ಸ್ಫೋಟಕ ಸುದ್ದಿ: ರೆಡ್ಡಿ ಜಡ್ಜ್ ಸಿಕ್ಕಿಬಿದ್ದಿದ್ದು ಹೇಗೆ?

ಸಿಬಿಐ ವಿಶೇಷ ನ್ಯಾಯಾಧೀಶ ಟಿ. ಪಟ್ಟಾಭಿ ರಾಮ ರಾವ್ ಅವರು ಇಂತಹ ಸಾಹಸಕ್ಕೆ ಕೈಹಾಕಲು ಪ್ರೇರೇಪಿಸಿದ್ದು ತಮ್ಮ ಬ್ಯಾಂಕ್ ಖಾತೆಗಳಿಗೆ ಸಂದಾಯವಾದ 5 ಕೋಟಿ ರು ಎಂಬುದು ಇದೀಗ ಜಗಜ್ಜಾಹೀರಾಗಿದೆ. ಜಡ್ಜ್ ಪಟ್ಟಾಭಿ ರಾಮ ರಾವ್ (ಪಕ್ಕದ ಚಿತ್ರದಲ್ಲಿರುವವರು) ಲಂಚಾವತಾರವು ಅಧಿಕೃತವಾಗಿ ಬೀದಿಗೆ ಬರುತ್ತಿದ್ದಂತೆ ರಾಷ್ಟ್ರವ್ಯಾಪಿ ಟೀಕೆಗಳು ಕೇಳಿಬರುತ್ತಿವೆ. ನ್ಯಾಯವನ್ನು ಎತ್ತಿಹಿಡಿಯಬೇಕಾದ ಜಡ್ಜ್ ಸಾಹೇಬರೇ ಹೀಗೆ ಮಾಡಿದರಾ ಎಂದು ಜನ ಆತಂಕ, ಆಘಾತ, ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಅತ್ತ ರೆಡ್ಡಿಗೆ ಜಾಮೀನು ಸಿಗದಂತೆ ಸಿಬಿಐ ಲಕ್ಷ್ಮಿನಾರಾಯಣ ಅವರು ಹೋರಾಡುತ್ತಿದ್ದರೆ ಇತ್ತ ಆರೋಪಿ ರೆಡ್ಡಿಯು ಲಕ್ಷ್ಮಿನಾರಾಯಣಗೇ ಸಡ್ಡು ಹೊಡೆದು ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹೈಕೋರ್ಟಿನಿಂದಾಗಿ ಅದು ಬರಕ್ಕತ್ತಾಗದೆ ರೆಡ್ಡಿ ಇನ್ನೂ ಜೈಲಿನಲ್ಲೇ ಇದ್ದಾರೆ ಎಂಬುದು ಗಮನಾರ್ಹ.
ಹಾಗೆ ನೋಡಿದರೆ ರೆಡ್ಡಿ ಕೇಸ್ ವಿಚಾರಣೆ ನಡೆಯುತ್ತಿದ್ದುದು ಪ್ರಿನ್ಸಿಪಾಲ್ ಜಡ್ಜ್ ನ್ಯಾಯಾಲಯದಲ್ಲಿ. ನಿಷ್ಕಳಂಕ ಜಡ್ಜ್ ನಾಗಮಾರುತಿ ಶರ್ಮಾ ಅವರು ಮೊದಲಿಗೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಆದರೆ ಕಾರ್ಯಭಾರ ನಿಮಿತ್ತ ಮತ್ತೊಂದು ಕೋರ್ಟಿಗೆ ಅವರು ವರ್ಗವಾದಾಗ ಪಟ್ಟಾಭಿ ರಾಮ ರಾವ್ ಅವರು ನಾಗಮಾರುತಿ ಅವರ ಸ್ಥಾನವನ್ನು ಅಲಂಕರಿಸಿದರು. ಇನ್ನು ಜಡ್ಜ್ ಎ. ಪುಲ್ಲಯ್ಯ ಅವರು ಸಿಬಿಐ ವಿಶೇಷ ನ್ಯಾಯಾಲಯದ ಪ್ರಧಾನ ಜಡ್ಜ್ ಆಗಿದ್ದರು.
ಈ ಮಧ್ಯೆ ಜಡ್ಜ್ ಪುಲ್ಲಯ್ಯ ವಿರುದ್ಧ ಕೊಂಕು ತೆಗೆದ ಜನಾರ್ದನ ರೆಡ್ಡಿ ಉಪಾಯವಾಗಿ ತನ್ನ ಕೇಸನ್ನು ಪಟ್ಟಾಭಿ ರಾಮ ರಾವ್ ಅವರ ಪೀಠಕ್ಕೆ ವರ್ಗಾಯಿಸಬೇಕೆಂದು petition ಇಟ್ಟರು. ಇದೇ ವೇಳೆ ಜಡ್ಜ್ ನಾಗಮಾರುತಿ ಅವರು ಬೇಸಿಗೆ ರಜೆ ಮೇಲೆ ತೆರಳಿದರು. ಇದೇ ಸುಸುಂಧಿಯಲ್ಲಿ ಕೋರ್ಟ್ ರೆಡ್ಡಿ ಬೇಡಿಕೆ ತಥಾಸ್ತು ಅನ್ನುವ ಮೂಲಕ ರೆಡ್ಡಿ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು.
ಸರಿ, ಮುಂದೆ ರೆಡ್ಡಿ ಕೇಸನ್ನು ವಿಚಾರಣೆಗೆ ತೆಗೆದುಕೊಂಡ ಪಟ್ಟಾಭಿ ರಾಮ ರಾವ್ ರೆಡ್ಡಿಗೆ ಜಾಮೀನು ನೀಡಿಯೇ ಬಿಟ್ಟರು. ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕೋರ್ಟುಗಳು ಕಠಿಣ ನಿಲುವು ತೆಗೆದುಕೊಂಡು ಸಕ್ರಿಯವಾಗಿದ್ದು, ಜನಮೆಚ್ಚುಗೆ ಗಳಿಸುತ್ತಿದ್ದ ಸಂದರ್ಭದಲ್ಲೇ ಒಬ್ಬ ಜಡ್ಜ್ ಪಟ್ಟಾಭಿ ರಾಮ ರಾವ್ ಅವರು 'ಆರ್ಥಿಕ ಭಯೋತ್ಪಾದಕ'ರೊಬ್ಬರಿಗೆ ಜಾಮೀನು ಮಂಜೂರು ಮಾಡಿದಾಗ ಇಡೀ ನಾಡು ಬೆಚ್ಚಿಬಿದ್ದಿತ್ತು.
ಏನೋ ಪೊರಪಾಟು ಬಿದ್ದು ಹೀಗಾಗಿರಬಹುದು ಎಂದು ಎಲ್ಲರೂ ಸಮಾಧಾನ ಮಾಡುಕೊಳ್ಳುತ್ತಿದ್ದಾಗಲೇ ಸಿಬಿಐ ಲಕ್ಷಿನಾರಾಯಣ ಅತ್ತ ರಹಸ್ಯ ಕಾರ್ಯಾಚರಣೆಗೆ ಇಳಿದ್ದರು. ತಾವು ಅಷ್ಟೆಲ್ಲ ಶ್ರಮ ವಹಿಸಿ ರೆಡ್ಡಿ ಕೇಸನ್ನು ನಡೆಸುತ್ತಿರುವಾಗ ಆತನಿಗೆ ಹೇಗೆ ಜಾಮೀನು ಸಿಕ್ಕಿತು ಎಂದು ತಲೆಕೆಡಿಸಿಕೊಂಡ ಸಿಬಿಐ ಲಕ್ಷಿನಾರಾಯಣಗೆ ಆಘಾತಕಾರಿ ವಿಷಯವೊಂದು ಸಿಕ್ಕಿಬಿಟ್ಟಿತು.
ಅದೇ, ಜಡ್ಜ್ ಪಟ್ಟಾಭಿ ರಾಮ ರಾವ್ ಅವರ ಖಾತೆಗೆ 5 ಕೊಟಿ ರುಪಾಯಿ ಸಂದಾಯವಾಗಿರುವ ನಿಜಾಂಶ. ಇದರಲ್ಲಿ ಜಡ್ಜ್ ಪಟ್ಟಾಭಿ ರಾಮ ರಾವ್ ಪುತ್ರನ ಹೆಸರಿಗೆ 2 ಕೋಟಿ ರುಪಾಯಿ ಸಂದಾಯವಾಗಿದೆ ಎಂಬುದನ್ನು ಸಿಬಿಐ ಲಕ್ಷಿನಾರಾಯಣ ಖಚಿತಪಡಿಸಿಕೊಂಡರು. ಉಳಿದ ಹಣ ಎಲ್ಲಿದೆ ಎಂದು ತಲೆಕೆಡಿಸಕೊಳ್ಳುತ್ತಿರುವಾಗ ಬೇನಾಮಿ ಹೆಸರಿನ ಲಾಕರುಗಳಲ್ಲಿ 3 ಕೋಟಿ ರುಪಾಯಿ ಭದ್ರವಾಗಿದೆ ಎಂಬ ಆಘಾತಕಾರಿ ಸುದ್ದಿ ಸಿಕ್ಕಿತು. ಕಾರ್ಯಾಚರಣೆಗಿಳಿದಾಗ ಪಟ್ಟಾಭಿ ರಾಮ ರಾವ್ ಪುತ್ರ ತನ್ನ ಲಾಕರಿನಲ್ಲಿ 2 ಕೋಟಿ ರುಪಾಯಿ ನಗದು ಪೇರಿಸಿಟ್ಟಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.
ತಡ ಮಾಡದೆ ಸಿಬಿಐ ಅಧಿಕಾರಿಗಳು ಅಷ್ಟೂ ನಗದು ಹಣವನ್ನು ಹೈಕೋರ್ಟ್ ಮುಂದಿಡುತ್ತಾ, 'ಯುವರ್ ಆನರ್. ಇದು ವಿಷ್ಯಾ...' ಎಂದುಬಿಟ್ಟರು. ಅಲ್ಲಿಗೆ ಜಡ್ಜ್ ಪಟ್ಟಾಭಿ ರಾಮ ರಾವ್ ಕೇಸ್ ಕ್ಲೋಸ್ ಆಗಿತ್ತು. ಮುಂದೆ ಹೈಕೋರ್ಟ್ ಪ್ರಧಾನ ನ್ಯಾಯಮೂರ್ತಿ ಜಸ್ಟೀಸ್ ಮದನ್ ಲೋಕೂರ್ ಮುಂದೆ ಲಂಚ ಪ್ರಕರಣ ವಿಚಾರಣೆಗೆ ಬಂದಿತು.
ಸಿಬಿಐ ಗೆ go ahead ಅಂದ ಜಸ್ಟೀಸ್ ಮದನ್ ಲೋಕೂರ್ ಪ್ರತಿ ಹಂತದಲ್ಲೂ ತನಗೆ ಗೌಪ್ಯವಾಗಿ ಮಾಹಿತಿ ನೀಡುತ್ತಿರಬೇಕು ಎಂದು ಸಿಬಿಐಗೆ ತಾಕೀತು ಮಾಡಿದರು. ಅದರಂತೆ ರಂಗಕ್ಕೆ ಇಳಿದ ಸಿಬಿಐ ಒಂದೊಂದಾಗಿ ಮಾಹಿತಿ ಕಲೆಹಾಕುತ್ತಾ ಸಾಗಿತು. ಜಡ್ಜ್ ಪಟ್ಟಾಭಿ ರಾಮ ರಾವ್ ಪುತ್ರನಿಂದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನೂ ಸಿಬಿಐ ಸ್ವಾಧೀನಪಡಿಸಿಕೊಂಡು ಜಸ್ಟೀಸ್ ಮದನ್ ಲೋಕೂರ್ ಅವರ ಮುಂದೆ ಹರಡಿತು.
ಇದನ್ನು ಕಂಡು ದಂಗಾದ ಜಸ್ಟೀಸ್ ಮದನ್ ಲೋಕೂರ್, ಖುದ್ದು ನ್ಯಾಯಮೂರ್ತಿಯ ವಿರುದ್ಧವೇ ಲಂಚಾರೋಪ ಬಂದಿದ್ದು ಅದು ಸಾಬೀತುಗೊಳ್ಳುವ ಹಂತಕ್ಕೆ ಬರುತ್ತಿದ್ದಂತೆ ಪ್ರಕರಣವನ್ನು ನ್ಯಾಯಮೂರ್ತಿಗಳ ಸಮಿತಿಗೆ (collegium) ಒಪ್ಪಿಸಿದರು.
ನ್ಯಾಯಮೂರ್ತಿಗಳ ಸಮಿತಿಗೆ ಜಡ್ಜ್ ಪಟ್ಟಾಭಿ ರಾಮ ರಾವ್ ಅಬರ ಅವಿನೀತಿ ಮನವರಿಕೆಯಾಗುತ್ತಿದ್ದಂತೆ ಕಳಂಕಿತ ಜಡ್ಜ್ ಪಟ್ಟಾಭಿಯನ್ನು ಮೊದಲು ಅಮಾನತು ಮಾಡಿ, ಪ್ರಕರಣದ ತನಿಖೆ ಕೈಗೊಳ್ಳುವಂತೆ ಗುರುವಾರ ಸಂಜೆ ಸಿಬಿಐಗೆ ಸಮಿತಿ ಆದೇಶಿಸಿತು.
ಈಗ ಲಂಚಾರೋಪ ಬಹಳಷ್ಟು ರುಜುವಾಗಿದ್ದು, ಜಡ್ಜ್ ಪಟ್ಟಾಭಿ ರಾಮ ರಾವ್ ತಮ್ಮ ಜಡ್ಜ್ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಜಡ್ಜ್ ಪಟ್ಟಾಭಿ ರಾಮ ರಾವ್ ಅವರು ತಮ್ಮ ಮನೆ ಮುಂದೆ ಹಾಕಿಕೊಂಡಿದ್ದ ಹೆಸರಿನ ಫಲಕವನ್ನು ಕಿತ್ತು ಹಾಕಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ 'no comments' ಎಂದಿದ್ದಾರೆ.
ಅಂತೂ ಇಂತ ಭ್ರಷ್ಟ ನ್ಯಾಯಾಧೀಶರನ್ನು ಹಿಡಿದಿರುವುದಕ್ಕೆ ಸಂಭ್ರಮಿಸಬೇಕೋ ಅಥವಾ ...ಎಲ್ಲಿಗೆ ಬಂತು ನ್ಯಾಯ ವ್ಯವಸ್ಥೆ ಎಂದು ಪೇಚಾಡಬೇಕೋ?












Click it and Unblock the Notifications