• search
For Quick Alerts
ALLOW NOTIFICATIONS  
For Daily Alerts

  ಮಾವಿನಮರಕ್ಕೇ ವಿವಿಧ ಮಾವಿನಕಾಯಿಗಳ ತೋರಣ

  By * ಪ್ರಸಾದ ನಾಯಿಕ
  |

  ಒಂದೇ ಸೀಸನ್ನಿನಲ್ಲಿ ಒಂದೇ ಮರದಲ್ಲಿ ಒಂದೇ ಬಾರಿಗೆ ಸಾವಿರಾರು ಮಾವಿನ ಕಾಯಿ ಬಿಟ್ಟಿದ್ದರೆ ಅದೊಂದು ದಾಖಲೆ, ಒಂದೇ ಗೊಂಚಲಲ್ಲಿ ನೂರು ಕಾಯಿ ತೂಗಾಡುತ್ತಿದ್ದರೆ ಅದೂ ಕೂಡ ದಾಖಲೆಯೆ. ಅದೇ ಒಂದೇ ಒಂದು ಪುಟ್ಟ ಗಿಡದಲ್ಲಿ ಹನ್ನೆರಡು ವಿವಿಧ ಬಗೆಯ ಮಾವಿನ ಕಾಯಿಗಳು ಬಿಟ್ಟಿದ್ದರೆ? ಆಹಾ ಮಾವಿನಕಾಯಿ ಗಿಡಕ್ಕೆ ವೈವಿಧ್ಯಮಯ ಮಾವಿನ ಕಾಯಿಗಳ ತೋರಣ!


  ಇದು ದಾಖಲೆ ಹೌದೋ ಅಲ್ಲವೋ ತಿಳಿದಿಲ್ಲ, ಆದರೆ ಇಂಥದೊಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲೂಕಿನ, ಅರಳೆದಿಣ್ಣೆ ಗ್ರಾಮದ, ಎಲೆಮರೆಯ ಕಾಯಿಯಂತಿರುವ ರೈತ ಸಿದ್ದರಾಜು. ಒಂದೇ ಗಿಡದಲ್ಲಿ ಹನ್ನೆರಡು ವಿಭಿನ್ನ ಜಾತಿಯ ಮಾವಿನ ಟೊಂಗೆಯ ಕಸಿ ಮಾಡಿ ಯಶಸ್ಸು ಪಡೆದ ಅವರ ಈ ಪ್ರಯತ್ನಕ್ಕೆ ಒಂದು ಸಲಾಂ ಹೇಳಲೇಬೇಕು. ಇದನ್ನು ಸಾಧಿಸುವ ಮುಖಾಂತರ ಜಾತ್ಯತೀತ ಮಾವಿನ ಮರವನ್ನು ಬೆಳೆಸಿದ್ದಾರೆ.

  ನೋಡಲು ಬೃಹತ್ ಮರವೂ ಅಲ್ಲ. ಬಾಲ್ಯಾವಸ್ಥೆ ಮುಗಿದು ಇನ್ನೇನು ಹರೆಯಕ್ಕೆ ಕಾಲಿಟ್ಟಿದೆ ಎಂಬಂತಿಹ ಹನ್ನೆರಡಡಿ ಎತ್ತರದ ಮರದ ಒಂದು ಬದಿಯಲ್ಲಿ 'ಸಿಂಧೂರ' ಮಾವಿನ ಕಾಯಿಗಳ ಗೊಂಚಲು, ಪಕ್ಕದಲ್ಲೇ ತುಂಬಿದ ಗರ್ಭಿಣಿಯಂತಹ 'ಬಾದಾಮಿ', ಅದರ ಮೇಲ್ಗಡೆ ಗಿಣಿ ಮೂಗು ಹೊಂದಿರುವ 'ತೋತಾಪುರಿ', ಸಿಹಿಗೆ ನಾನಾರಿಗೂ ಕಮ್ಮಿಯಿಲ್ಲ ಎಂಬಂತೆ ಧಿಮಾಕಿನಿಂತ ತೂಗುತಿರುವ 'ಕೊಬ್ಬರಿಕಾಯಿ' (ನಾಟಿ ತೋತಾಪುರಿ), ಸಕ್ಕರೆಗಿಂತ ಸಿಹಿಯುಳ್ಳ 'ಸಕ್ಕರೆಗುತ್ತಿ', ಆಹಾ 'ಮಲ್ಲಿಕಾ'ಳ ಸೊಬಗು, ಓಹೋ 'ಬೈಗಂಪಲ್ಲಿ'ಯ ಬೆಡಗು, ಅಲ್ಲಿ ನೋಡು 'ಆಮ್ರಪಾಲಿ', ನನ್ಯಾಕೆ ಬಿಟ್ರಿ ಎಂಬಂತಿಹ 'ದಶರಿ'.

  ಒಣಗುತ್ತಿರುವ ಮಲಗೋಬಾ, ರಸಪುರಿ ಕಸಿಯನ್ನು ಚಿಗುರಿಸಲು ಎಷ್ಟೇ ಹೆಣಗಿದರೂ, ಉಸಿರು ಹಿಡಿದುಕೊಂಡ ಹತ್ತು ಹನ್ನೆರಡು ಬಗೆಯ ವೈವಿಧ್ಯಮಯ ಆಕಾರದ, ವಿಭಿನ್ನ ಜಾತಿಯ ಮಾವಿನ ಕಾಯಿಗಳ ಸಂಭ್ರಮ ಹೇಳತೀರದು. ಮಾವಿನ ಕಾಯಿಗಳ ಸಂಭ್ರಮವೇ ಈ ಬಗೆಯದಾದರೆ ಇನ್ನು ಅವುಗಳನ್ನು ತನ್ನ ಮಕ್ಕಳಂತೆ ಬೆಳೆಸಿ, ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಮಾವಿನ ಮರದ ಮಾಲಿಕ ಸಿದ್ದರಾಜು ಅವರ ಸಂತಸವನ್ನು ಹೇಗೆಂದು ಬಣ್ಣಿಸೋಣ? ಹಿಡಿದ ಯತ್ನವನ್ನು ಬಿಡದೆ ಸತತ ಎರಡು ಮೂರು ವರ್ಷಗಳ ನಂತರ ಸಿದ್ದರಾಜು ಅವರ ಪ್ರಯತ್ನಕ್ಕೆ ಭರ್ತಿ ಫಲ ದೊರೆತಿದೆ.

  ಹಿರಿಯರಿಂದ ಬಂದಂತಹ ಐದು ಎಕರೆ ಜಮೀನಿನಲ್ಲಿ 30 ಮಾವಿನ ಮರ, ನಾಕಾರು ಮೋಸಂಬಿ ಗಿಡ, ಹತ್ತಾರು ಸಪೋಟ ಗಿಡ, ಒಂದೆರಡು ಚಕ್ಕೋತ, ಅಲ್ಲಲ್ಲಿ ಸೀಬೆಕಾಯಿ, ಒಂದಿಷ್ಟು ಜಾಗದಲ್ಲಿ ಭತ್ತ, ಒಂದೆಕರೆ ಜಮೀನಿನಲ್ಲಿ ರಾಗಿ, ಪ್ರಮುಖ ಬೇಸಾಯವಾಗಿ ದೊಡ್ಡ ಮೆಣಸಿನಕಾಯಿ, ಟೊಮೆಟೊ ಮುಂತಾದ ತರಕಾರಿ ಬೆಳೆಯುತ್ತಿರುವ, ಜೊತೆಗೆ ಮಣ್ಣಿನ ಇಟ್ಟಿಗೆ ತಯಾರಿಸುವ ಕಾಯಕಕ್ಕೂ ಕೈಹಾಕಿರುವ ನಲವತ್ತೈದರ ವಯಸ್ಸಿನ ರೈತ ಸಿದ್ದರಾಜು, ಪಿಯುಸಿ ಅವರ ಫ್ಲಾಷ್‌ಬ್ಯಾಕ್ ಕೂಡ ವಿಭಿನ್ನವಾಗಿದೆ.

  1987ರಲ್ಲಿ ಖಾಸಗಿ ಕಂಪನಿಯಲ್ಲಿ ಸಣ್ಣ ಕೆಲಸಕ್ಕಿದ್ದ ಸಿದ್ದರಾಜುವಿಗೆ ಬೇಸಾಯದ ಆಸೆ ಹತ್ತಿಸಿದವರು ಪಿಳ್ಳೆಗೌಡ ಎಂಬುವವರು. 60 ಸಾವಿರ ಸಾಲ ಪಡೆದು ಬೋರ್‌ವೆಲ್ ಹೊಡೆಸಿ, ಬೇಲಿ ಹಾಕಿಸಿ ಬೆಂಗಾಡಿನಂತಿದ್ದ ಜಮೀನಿನಲ್ಲಿ ಕಳೆ ತೆಗೆದು ಬೆಳೆ ಬೆಳೆದವರು ಸಿದ್ದರಾಜು. ಕೃಷಿ ವಿಶ್ವವಿದ್ಯಾಲಯದ ಉತ್ತೇಜನದಿಂದ ಮೀನುಗಾರಿಕೆ, ಹೈನುಗಾರಿಕೆ ಮುಂತಾದ ಕಸಬುಗಾರಿಕೆ ಮಾಡುವಲ್ಲಿ ಸಿದ್ದರಾಜು ಸಿದ್ಧಹಸ್ತರಾಗಿದ್ದಾರೆ. ತೋಟದಲ್ಲಿಯ ಕೊಳದಲ್ಲಿ ಮೀನುಗಾರಿಕೆ ಮಾಡಲು ಪ್ರೋತ್ಸಾಹಿಸಿದ ಮರಿಗೌಡ ಅವರನ್ನು ನೆನೆಯಲು ಸಿದ್ದರಾಜು ಅವರು ಮರೆಯುವುದಿಲ್ಲ.

  ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯ ಎಂಬುದನ್ನು ಮಾಡಿ ತೋರಿಸಿದ್ದಾರೆ ಸಿದ್ದರಾಜು. ಹಾಗೆಯೆ, ಇತರ ರೈತರಿಗೂ ಮಾದರಿಯಾಗಿದ್ದಾರೆ. ಮರದಲ್ಲಿ ಬಿಟ್ಟ ಮಾವಿನಕಾಯಿಗಳನ್ನು ಸಾರಾಸಗಟಾಗಿ ಮಾರಾಟಗಾರರಿಗೆ ಮಾರುವ ಸಿದ್ದರಾಜು ಅವರು ಕಾಯಿಗಳನ್ನು ಹಣ್ಣು ಮಾಡಿ ಮಾರುವುದಿಲ್ಲ ಮತ್ತು ಕಾಯಿಗಳನ್ನು ರಾಸಾಯನಿಕ ಬಳಸಿ ತ್ವರಿತವಾಗಿ ಹಣ್ಣು ಮಾಡುವುದನ್ನೂ ಸಹಿಸುವುದಿಲ್ಲ. ರಾಸಾಯನಿಕ ಬಳಸಿ ಹಣ್ಣು ಮಾಡಿದರೆ ಗ್ರಾಹಕರಿಗೆ ವಿಷ ಉಣಿಸಿದಂತೆ ಎಂಬುದು ಅವರ ಖಚಿತವಾದ ಮಾತು.

  ಅವರ ತೋಟದಲ್ಲೆಲ್ಲ ಸಂಭ್ರಮದಿಂದ ಅಲೆದಾಡಿ, ಸಿದ್ದರಾಜು ಜೊತೆ ಸಂದರ್ಶನ ಮುಗಿಸಿ, ಅವರು ತಾವೇ ಸ್ವತಃ ಮಾಡಿ ತಂದ ಬೈಟೂ ಟೀಯನ್ನು ಹೀರಿ ಹೊರಡಬೇಕೆನ್ನುವ ಹೊತ್ತಿಗೆ ಹನ್ನೆರಡು ವರ್ಷ ಅವರ ಮಗ ಗಣೇಶ್ ಪ್ರಸಾದ್ 'ಯಾವ ಪತ್ರಿಕೆಯಲ್ಲಿ ಲೇಖನ ಬರತ್ತೆ?' ಅಂದ. ಪತ್ರಿಕೆಯಲ್ಲಿ ಅಲ್ಲ ಅಂತರ್ಜಾಲದಲ್ಲಿ ಬರತ್ತೆ ಅಂದಾಗ, ಕೈಗಿತ್ತ ವಿಸಿಟಿಂಗ್ ಕಾರ್ಡ್ ಇಸಿದು, ಈಗಲೇ ನಿಮ್ಮ ವೆಬ್ ಸೈಟ್ ನೋಡ್ತೀನಿ ಅಂತ ಹೊರಡಲು ಅನುವಾದ. ಇಂಟರ್ನೆಟ್ ಇದೆಯಾ ಅಂತ ಮರುಪ್ರಶ್ನೆ ಹಾಕಿದಾಗ, ಮೊಬೈಲ್ ಇದೆಯಲ್ಲ ಅವರ ಫಟಾರನೆ ಉತ್ತರ ಬಿಸಾಕಿದ್ದ, ಅಂಗೈಯಲ್ಲೇ ಅಂತರ್ಜಾಲ ಜಾಲಾಡುತ್ತಿರುವ ಹನ್ನೆರಡರ ಹುಡುಗ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  There are hundreds of varieties of Mangoes in every part of the world. A Progressive farmer in Karnataka has grafted 12 breeds of Mangoes in one tree. Totapuri, Badami, Sakkaregutti, Mallika, Kobbarikayi, Sindhuri, Baigampalli, Amrapali, Dashari, Rasapuri, Banisha, Malagoba. Oneindia reporter Prasad Naik drives down to the dream farm near Nelamangala on NH4 near Bangalore. An exclusive interview with the Mango maverick Siddaraju.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more