ಸೋನಿಯಾ ಫೋಟೊ: ಬಿಜೆಪಿಗೆ ಯಡಿಯೂರಪ್ಪ ಶಾಕ್

ಏನಪಾ ಅದು ಯಡಿಯೂರಪ್ಪ ರಗಳೆ ಅಂದರೆ ಗೆಳೆಯ ಲೆಹರ್ ಸಿಂಗ್ ಒಡೆತನದ ಬೃಹತ್ ಕಟ್ಟಡದಲ್ಲಿ ಯಡಿಯೂರಪ್ಪ ಚಾಪೆ ಹಾಸಿಕೊಂಡು ಕುಳಿತಿದ್ದಾರೆ. ಬನ್ನಿ ಬನ್ನಿ ಇದೇ ನನ್ನ ಕಚೇರಿ. ಅದೆಲ್ಲ ಸುಮ್ಮನೆ (ಶೇಷಾದ್ರಿಪುರಂನಲ್ಲಿರುವ ಬಿಜೆಪಿಯದ್ದು) ಅಂತ ರಾಗವಾಗಿ ಹೇಳಿದ್ದಾರೆ. ಮಲ್ಲೇಶ್ವರಂ 17ನೇ ಕ್ರಾಸ್ ನಲ್ಲಿ 'ಜನಸಂಪರ್ಕ' ಕಚೇರಿಯನ್ನು ಕೆಲವೇ ಕ್ಷಣಗಳ ಹಿಂದೆ ಸ್ವತಃ ಯಡಿಯೂರಪ್ಪ ಅವರೇ ಉದ್ಘಾಟಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾಗಿ ಬಿಜೆಪಿ ವರಿಷ್ಠರು ಹೇಳಿದ್ದರು. ಆದರೆ ಅವರು ಆ ಮಾತು ನೆರವೇರಿಸಿಲ್ಲ. ಆದ್ದರಿಂದ ಪಕ್ಷಕ್ಕೆ ಮುಜುಗುರವಾಗಬಾರದು ಎಂದು ನಾನೇ ಒಂದು ಕಚೇರಿ ತೆಗೆದು ಜನಸಂಪರ್ಕಕ್ಕೆ ನಿನ್ನೆಯಷ್ಟೇ ನಿರ್ಧರಸಿದೆ ಎಂದಿದ್ದಾರೆ.
ಸೋನಿಯಾಗೆ ಮಣೆ ಅಡ್ವಾಣಿಗೆ ಕೊಕ್: ಆದರೆ ಅದಕ್ಕೂ ಮುನ್ನ, ನಿನ್ನೆ ಸಕಲ ಸಿಂಗಾರಗೊಂಡು ಲಕಲಕ ಹೊಳೆಯುತ್ತಿದ್ದ 'ಜನಸಂಪರ್ಕ'ದೊಳಕ್ಕೆ ಹೆಜ್ಜೆಯಿಟ್ಟ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ, ನಿತಿನ್ ಗಡ್ಕರಿ ಅವರ ಫೋಟೋಗಳನ್ನು ಗೋಡೆಗೆ ನೇತುಹಾಕಿದ್ದಾರೆ. ಅಪ್ಪಿತಪ್ಪಿಯೂ ಆಡ್ವಾಣಿ ಅವರ ಫೋಟೊ ಹಾಕುವ ಉಸಾಬರಿಗೆ ಹೋಗಿಲ್ಲ. ಆದರೆ ಮಧ್ಯೆ ಸೋನಿಯಾ ಗಾಂಧಿ ಅವರ ಫೋಟೋವನ್ನು prominent ಆಗಿ ಎದ್ದು ಕಾಣುವಂತೆ ಹಾಕಿದ್ದಾರೆ.
ಅದು ಮೈಸೂರಿನಲ್ಲಿ ನಡೆದ ಇನ್ಫೋಸಿಸ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಷಣ ಮಾಡುತ್ತಿರುವ, ಸೋನಿಯಾ ಗಾಂಧಿ ನಾರಾಯಣ ಮೂರ್ತಿ, ವೇದಿಕೆ ಮೇಲಿರುವ ಫೋಟೊ. ಜತೆಗೆ ತಾವು ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಕಚೇರಿಯಲ್ಲಿ ಹಾಕಿದ್ದ ಫೋಟೋಗಳನ್ನು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ತೆಗೆದುಹಾಕಲಾಗಿತ್ತು.
ಅವುಗಳಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಪ್ರಧಾನಿ ಮನಮೋಹನ್ ಸಿಂಗ್, ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರ ಫೋಟೋಗಳನ್ನು ತಂದು ಈ ಹೊಸ ಕಚೇರಿಯಲ್ಲಿ ಹಾಕಿದ್ದಾರೆ.
ಆ ಘಳಿಗೆಯಲ್ಲೇ... ಅಯ್ಯೋ ಎನೋ ಅಪಚಾರ ಆಗಿಹೋಗಿದೆ ಎಂದು ಆತಂಕ ವ್ಯಕ್ತಪಡಿಸಿ, ಸೋನಿಯಾ ಗಾಂಧಿ ಫೋಟೊ ತೆಗೆದುಹಾಕಿದರು ಅನ್ನಿ. ಆದರೆ ಆಷ್ಟೊತ್ತಿಗಾಗಲೇ ಯಾರಿಗೆ ಏನು ಸಂದೇಶ ತಲುಪಿಸಬೇಕಿತ್ತೋ ಅದನ್ನೂ ಕರಾರುವಕ್ಕಾಗಿ ತಲುಪಿಸಿದ ಸಂತೃಪ್ತಿಯಲ್ಲಿ ಯಡಿಯೂರಪ್ಪ ಒಂದು ನಗೆ ನಕ್ಕಿದ್ದಾರೆ. ಸಿಬಿಐನಿಂದ ಬಂಧನ ಭೀತಿಯನ್ನು ತಪ್ಪಿಸಿಕೊಳ್ಳಲು ಯಡಿಯೂರಪ್ಪ ಉರುಳಿಸಿದ ಒಂದು ದಾಳ ಇದಾಗಿದೆ.












Click it and Unblock the Notifications