ಬಿಜೆಪಿ ಬಿಕ್ಕಟ್ಟು; ಬಿಎಸ್‌ವೈ ಓಲೈಕೆ ಶುರು

ಇನ್ನು ದೆಹಲಿಯಿಂದ ಬಿಜೆಪಿ ವರಿಷ್ಠರು ನಿರಂತರವಾಗಿ ಯಡಿಯೂರಪ್ಪ ಅವರನ್ನು ಸಂಪರ್ಕಿಸುತ್ತಿದ್ದಾರೆ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಯಡಿಯೂರಪ್ಪ ಅವರನ್ನು ಸಮಾಧಾನಪಡಿಸುತ್ತಿದ್ದಾರೆ.
ಸನ್ಮಾನ್ಯ ಯಡಿಯೂರಪ್ಪ ಅವರದು ಮಗುವಿನ ಮನಸ್ಸು ಎಂದೇ ಮುಖಃಸ್ತುತಿ ಆರಂಭಿಸಿರುವ ಈಶ್ವರಪ್ಪ, ಬಿಎಸ್‌ವೈ ಅವರನ್ನು ಪಕ್ಷ/ ಹೈಕಮಾಂಡ್ ಎಂದು ಕೈಬಿಟ್ಟಿಲ್ಲ. ಅದೂ ಸಿಬಿಐ ತನಿಖೆ ಎದುರಾಗಿರುವ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ನಾವಿದ್ದೇವೆ. ಅದು ಕಾನೂನು ನೆರವಾದರೂ ಆಗಬಹುದು ಅಥವಾ ನೈತಿಕ ಸ್ಥೈರ್ಯವಾದರೂ ಆಗಬಹುದು ನಾವು ಅವರ ಜತೆಗಿದ್ದೇವೆ ಎಂದು ಹೇಳಿದ್ದಾರೆ. ಈಗ ಉದ್ಭವವಾಗಿರುವ ಬಿಕ್ಕಟ್ಟು ಶಮನವಾಗಲಿದೆ. ಬಿಎಸ್‌ವೈ ಆವೇಶ ಶಾಂತವಾಗಲಿದೆ ಎಂದು ಅವರು ಅತೀವ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸದಾನಂದ ಗೌಡರು ನವದೆಹಲಿಯಿಂದ ಇದೀಗ ತಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ದು, ಯಡಿಯೂರಪ್ಪ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿಂಡರಿಸಿಕೊಂಡು ಸೀದಾ ತಮ್ಮ ಕಾರಿನೊಳಕ್ಕೆ ಸೇರಿಕೊಂಡರು.
ಇದೇ ವೇಳೆ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸದತ್ತ ಅವರ ಬೆಂಲಿಗ ಶಾಸಕರು, ಸಂಸದರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ಮಹತ್ತರವಾದ ರಾಜಕೀಯ ಘಟನೆಗಳು ನಡೆಯಲಿವೆ ಎಂದು ರಾಜಕೀಯ ಕುತೂಹಲಿಗಳೂ ರೇಸ್ ಕೋರ್ಸ್ ರಸ್ತೆಯತ್ತ ಹೆಜ್ಜೆ ಹಾಕಿದ್ದಾರೆ.












Click it and Unblock the Notifications