ಯಡಿಯೂರಪ್ಪ ಬಂಧನ ಸಾಧ್ಯತೆ ಕಮ್ಮಿ: ಕಾನೂನು ತಜ್ಞರು

ಸಿಬಿಐ ಕಾರ್ಯವಿಧಾನವನ್ನು ಸ್ವತಃ ಕೋರ್ಟ್ ಕೂಡಾ ಪ್ರಶ್ನಿಸುವುದಿಲ್ಲ. ಯಡಿಯೂರಪ್ಪ ಅವರ ಪ್ರಕರಣದ ಮೇಲೆ ಸುಪ್ರೀಂಕೊರ್ಟ್ ನಿಗಾ ಇಟ್ಟಿದ್ದರೂ ಸಿಬಿಐ ತನ್ನಿಷ್ಟದ್ದಂತೆ ತನಿಖೆ ನಡೆಸಲು ಸರ್ವಸ್ವತಂತ್ರವಾಗಿದೆ. ಆದರೆ, ನಿಯಮಿತ ಅವಧಿಯಲ್ಲಿ ತನಿಖೆ ಪ್ರಗತಿ ಹಾಗೂ ತೆಗೆದುಕೊಂಡ ನಿರ್ಣಯಗಳಿಗೆ ಸಮರ್ಥನೆ ನೀಡಬೇಕಾಗುತ್ತದೆ.
ಹಠಾತ್ ದಾಳಿ ನಿರೀಕ್ಷಿತ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ ರೀತಿಯಲ್ಲೇ ಬುಧವಾರ(ಮೇ.16) ಯಡಿಯೂರಪ್ಪ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇದರ ಮೂಲ ಉದ್ದೇಶ ಸಾಕ್ಷಿ ನಾಶ ತಡೆಗಟ್ಟುವುದು. ಸಿಬಿಐ ತಂಡ ಎಫ್ ಐಆರ್ ದಾಖಲಿಸಿದ ಮೇಲೆ ಒಂದು ವಾರದೊಳಗೆ ಯಾವುದೇ ಸಂದರ್ಭದಲ್ಲಿ ದಾಳಿ ಮಾಡುವ ನಿರೀಕ್ಷೆಯಿತ್ತು. ಆದರೆ, ಮರುದಿನವೇ ದಾಳಿ ಮಾಡಿರುವುದು ಹಲವರಿಗೆ ಅಚ್ಚರಿ ಮೂಡಿಸಿರುವುದು ನಿಜ.
ಬಂಧನ ಸಾಧ್ಯತೆ ಕಮ್ಮಿ: ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಹೈಕೋರ್ಟ್ ನಿಂದ ಕ್ಲೀನ್ ಚಿಟ್ ಪಡೆದಿರುವುದು ಅವರ ಬಂಧನವನ್ನು ತಡೆಗಟ್ಟಬಹುದು. ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಒಮ್ಮೆ ಜೈಲುವಾಸ ಅನುಭವಿಸಿ ಬಂದಿರುವುದರಿಂದ ಸಾಕ್ಷ್ಯನಾಶ, ಬೆದರಿಕೆ, ತನಿಖೆಗೆ ಅಡ್ಡಿ ಮುಂತಾದ ದುಷ್ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂಬ ನಂಬಿಕೆ ಮೇರೆಗೆ ಸಿಬಿಐ ಸದ್ಯಕ್ಕೆ ಬಂಧನವನ್ನು ಮುಂದೂಡಬಹುದು. ಆದರೆ, ಮೊದಲೇ ಹೇಳಿದಂತೆ ಸಿಬಿಐ ನಡೆ ಬಗ್ಗೆ ಯಾರೂ ಊಹಿಸಲಾಗದು.
ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಬಿಟ್ಟು ಉಳಿದವರನ್ನು ಬಂಧಿಸಿ ಶಾಕ್ ನೀಡಿದರೂ ಅಚ್ಚರಿ ಏನಿಲ್ಲ. ಅಥವಾ ಜಗನ್ ಮೋಹನ್ ರೆಡ್ಡಿ ಪ್ರಕರಣದಂತೆ ಆರೋಪಿ ನಂ.1 ಯಡಿಯೂರಪ್ಪ ಅವರನ್ನು ಬಂಧಿಸದೇ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯೂ ಇದೆ. ಯಾವುದಕ್ಕೂ ಕಾದು ನೋಡೋಣ...
ಕೋರ್ಟ್ ಪಾತ್ರ: ಬಂಧನ ಭೀತಿ ಎದುರಾದರೆ ಯಡಿಯೂರಪ್ಪ ಅವರು ಸೆಷನ್ಸ್ ಕೋರ್ಟ್ ನಲ್ಲಿ ಅಥವಾ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು. ಅಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್ ಗೆ ಮೊರೆ ಹೋಗಬಹುದು. ಹೈಕೋರ್ಟ್ ನಲ್ಲೂ ಜಾಮೀನು ಸಿಗದಿದ್ದರೆ ಸುಪ್ರೀಂಕೋರ್ಟಿಗೂ ಹೋಗಹುದು.
ಇನ್ನೊಂದು ಮಹತ್ವದ ವಿಷಯ ಎಂದರೆ, ಈ ಪ್ರಕರಣದ ತನಿಖೆ ನೇರವಾಗಿ ಸುಪ್ರೀಂಕೋರ್ಟ್ ಅರಣ್ಯ ಪೀಠದ ಕಣ್ಗಾವಲಿನಲ್ಲಿ ನಡೆಯುತ್ತಿದ್ದರೂ ಸೆಷನ್ಸ್ ಕೋರ್ಟ್ ಯಡಿಯೂರಪ್ಪ ಅವರಿಗೆ ಜಾಮೀನು ನೀಡುವ ಅಧಿಕಾರ ಹೊಂದಿರುತ್ತದೆ. ನಿರೀಕ್ಷಣಾ ಜಾಮೀನು ಸಿಗದ ಪಕ್ಷದಲ್ಲಿ ಸಿಬಿಐನಿಂದ ಯಡಿಯೂರಪ್ಪ ಬಂಧನವಾದರೆ, ರೆಗ್ಯುಲರ್ ಜಾಮೀನಿಗೆ ಮೇಲ್ಕಂಡ ಕ್ರಮದಲ್ಲೇ ಅರ್ಜಿ ಸಲ್ಲಿಸಬಹುದು.












Click it and Unblock the Notifications