ರೇವ್ ಪಾರ್ಟಿ ಮಾಡಿ ಸಿಕ್ಕರೂ ಭಯವಿಲ್ಲ

ಅಂಕೋಲ ತಾಲೂಕಿನ ಹೊನ್ನೆಬೈಲ್ ಬಳಿ ಹನಿಬೀಚ್ ರೆಸಾರ್ಟ್‌ನಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಮಹಿಳೆಯರ ಅರೆನಗ್ನ ನೃತ್ಯ, ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ನಾಲ್ವರು ಯುವತಿಯರು ಸೇರಿದಂತೆ 14 ಜನರನ್ನು ಬಂಧಿಸಿ, ನಗದು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಹೆಸರು ಹೀಗಿದೆ: ಅರೆನಗ್ನ ನೃತ್ಯದ ಮಾಡುತ್ತಿದ್ದ ಯುವತಿಯರು ಸುಮಾರು 20 ರಿಂದ 35 ವರ್ಷ ವಯಸ್ಸಿನವರು.. ರಾಜ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಚಿನ್ ಶೆಟ್ಟಿ, ಆರೀಫ್ ಇನಾಯತುಲ್ಹಾ, ಯಶವಂತ್ ಪೂಜಾರಿ, ಹರೀಶ್ ಶೆಟ್ಟಿ ಹಾಗೂ ಮಧು ವೆಂಕಪ್ಪ ಶೆಟ್ಟಿ ಎಲ್ಲರೂ ಮಂಗಳೂರಿನವರು. ಬಾಗಲಕೋಟೆ, ಹುಬ್ಬಳ್ಳಿಯ ತಲಾ ಒಬ್ಬ ಯುವತಿ ಮತ್ತು ನೇಪಾಳದ ಇಬ್ಬರು ಯುವತಿಯರು ಇದ್ದರು.
ವೆಂಕಟ ರಮಣ ನಾಯಕ್ ಹಾಗೂ ಹರೀಶ್ ನಾಯಕ್ ಅವರು ರೇವ್ ಪಾರ್ಟಿ ಆಯೋಜಿಸಿದ್ದರು. ಪೊಲೀಸ್ ದಾಳಿ ನಡೆದಾಗ ಮಹಿಳೆಯರು ಅರೆ ನಗ್ನರಾಗಿದ್ದರು, ಇಂಗ್ಲೀಷ್ ಹಾಡಿಗೆ ನರ್ತಿಸುತ್ತಿದ್ದರು ಎನ್ನಲಾಗಿದೆ. ಇದು ಅನಧಿಕೃತ ಪಾರ್ಟಿ ಎಂದು ಡಿವೈಎಸ್ಪಿ ಉಲ್ಲಾಸ ವೆರ್ಣೇಕರ ಹೇಳಿದ್ದಾರೆ.
ಬಂಧಿತರಿಂದ ರೂ 1.23 ಲಕ್ಷ ನಗದು, 10 ಮೊಬೈಲ್ ಸೆಟ್ ಮತ್ತು ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಸಿಪಿಐ ಎಸ್. ವಿಜಯ ಪ್ರಸಾದ, ಪಿಎಸ್‌ಐ ಜಾಯ್ ಆ್ಯಂಟನಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
'ನಮ್ಮ ರೆಸಾರ್ಟ್‌ನಲ್ಲಿ ಯಾವುದೇ ರೇವ್ ಪಾರ್ಟಿ ನಡೆದಿಲ್ಲ. ಪ್ರವಾಸಿಗರೇ ವೃತ್ತಿಪರ ಕಲಾವಿದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ' ಎಂದು ರೆಸಾರ್ಟ್ ಮಾಲೀಕ ಅಂಕೋಲಾದ ವೆಂಕಟ್ರಮಣ ನಾಯಕ ಸ್ಪಷ್ಟಪಡಿಸಿದ್ದಾರೆ.
ಗೋವಾ ಪ್ರಭಾವ: ರೇವ್ ಪಾರ್ಟಿ, ಪಬ್ ಸಂಸ್ಕೃತಿಗೆ ಹೆಸರಾದ ಗೋವಾ ಗಾಳಿ ಈಗ ಕರ್ನಾಟಕದ ಕರಾವಳಿಗೂ ಹಬ್ಬುತ್ತಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಗೋವಾದಿಂದ ಸರಬರಾಜು ಮಾಡಲಾಗುವ ಮಾದಕದ್ರವ್ಯಗಳನ್ನು ಹಂಚಲು ಕರ್ನಾಟಕದ ಕರಾವಳಿಯನ್ನು ಬಳಸಲಾಗುತ್ತಿದೆ, ಗೋಕರ್ಣ ಹಾಗೂ ಹೊನ್ನೆಬೈಲು ತೀರದಲ್ಲಿ ಆಗಾಗ ರೇವ್ ಪಾರ್ಟಿ ನಡೆಯುವುದು ಕಾಮನ್ ಎಂದು ಸ್ಥಳೀಯರು ದೂರಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಕೂಡಾ ಮಾದಕದ್ರವ್ಯಗಳು ಗೋಕರ್ಣದ ಕಡೆಗೆ ಹರಿದು ಬರುವ ಶಂಕೆ ಇದೆ. ಇತ್ತೀಚೆಗೆ ಕಾರವಾರ ರೈಲ್ವೇ ನಿಲ್ದಾಣದಲ್ಲಿ ಹಿಮಾಚಲ ಪ್ರದೇಶದ ಮಹಿಳೆಯೊಬ್ಬಳನ್ನು ಬಂಧಿಸಿ 90 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.
ಆದರೆ, ಹೊನ್ನೆಬೈಲಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿತ್ತೆ ಎಂಬುದರ ಬಗ್ಗೆ ಅಂಕೋಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾದಕದ್ರವ್ಯ ಸೇವನೆ ದೃಢಪಟ್ಟರೆ ಮಾತ್ರ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಹೆಚ್ಚಿನ ಅವಕಾಶ ಸಿಗುತ್ತದೆ. ಇಲ್ಲದಿದ್ದರೆ, ರೇವ್ ಪಾರ್ಟಿ ಮಾಡಿ ಮಜಾ ಉಡಾಯಿಸಿ ಸಿಕ್ಕಿಬಿದ್ದರೂ ಜಾಮೀನು ಪಡೆದು ಹೊರ ನಡೆಯುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications