ಜಗನ್ ಬ್ಯಾಂಕ್ ಅಕೌಂಟ್ ಜಪ್ತಿ, ಸಿಬಿಐ ಸಮರ್ಥನೆ

ಸಾಕ್ಷಿ ಡೈಲಿ, ಸಾಕ್ಷಿ ಟಿವಿ ಮತ್ತು ಜನನಿ ಇನ್ಫ್ರಾ ಕಂಪನಿಗಳ ಬ್ಯಾಂಕ್ ಖಾತೆ ಜಪ್ತಿ ಮಾಡಿದ ನಂತರ ಮೊದಲ ಬಾರಿಗೆ ಸಿಬಿಐ ತಂಡ ತನ್ನ ದಾಳಿಯ ಬಗ್ಗೆ ವಿವರಣೆ ನೀಡಿದೆ.
ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳದಿದ್ದರೆ ಬಂಡವಾಳ ಹೂಡಿಕೆದಾರರ ಹೆಣ ಬೀಳುತ್ತಿತ್ತು. ಜಗನ್ ತನ್ನ ಕಂಪನಿಗಳ ಷೇರುದಾರರು, ಬಂಡವಾಳ ಹೂಡಿಕೆದಾರರನ್ನು ಬೆದರಿಸಿ ಮಾಧ್ಯಮ ಸಂಸ್ಥೆಗೆ ಹಣ ಹಾಕುವಂತೆ ಪೀಡಿಸುತ್ತಿದ್ದ ಎಂದು ಸಿಬಿಐ ಹೇಳಿದೆ.
ಜಗನ್ ಅವರ ಆಡಿಟರ್ ವಿಜಯ ಸಾಯಿ ರೆಡ್ಡಿ ಅವರು ಎನ್ನಾರೈ ಮಾಧವ್ ಚಂದ್ರನ್ ಎಂಬುವವರಿಗೆ 39.60 ಕೋಟಿ ರು ನೀಡುವಂತೆ ಬೆದರಿಕೆ ಒಡ್ಡಿದ್ದರು. ಅನೇಕ ಭ್ರಷ್ಟಾಚಾರ ವಿಧಾನಗಳಿಂದ ಹಣ ಸಂಗ್ರಹಿಸಿ ಮಾಧ್ಯಮ ಸಂಸ್ಥೆ ನಿರ್ವಹಿಸಲಾಗುತ್ತಿತ್ತು ಎಂದು ಸಿಬಿಐ ಹೇಳಿದೆ.
ಪತ್ರಕರ್ತರ ಖಂಡನೆ: ಸಾಕ್ಷಿ ಪತ್ರಿಕೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದನ್ನು ಆಂಧ್ರಪ್ರದೇಶ ಪತ್ರಕರ್ತರ ಒಕ್ಕೂಟ ಖಂಡಿಸಿದೆ. ಸಾಕ್ಷಿ ಪತ್ರಿಕೆಗೆ ಸರ್ಕಾರಿ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿರುವುದನ್ನು ಸಹ ಒಕ್ಕೂಟ ವಿರೋಧಿಸಿದೆ.
ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ದೇಶದ್ರೋಹ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಲ್ಲ. ಪತ್ರಿಕೆ ಪ್ರತಿದಿನ ಸುಮಾರು 15 ದಶಲಕ್ಷ ಮನೆಗಳು ತಲುಪುತ್ತದೆ. ಒಂದು ಮಾಧ್ಯಮ ಸಂಸ್ಥೆ ಗುರಿಯಾಗಿಸುವುದು ತಪ್ಪು. ಇದು ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಕಪ್ಪು ದಿನ ಎಂದು ಸಾಕ್ಷಿ ಪತ್ರಿಕೆ ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. Support Sakshi - Save Democracy ಅಭಿಯಾನಕ್ಕೆ ಫೇಸ್ ಬುಕ್ ನಲ್ಲಿ 3,500ಕ್ಕೂ ಅಧಿಕ ಹಿಂಬಾಲಕರಿದ್ದಾರೆ.












Click it and Unblock the Notifications