ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ

By * ಪ್ರಸಾದ ನಾಯಿಕ
|
Google Oneindia Kannada News

Congratulations Shashikala
ಸಾಹಿತ್ಯ ಸಂಸ್ಕೃತಿಯ ನೆಲೆವೀಡಾಗಿರುವ ಧಾರವಾಡ ಶೈಕ್ಷಣಿಕವಾಗಿ ಯಾವತ್ತೂ ಹಿಂದೆ ಬಿದ್ದಿಲ್ಲ. ಹಲವಾರು ವರ್ಷಗಳಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಧಾರವಾಡ ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದೆ. ಈ ವರ್ಷ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ, ಬಡತನದ ಹಿನ್ನೆಲೆಯಿಂದ ಬಂದು ಅರಳಿರುವ ಕುಸುಮ ಕೂಡ ಧಾರವಾಡದ ಕೊಡುಗೆಯೆ.

ಆಕೆಯೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಧಾರವಾಡದ ಕೀರ್ತಿಪತಾಕೆಯನ್ನು ಹಾರಿಸಿರುವ ಹುಡುಗಿ ಶಶಿಕಲಾ ಶಿವಾನಂದ ಡಫಳಿ. ಕಿತ್ತುತಿನ್ನುವ ಬಡತನದ ಮಧ್ಯೆ ಬೆಳೆದು, ನಿತ್ಯವೂ ಮೂರರಿಂದ ನಾಲ್ಕು ಕಿ.ಮೀ ನಡೆದು, ಕಷ್ಟಪಟ್ಟು ಓದಿ ಈಗ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾಳೆ. ತನ್ನ ಸಾಧನೆಯ ಹಾದಿಯನ್ನು ಒನ್ಇಂಡಿಯಾ ಕನ್ನಡದ ಜೊತೆ ಶಶಿಕಲಾ ಹಂಚಿಕೊಂಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದ ಹುಡುಗಿ ಶಶಿಕಲಾ ಶಿವಾನಂದ ಡಫಳಿ. ಈಕೆ ಪ್ರತಿನಿತ್ಯ ತನ್ನ ಊರಿನಿಂದ ಮೂರರಿಂದ ನಾಲ್ಕು ಕಿ.ಮೀ ಚಲಿಸಿ ಕುಬಿಹಾಳದ ಶ್ರೀ ಉಜ್ಜಯನಿ ಸಿದ್ಧಲಿಂಗ ಜಗದ್ಗುರು ಪದವಿ ಪೂರ್ವ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡುತ್ತಿದ್ದಳು. ಬಡತನದಲ್ಲಿಯೇ ಬೆಳೆದಿರುವ ಈ ವಿದ್ಯಾರ್ಥಿನಿ ತನ್ನ ಕಾಲೇಜಿಗೆ ಮತ್ತು ತಂದೆ-ತಾಯಿಗೆ ಕೀರ್ತಿ ತಂದಿದ್ದಾಳೆ.

ಸಾಧನೆಯ ಹಾದಿ : ರೈತ ಶಿವಪ್ಪ ಫಕೀರಪ್ಪನವರ ಭರ್ತಿ ಕುಟುಂಬದ ಎಂಟು ಮಕ್ಕಳಲ್ಲಿ ಆರನೇಯವಳೇ ಶಶಿಕಲಾ. ಮೂವರು ಅಕ್ಕಂದಿರು, ಇಬ್ಬರು ಅಣ್ಣಂದಿರು, ಒಬ್ಬ ತಮ್ಮ, ಮತ್ತು ಓರ್ವಳು ತಂಗಿ. ಮನೆಯಲ್ಲಿ ಬಡತನವಿದ್ದರೂ ಅಮ್ಮನ ಪ್ರೋತ್ಸಾಹದಿಂದಾಗಿ ಓದಬೇಕೆಂಬ ಹಂಬಲಕ್ಕೆ ಯಾವತ್ತೂ ತಡೆಯಾಗಲಿಲ್ಲ.

ಶಶಿಕಲಾಳ ಓದುವ ಹಂಬಲಕ್ಕೆ ನೀರೆರೆದವರು ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್. ಹಿರೇಮಠ ಅವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಉಪನ್ಯಾಸಕರು ಶಶಿಕಲಾಳಲ್ಲಿದ್ದ ಪ್ರತಿಭೆಯನ್ನು ಆರಂಭದಲ್ಲಿಯೇ ಗುರುತಿಸಿ ಆಕೆಯನ್ನು ಹೆಚ್ಚಿಗೆ ಓದಲು ಹುರುದುಂಬಿಸಿದರು. ಅವರ ಪ್ರೋತ್ಸಾಹವಿಲ್ಲದಿದ್ದರೆ ರಾಜ್ಯಕ್ಕೇ ಅತಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳುತ್ತಾಳೆ ಶಶಿಕಲಾ.

ಪ್ರಾಂಶುಪಾಲರ ಸಂತಸ : ಶಶಿಕಲಾ ರಾಜ್ಯಕ್ಕೆ ಪ್ರಥಮ ಬಂದಿರುವುದು ಮಾತ್ರವಲ್ಲ, ಉಜ್ಜಯಿನಿ ಸಿದ್ದಲಿಂಗ ಜಗದ್ಗುರು ಕಾಲೇಜಿಗೆ ಪ್ರಪ್ರಥಮ rank ದಕ್ಕಿಸಿಕೊಟ್ಟಿದ್ದಾಳೆ. ಕಾಲೇಜಿಗೆ ಕೀರ್ತಿ ತಂದ ಶಶಿಕಲಾ ಬಗ್ಗೆ ಪ್ರಾಂಶುಪಾಲ ಹಿರೇಮಠ ಅವರಿಗೆ ಭಾರೀ ಹೆಮ್ಮೆ. ಆಕೆಯಲ್ಲಿದ್ದ ಅಗಾಧ ಓದಿನ ಹಸಿವನ್ನು ಗುರುತಿಸಿ ವಿಶೇಷ ತರಗತಿ ಮತ್ತು ಪರೀಕ್ಷೆಗೆ ತಯಾರಿ ನಡೆಸಲು ವಿಶೇಷ ಕಾಳಜಿ ವಹಿಸಲಾಗುತ್ತಿತ್ತು ಎಂದು ಸಂಸತದಿಂದ ತಮ್ಮ ಅಭಿಪ್ರಾಯವನ್ನು ಕನ್ನಡ ಪೋರ್ಟಲ್ ಜೊತೆ ಹಂಚಿಕೊಂಡರು.

ಉಪನ್ಯಾಸಕರ ಹುರಿದುಂಬಿಕೆಯಿಂದಾಗಿ ಶಶಿಕಲಾ ತಾನು ರ‍್ಯಾಂಕ್ ಬರಲೇಬೇಕು ಎಂಬ ಹಠದಿಂದ ನಿತ್ಯವೂ 7 ರಿಂದ 8 ಗಂಟೆ ಬಿಡದೇ ಅಭ್ಯಾಸ ಮಾಡುತ್ತಿದ್ದಳು. ಅಮ್ಮನ ಹಾರೈಕೆ ಅಪ್ಪನ ಬಯಕೆ ಕೊನೆಗೂ ಈಡೇರಿಬಿಟ್ಟಿತು. ತಾನು ಅಂದುಕೊಂಡದ್ದನ್ನು ಶಶಿಕಲಾ ಸಾಧಿಸಿಯೇಬಿಟ್ಟಳು. ರಾಜ್ಯಕ್ಕೆ ಮೊದಲ ಸ್ತಾನ ಬಂದಿರುವುದು ಎಲ್ಲಿಲ್ಲದ ಸಂತಸ ಮೂಡಿಸಿದೆ ಕಾಲೇಜು ಉಪನ್ಯಾಸಕರು ಧೈರ್ಯ ತುಂಬಿದ್ದು, ತಂದೆ-ತಾಯಿ ಪ್ರೋತ್ಸಾಹ ಹಾಗೂ ಕಠಿಣ ಪರಿಶ್ರಮವೇ ಈ ಸಾಧನೆ ಕಾರಣ ಅಂತಾಳೆ ಶಶಿಕಲಾ.

ಐಎಎಸ್ ಗುರಿ : ಮುಂದೆ ಐಎಎಸ್ ಅಧಿಕಾರಿ ಆಗುವ ಕನಸನ್ನು ಕಣ್ತುಂಬ ತುಂಬಿಕೊಂಡಿದ್ದಾಳೆ ಶಶಿಕಲಾ. ಆದ್ರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಆಕೆಯ ಆಸೆಗೆ ತಣ್ಣೀರೆರಚಲು ಕಾದು ಕುಳಿತಿದೆ. ಬಡತನ ಮೆಟ್ಟಿ ಪ್ರಥಮ ಸ್ಥಾನ ಗಳಿಸಿರುವ ಶಶಿಕಲಾಗೆ ಇದೊಂದು ಮೈಲಿಗಲ್ಲು ದಾಟದೆ ಇರುತ್ತಾಳೆಯೆ? ಶಶಿಕಲಾಳ ತಂದೆಯನ್ನು ಅನಾರೋಗ್ಯ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಒಂದೆಡೆ ಅಗ್ರಸ್ಥಾನ ಪಡೆದ ಖುಷಿ, ಇನ್ನೊಂದೆಡೆ ತಂದೆಯ ಅನಾರೋಗ್ಯದ ಚಿಂತೆ.

ಒಟ್ಟಿನಲ್ಲಿ ಬಡತನದಲ್ಲಿಯೇ ಬೆಂದು ನಿತ್ಯವೂ ನಡೆದು ಕಾಲೇಜು ಹೋಗಿ ಓದಿ ಇವತ್ತು ರಾಜ್ಯದ ಗಮನ ಸೆಳೆದಿದ್ದಾಳೆ. ಎಲ್ಲರಿಗಿಂತಲೂ ಹಳ್ಳಿಯ ಹುಡುಗಿ ಯಾವುದರಲ್ಲಿಯೂ ಹಿಂದಿಲ್ಲ ಎಂಬುದನ್ನು ಇಡೀ ನಾಡಿಗೆ ತೋರಿಸಿದ್ದಾಳೆ. ಐಎಎಸ್ ಅಧಿಕಾರಿಯಾಗುವ ಆಸೆಗೆ ಬಡತನ ಅಡ್ಡ ಬರದೆ ಇರಲಿ ಎನ್ನುವುದು ನಮ್ಮ ಆಸೆ. ಈ ಆಸೆಯ ಮೊಳಕೆ ಹೆಮ್ಮರವಾಗಿ ಬೆಳೆಯಬೇಕಿದ್ದರೆ ಶಶಿಕಲಾಗೆ ಹಣಕಾಸು ಸಹಾಯದ ಅಗತ್ಯವಿದೆ. ಸಾಧ್ಯವಿದ್ದರೆ 89708 23023 ನಂಬರಿಗೆ ಕರೆ ಮಾಡಿರಿ ಸಾಧ್ಯವಾದಷ್ಟು ಸಹಾಯ ಮಾಡಿರಿ. ವಿಳಾಸ ಬೇಕಿದ್ದರೆ ಇಲ್ಲಿದೆ : ಶಿವಪ್ಪ ಫಕೀರಪ್ಪ ಡಫಳಿ, ಗುರುವಿನಹಳ್ಳಿ, ತಾ: ಕುಂದಗೋಳ, ಪೋಸ್ಟ್ : ಮಳಲಿ, ಜಿಲ್ಲೆ : ಧಾರವಾಡ.

English summary
Shashikala Dafali, the 1st Rank holder in 2nd PUC Arts section speaks to Oneindia-Kannada about her success. The lass from Dharwad, though hails from poor family never stopped dreaming and realized it through hard work and parents' blessings. Oneindia-Kannada wishes her all the best.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X