ಪ್ರಧಾನಿ ನಿಧನರಾದಾಗ ಸ್ಕೂಲಿಗೆ ರಜೆ ಕೊಡಬೇಕಲ್ಲಾ.. ಅದೇ ಚಿಂತೆಯಲ್ಲಿ ಇಡೀ ದಿನ ಸ್ಕೂಲಲ್ಲಿ ಕಳೆದು ಮನೆಗೆ ಬಂದು ಮಾಜಿ ಪ್ರಧಾನಿ ದೇವೇಗೌಡ ಅವರು ನಿಧನರಾದರೂ ನಮ್ಮ ಸ್ಕೂಲಿಗೆ ರಜೆ ನೀಡಿಲ್ಲ ಎಂದು ತಮ್ಮ ಪೋಷಕರ ಬಳಿ ಹೇಳಿದರು.

ಮನೆಯಲ್ಲಿ ಒಂದು ಕ್ಷಣ ಅವಕ್ಕಾದ ಪೋಷಕರು ಟಿವಿ ಹಾಕಿ ನೋಡಿದಾಗ ಟಿವಿಯಲ್ಲಿ ಮಾಜಿ ಪ್ರಧಾನಿಯ ಸುಳಿವೇ ಇಲ್ಲ.. ಎಲ್ಲಾ ನಿತ್ಯಾನಂದ ಮಯವಾಗಿತ್ತು. ಅವರಿಗೆ ಇವರಿಗೆ ಫೋನ್ ಮಾಡಿದ ಮೇಲೆ ಈ ಸುದ್ದಿ ಸುಳ್ಳು, ಇದು ಶಿಕ್ಷಕ ಮಾಡಿದ ಅವಾಂತರ ಎಂದು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

English summary
A school teacher in Shiralakoppa in Shivamogga district along with his students observe 5 minutes silence to condole the death of former PM HD Deve Gowda. A false alarm about the death news lead the teacher to take this absurd step. Long live Deve Gowdaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X