ಭೀಕರವಾಗಿ ಹತ್ಯೆಯಾದ ದಿವ್ಯಾಳ ಹಂತಕರಿಬ್ಬರ ಬಂಧನ

ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದ ದಿವ್ಯಾ ಕೆಲಸದಿಂದ ಬಿಟಿಎಂ ಲೇಔಟಿನ ಎರಡನೇ ಹಂತದ 7ನೇ ಅಡ್ಡರಸ್ತೆಯಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಬೈಕಿನ ಮೇಲೆ ಬಂದ ಇಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ದಿವ್ಯಾ ಅಪೋಲೊ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.
ನಾವಿಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವು. ಐದು ವರ್ಷಗಳ ಹಿಂದೆ ದಿವ್ಯಾಳೇ ಮದುವೆಯ ಪ್ರಸ್ತಾವನೆ ಇಟ್ಟಿದ್ದಳು. ನನ್ನ ಪಾಲಕರೂ ಒಪ್ಪಿದ್ದರು. ಆದರೆ, ಇನ್ನೂ ಹೆಚ್ಚು ಗಳಿಸುವ ಮತ್ತೊಬ್ಬನೊಂದಿಗೆ ಸ್ನೇಹ ಬೆಳೆಸಿದ ದಿವ್ಯಾ ನನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದಳು. ಆಗ ನಾನು ಆಕೆಗೆ ಪಾಠ ಕಲಿಸಬೇಕೆಂದು ತೀರ್ಮಾನಿಸಿದೆ ಎಂದು ರಣಜಿತ್ ಕೃಷ್ಣೇಗೌಡ ಮೈಕೋ ಲೇಔಟ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಆದರೆ, ದಿವ್ಯಾಳ ಮನೆಯವರು ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿರುವ ದಿವ್ಯಾಳ ಸಹೋದರಿಯ ಮೈದುನ ಪ್ರದೀಪ್‌ನೊಂದಿಗೆ ಮದುವೆಯನ್ನು ನಿಶ್ಚಯಿಸಿದ್ದರು. ಇದನ್ನು ತಿಳಿದ ರಣಜಿತ್, ಪ್ರದೀಪನಿಗೆ ಫೋನ್ ಮಾಡಿ, ದಿವ್ಯಾಳನ್ನು ಮದುವೆಯಾದರೆ ಸರಿ ಇರುವುದಿಲ್ಲ, ಆಕೆಯಿಂದ ದೂರವಿರು ಎಂದು ಬೆದರಿಕೆ ಹಾಕಿದ್ದ. ಇದು ಮನೆಯವರಿಗೆ ತಿಳಿದು ಸಾಕಷ್ಟು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಬೆದರಿಕೆಗಳಿಗೆ ಉಡುಪಿ ಜಿಲ್ಲೆ ಸಾಲಿಗ್ರಾಮ ಮೂಲದ ದಿವ್ಯಾ ಬಗ್ಗದಿದ್ದಾಗ, ಪ್ರೇಮ ವೈಫಲ್ಯದಿಂದ ಕುದಿಯುತ್ತಿದ್ದ ರಣಜಿತ್ ಆಕೆಯನ್ನು ಮುಗಿಸಿಬಿಡಲು ಸ್ಕೆಚ್ ಹಾಕಿದ್ದಾನೆ. ಆ ಕರಾಳ ದಿನ ಮೇ 28ರಂದು ಸೋಮವಾರ ಆಕೆ ಬಿಟಿಎಂ ಬಡಾವಣೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ದಿವ್ಯಾಳ ಕತ್ತು ಕುಯ್ದು ಹಾಕಿದ್ದಾನೆ ರಣಜಿತ್. ಸುತ್ತ ಮುತ್ತ ಇದ್ದವರು ಈ ಭೀಕರ ದೃಶ್ಯವನ್ನು ನೋಡಿ, ಏನಾಯಿತೆಂದು ತಿಳಿಯುವ ಮೊದಲೇ ಅಲ್ಲಿಂದ ಇಬ್ಬರೂ ಪರಾರಿಯಾಗಿದ್ದರು.
ನಂತರ ಬೆಂಗಳೂರು ವಾಯವ್ಯ ವಿಭಾಗದ ಡಿಸಿಪಿ ಆಗಿರುವ ಪಿಎಸ್ ಹರ್ಷಾ ಅವರು ಮೂರು ತಂಡಗಳನ್ನು ರಚಿಸಿ ಹಂತಕರಿಬ್ಬರ ಸೆರೆಗೆ ವ್ಯೂಹ ಹೂಡಿದರು. ಅವರಿಬ್ಬರು ಬೆಂಗಳೂರಿನಿಂದ ಕೇರಳದ ಕೋಳಿಕ್ಕೋಡಿಗೆ ಓಡಿಹೋದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರ ತಂಡ ಕೇರಳಕ್ಕೆ ಧಾವಿಸಿತು. ಪೊಲೀಸರು ಬರುತ್ತಿರುವ ಸುಳಿವು ಸಿಗುತ್ತಿದ್ದಂತೆ ಅವರಿಬ್ಬರು ಅಲ್ಲಿಂದಲೂ ಪರಾರಿಯಾದರು. ಕೇರಳ ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ಹೊಸೂರು ಬಳಿ ಹಂತಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.












Click it and Unblock the Notifications