ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಅರೆಸ್ಟ್ ; ಬಂಧನದ ಭಯದಲ್ಲಿ ಬಿಎಸ್‌ವೈ

By Prasad
|
Google Oneindia Kannada News

Courts spell fresh trouble Yeddyurappa-Nithyananda
ಬೆಂಗಳೂರು, ಜೂ. 13 : ರಾಜಕೀಯವಾಗಿ ಪ್ರಭಾವಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಭಾವಿಯಾಗಿರುವ ವಿವಾದಾತ್ಮಕ ಸ್ವಾಮಿ ನಿತ್ಯಾನಂದ ಅವರಿಗೆ ಬುಧವಾರ, ಜೂನ್ 13 ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ. ನ್ಯಾಯದ ತಕ್ಕಡಿಯಲ್ಲಿ ಕೂತಿದ್ದ ಇಬ್ಬರಿಗೂ ತಾತ್ಕಾಲಿಕ ಸೋಲುಂಟಾಗಿದೆ. ಯಡಿಯೂರಪ್ಪನವರು ಬಂಧನದ ಭೀತಿ ಎದುರಿಸುತ್ತಿದ್ದರೆ, ನಿತ್ಯಾನಂದನನ್ನು ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ಈಗಾಗಲೆ ತೆಗೆದುಕೊಂಡಿದ್ದಾರೆ.

ಈ ನಾಟಕೀಯ ಬೆಳವಣಿಗೆಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿವೆ. ಎರಡೂ ಪ್ರಕರಣಗಳಲ್ಲಿ ಎಲ್ಲರ ನಿರೀಕ್ಷೆಗಳು ಬುಡಮೇಲಾಗಿವೆ. ನಿರೀಕ್ಷಣಾ ಜಾಮೀನಿನ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪಗೆ ಜಾಮೀನು ನಿರಾಕರಿಸಲಾಗಿದ್ದರೆ, ಗುರುವಾರ ರಾಮನಗರದಲ್ಲಿ ಪ್ರತ್ಯಕ್ಷನಾಗುತ್ತಾನೆಂಬ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ನಿತ್ಯಾನಂದ ಬುಧವಾರವೇ ಪ್ರತ್ಯಕ್ಷವಾಗಿ ಭಾರೀ ಶಾಕ್ ನೀಡಿದ್ದಾನೆ.

ಅಕ್ರಮ ಗಣಿ ಗುತ್ತಿಗೆ ನೀಡಲು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಅವರನ್ನು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣ ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದರ ನಡುವೆ, ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿಗೆ ಯಡಿಯೂರಪ್ಪನವರು ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ್ದಕ್ಕೆ ಕಾರಣಗಳು ಹೀಗಿವೆ : ಅವರು ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ, ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚು, ವಶಕ್ಕೆ ತೆಗೆದುಕೊಳ್ಳದಿದ್ದರೆ ಸ್ವತಂತ್ರ ತನಿಖೆ ಬಲು ಕಷ್ಟ, ಅವರನ್ನು ಮುಕ್ತವಾಗಿಸಿದರೆ ಆರ್ಥಿಕತೆ ಬುಡಮೇಲು ಮಾಡಬಹುದು, ಅಲ್ಲದೆ ಅವರು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯೂ ಹೆಚ್ಚು. ಈ ಪ್ರಕರಣದಲ್ಲಿ ಮೊದಲ ಜಯ ಸಿಬಿಐಗೆ ಲಭಿಸಿದೆ.

ಈ ಎಲ್ಲ ಕಾರಣಗಳ ಆಧಾರದ ಮೇಲೆ ನಿರೀಕ್ಷಣಾ ಜಾಮೀನು ವಜಾ ಆಗಿ, ಯಡಿಯೂರಪ್ಪ ಆಪ್ತರ ವಲಯದಲ್ಲಿ ಕಾರ್ಮೋಡ ಕವಿದಂತಾಗಿದೆ ಮತ್ತು ಬಿಜೆಪಿಯಲ್ಲಿ ಭಾರೀ ಸಂಚಲನವನ್ನು ಎಬ್ಬಿಸಿದೆ. ಸಿಬಿಐನಿಂದ ಬಂಧಿತರಾಗಬಹುದು ಎಂಬ ಆತಂಕದಿಂದ ಅವರ ನಿವಾಸಕ್ಕೆ ಆಪ್ತರೆಲ್ಲ ಧಾವಿಸುತ್ತಿದ್ದಾರೆ. ಜಾಮೀನಿನ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಮತ್ತೆ ವಿಷಣ್ಣತೆಯ ಮಡುವಿಗೆ ಬಿದ್ದಿದ್ದಾರೆ. ಆಪ್ತರೆಲ್ಲ ಸೇರಿಕೊಂಡು ಮುಂದಿನ ನಡೆ ಏನೆಂಬುದನ್ನು ಗಹನವಾಗಿ ಚರ್ಚಿಸುತ್ತಿದ್ದಾರೆ.

ನಿತ್ಯಾನಂದನ ಕೇಸಿನಲ್ಲಿ ಆಗಿದ್ದೇನು? : ಬಿಡದಿ ಧ್ಯಾನಪೀಠಂ ಆಶ್ರಮದಿಂದ ಪರಾರಿಯಾಗಿದ್ದ ನಿತ್ಯಾನಂದ ಬುಧವಾರವೇ ನ್ಯಾಯಾಲಯಕ್ಕೆ ಹಾಜರಾಗುತ್ತಾನೆಂದು ಪೊಲೀಸರು ನಿರೀಕ್ಷಿಸಿರಲೇ ಇಲ್ಲ. ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ, ತನ್ನ ವಕೀಲರೊಡನೆ ಜಾಮೀನು ಅರ್ಜಿ ಹಿಡಿದು ಬಂದ ನಿತ್ಯಾನಂದನಿಗೆ ಪೊಲೀಸರಿಂದ ಜೆಎಮ್ಎಫ್‌ಸಿ ನ್ಯಾಯಾಲಯದಲ್ಲಿ ಪ್ರತಿರೋಧ ವ್ಯಕ್ತವಾಗಿದೆ.

ಇದ್ದಕ್ಕಿದ್ದಂತೆ ಕೋರ್ಟಿಗೆ ನಿತ್ಯಾನಂದ ಹಾಜರಾಗಿದ್ದರಿಂದ ಕೂಲಂಕಷವಾಗಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಆತನ ವಿರುದ್ಧ ಇರುವ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ಸತ್ಯಾಸತ್ಯತೆಗಳನ್ನು ತಿಳಿಯಬೇಕಿದ್ದರೆ ಸುದೀರ್ಘವಾಗಿ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಆಗ್ರಹಪಡಿಸಿದರು.

ಒಂದು ದಿನದ ಮಟ್ಟಿಗೆ ನ್ಯಾಯಾಂಗ ವಶಕ್ಕೆ ಕೊಡಬೇಕೆಂದಿದ್ದ ನ್ಯಾಯಾಧೀಶೆ ಕೋಮಲ್ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ, ಜಾಮೀನು ಅರ್ಜಿ ವಿಚಾರಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು ಮತ್ತು ಬಂಧನದ ಕುರಿತಂತೆ ಯಾವುದೇ ಆದೇಶ ಹೊರಡಿಸಲಿಲ್ಲ. ಆದರೆ, ಮರುದಿನದವರೆಗೆ ನಿತ್ಯಾನಂದ ಪೊಲೀಸ್ 'ರಕ್ಷಣೆ'ಯಲ್ಲಿ ಇರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ರಾಮನಗರ ಪೊಲೀಸರು, ನಿತ್ಯಾನಂದ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ಬಂಧಿಸಿ ವಿಚಾರಣೆಗೆಂದು ತಮ್ಮ ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ನಿತ್ಯಾನಂದ ಅಧಿಕೃತವಾಗಿ ಬಂಧಿತನಾಗಿರುವುದರಿಂದ ಮುಂದಿನ 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಮುಂದು ಹಾಜರುಪಡಿಸಬೇಕಾಗುತ್ತದೆ.

English summary
Courts have spelt fresh trouble for former CM BS Yeddyurappa and self proclaimed godman Swamy Nithyananda. CBI special court has rejected anticipatory bail of BSY. In Ramnagar, police have arrested Nithyananda who had come to bail application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X