ವಿಚಾರಣೆಗೆ ಹೆದರಿ ನಿತ್ಯಾನಂದ ಬಿಡದಿಯಿಂದ ಪರಾರಿ?

ಈ ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಅನುಪಮ್ ಅಗರವಾಲ್ ಅವರು ಧ್ಯಾನಪೀಠಂ ಆಶ್ರಮದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ನಿತ್ಯಾನಂದನಿಗೆ ಕಾದು, ಆತ ಸಿಗದೆ ವಾಪಸ್ ಬಂದಿದ್ದಾರೆ. ಆಶ್ರಮಕ್ಕೆ ರಾಮನಗರ ಡಿಸಿ ಶ್ರೀರಾಮ್ ರೆಡ್ಡಿ ಅವರು ಕೂಡ ಆಗಮಿಸಿದ್ದಾರೆ. ನಿತ್ಯಾನಂದ ಎಲ್ಲೇ ಇದ್ದರೂ ಪೊಲೀಸರ ಎದುರಿಗೆ ಬರಬೇಕು, ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಂಧನ : ನಿತ್ಯಾನಂದನ ಬಿಡದಿ ಧ್ಯಾನಪೀಠಂ ಆಶ್ರಮದಲ್ಲಿ ಗುರುವಾರ ಪತ್ರಕರ್ತರ ಮೇಲೆ ಆದ ದಬ್ಬಾಳಿಕೆ ಮತ್ತು ಶುಕ್ರವಾರ ಕನ್ನಡಪರ ಸಂಘಟನೆ ಹಾಗು ನಿತ್ಯಾನಂದನ ಶಿಷ್ಯರ ನಡುವೆ ನಡೆದ ಜಟಾಪಟಿಗೆ ಸಂಬಂಧಿಸಿದಂತೆ ರಾಮನಗರ ಪೊಲೀಸರು ಎರಡೂ ಪಂಗಡಗಳಿಗೆ ಸೇರಿದೆ ಸುಮಾರು 50 ಜನರನ್ನು ಬಂಧಿಸಿದ್ದಾರೆ. ಬಂಧಿತ ಶಿಷ್ಯರಲ್ಲಿ ಐವರು ಸನ್ಯಾಸಿನಿಯರು ಸೇರಿದ್ದಾರೆ. ಮಹಿಳಾ ಪೊಲೀಸರು ಬಂಧಿಸಲು ಬಂದಾಗ ತೀವ್ರ ಪ್ರತಿರೋಧ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದರಿಂದ ಸನ್ಯಾಸಿನಿಯರನ್ನು ಬಲವಂತವಾಗಿ ಬಂಧಿಸಲಾಗಿದೆ.
ನಿತ್ಯಾನಂದನ ಆಶ್ರಮಕ್ಕೆ ನುಗ್ಗಿ ಶಿಷ್ಯಂದಿರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ 30ಕ್ಕೂ ಹೆಚ್ಚು ನವ ನಿರ್ಮಾಣ ಸೇವಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೆ, ಕನ್ನಡಪರ ಕಾರ್ಯಕರ್ತರನ್ನು ಅವಾಚ್ಯವಾಗಿ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ 15 ನಿತ್ಯಾನಂದನ ಶಿಷ್ಯರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಸನ್ಯಾಸಿಗಳು ಗುರುವಾರ ಕೂಡ ಮಾಧ್ಯಮದವರ ಮೇಲೆ ದಬ್ಬಾಳಿಕೆ ನಡೆಸಿದ್ದರು. ಈ ಸಂಬಂಧ ಪತ್ರಕರ್ತರ ಮೇಲೆ ಬೆದರಿಕೆಯೊಡ್ಡಿದ ಕಾರಣ ನೀಡಿ ರಾಮನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.
ಗುರುವಾರ ಮಧ್ಯಾಹ್ನ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕನ್ನಡಿಗರೊಬ್ಬರು ಹೂಡಿದ್ದ ಕೇಸಿನಲ್ಲಿ ನೀಡಿದ್ದ ಸಮನ್ಸ್ ತೋರಿಸಿದ್ದರಿಂದ ಸುವರ್ಣ ವಾಹಿನಿ ಪತ್ರಕರ್ತನನ್ನು ನಿತ್ಯಾನಂದ ಹೊರಗೆ ಕಳಿಸಿದ್ದ. ಶುಕ್ರವಾರ ಮತ್ತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ವಾಹಿನಿ ಸೇರಿದಂತೆ ಕೆಲ ಪತ್ರಕರ್ತರನ್ನು ಆಶ್ರಮದ ಒಳಗೆ ಬರಲು ಬಿಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಪತ್ರಕರ್ತರ ಪರ ಪ್ರತಿಭಟನೆಗೆ ಬಂದಿದ್ದ ಕನ್ನಡ ಹೋರಾಟಗಾರರು ಮತ್ತು ಆಶ್ರಮವಾಸಿಗಳ ನಡುವೆ ಭಾರೀ ವಾಗ್ವಾದ ನಡೆದು ಹೊಡೆದಾಟ ಕೂಡ ನಡೆಯಿತು. ನವನಿರ್ಮಾಣ ಸೇನೆಯ ಅನೇಕರ ಮೇಲೆ ಹಲ್ಲೆ ಮಾಡಲಾಗಿದ್ದು, ಅನೇಕರಿಗೆ ಗಾಯಗಳಾಗಿವೆ.
ರಾಜ್ಯಾದ್ಯಂತ ಪ್ರತಿಭಟನೆ : ಪತ್ರಕರ್ತರ ಮೇಲೆ ನಡೆದ ದಬ್ಬಾಳಿಕೆಯನ್ನು ವಿರೋಧಿಸಿ ಕರ್ನಾಟಕದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಕರ್ನಾಟಕದ ನೆಲ ಬಳಸಿಕೊಂಡು, ನೀರು, ಗಾಳಿ ಸೇವಿಸುತ್ತಿದ್ದರೂ ಕನ್ನಡ ವಿರೋಧಿ ಸಂಸ್ಕೃತಿಯನ್ನು ಬೆಳೆಸುತ್ತಿರುವ ನಿತ್ಯಾನಂದನನ್ನು ಮತ್ತು ಆತನ ಶಿಷ್ಯರನ್ನು ಕರ್ನಾಟಕದಿಂದ ಓಡಿಸಬೇಕು. ಆತನನ್ನು ಬಂಧಿಸಿ ಆಶ್ರಮಕ್ಕೆ ಬೀಗ ಜಡಿಯಬೇಕು ಎಂಬ ಕೂಗು ರಾಜ್ಯಾದ್ಯಂತ ಎದ್ದಿದೆ. ಇಷ್ಟೆಲ್ಲ ಗಲಾಟೆಗಳು ಆಗುತ್ತಿದ್ದರೂ ಸರಕಾರ ತಣ್ಣಗೆ ಕುಳಿತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಶ್ರಮದ ಸುತ್ತ ನಿಷೇಧಾಜ್ಞೆ : ಜೂನ್ 13ರವರೆಗೆ ಬಿಡದಿ ಆಶ್ರಮದ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಶಿವರಾಮ್ ರೆಡ್ಡಿ ಅವರು ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ. ಆದರೆ, ಜೂನ್ 10ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕನ್ನಡಪರ ಸಂಘಟನೆಗಳು ಆಶ್ರಮದ ಮುಂದೆ ಭಾರೀ ಪ್ರತಿಭಟನೆ ನಡೆಸಲು ಯೋಜಿಸಿವೆ.












Click it and Unblock the Notifications